ಕಾಶ್ಮೀರ ಪ್ರವೇಶಿಸಿದ ಭಾರತ ಜೋಡೊ ಯಾತ್ರೆ: ಈ ಚಳಿಗಾಲದಲ್ಲಿ ಮೊದಲ ಬಾರಿ ಜಾಕೆಟ್ ನಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ

Update: 2023-01-20 14:43 GMT

ಶ್ರೀನಗರ,ಜ.20: ಅಂತಿಮ ಹಂತಕ್ಕಾಗಿ ಗುರುವಾರ ಸಂಜೆ ಜಮ್ಮು-ಕಾಶ್ಮೀರವನ್ನು ಪ್ರವೇಶಿಸಿದ ಭಾರತ ಜೋಡೊ ಯಾತ್ರೆ ಶುಕ್ರವಾರ ಬೆಳಿಗ್ಗೆ ಕಥುವಾದ ಹಾಟಲಿ ಮೋಡ್ನಿಂದ ಪುನರಾರಂಭಗೊಂಡಾಗ ಅದರ ನೇತೃತ್ವವನ್ನು ವಹಿಸಿಕೊಂಡಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅಚ್ಚರಿಗೆ ಕಾರಣರಾದರು.

ತೀವ್ರ ಚಳಿಯಲ್ಲಿಯೂ ಉತ್ತರ ಭಾರತದಾದ್ಯಂತ ಕೇವಲ ಟಿ-ಶರ್ಟ್ ಧರಿಸಿ ಪಾದಯಾತ್ರೆ ನಡೆಸಿದ್ದ ರಾಹುಲ್ ಶುಕ್ರವಾರ ಮೊದಲ ಬಾರಿಗೆ ಜಾಕೆಟ್ನಲ್ಲಿ ಕಾಣಿಸಿಕೊಂಡಿದ್ದರು. ಜಮ್ಮುವಿನ ಹಲವಾರು ಭಾಗಗಳಲ್ಲಿ ಸುರಿಯುತ್ತಿರುವ ಮಂಜು ರಾಹುಲ್ ಜಾಕೆಟ್ ಧರಿಸಲು ಕಾರಣವಾಗಿತ್ತು ಎಂದು ಹೇಳಲಾಗಿದ್ದರೂ ಬಳಿಕ ಅವರು ಜಾಕೆಟ್ ತೆಗೆದು ತನ್ನ ಮಾಮೂಲಿ ಟಿ-ಶರ್ಟ್ನಲ್ಲಿಯೇ ಯಾತ್ರೆಯನ್ನು ಮುಂದುವರಿಸಿದರು.

125 ದಿನಗಳ ಕಾಲ 3,400 ಕಿ.ಮೀ.ಪಾದಯಾತ್ರೆಯಲ್ಲಿ ಮೈ ಕೊರೆಯುವ ಚಳಿಯಲ್ಲಿಯೂ ರಾಹುಲ್ ಕನಿಷ್ಠ ಉಡುಪುಗಳನ್ನು ಧರಿಸಿದ್ದು ಹಲವರ ಕುತೂಹಲ ಮತ್ತು ಮೆಚ್ಚುಗೆಗೆ ಪಾತ್ರವಾಗಿದ್ದರೆ ವಿರೋಧ ಪಕ್ಷಗಳು ಟೀಕಿಸುತ್ತಲೇ ಇದ್ದವು. ತೀರ ಚಳಿ ಎನ್ನಿಸಿದರೆ ಹೆಚ್ಚು ಬಟ್ಟೆ ಧರಿಸುವುದಾಗಿ ರಾಹುಲ್ ಹೇಳಿದ್ದರೂ ಈವರೆಗೆ ಅದು ಆಗಿರಲಿಲ್ಲ. ರಾಹುಲ್ ಜ.25ರಂದು ಜಮ್ಮು-ಕಾಶ್ಮೀರದ ರಂಬಾನ್ ಜಿಲ್ಲೆಯ ಬನಿಹಾಲ್ನಲ್ಲಿ ರಾಷ್ಟ್ರಧ್ವಜವನ್ನು ಆರೋಹಿಸಲಿದ್ದು,ಯಾತ್ರೆಯು ಜ.27ರಂದು ಅನಂತನಾಗ್ ಮೂಲಕ ಶ್ರೀನಗರವನ್ನು ಪ್ರವೇಶಿಸಲಿದೆ.

ಇಂದು ಬೆಳಿಗ್ಗೆ ಪುನರಾರಂಭಗೊಂಡ ಯಾತ್ರೆಗೆ ಭಾರೀ ಭದ್ರತೆಯನ್ನು ಒದಗಿಸಲಾಗಿದೆ. ಪೊಲೀಸ್ ಮತ್ತು ಅರೆಸೇನಾ ಪಡೆಗಳು ರಾಹುಲ್ ಮತ್ತು ಅವರ ಸಹಯಾತ್ರಿಗಳನ್ನು ಸುತ್ತುವರಿದಿದ್ದು,ಜಾಮರ್ಗಳನ್ನೂ ಅಳವಡಿಸಲಾಗಿದೆ. ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಯಾತ್ರೆಯನ್ನು ನಡೆಸದಂತೆ ಭದ್ರತಾ ಏಜೆನ್ಸಿಗಳು ರಾಹುಲ್ಗೆ ಈ ಹಿಂದೆ ಸೂಚಿಸಿದ್ದವು.

ಪರಮವೀರ ಚಕ್ರ ಪುರಸ್ಕೃತ ಕ್ಯಾ.ಬನಾ ಸಿಂಗ್ ಸೇರಿದಂತೆ ಹಲವಾರು ಶೌರ್ಯ ಪ್ರಶಸ್ತಿ ವಿಜೇತರು ಶುಕ್ರವಾರ ಭಾರತ ಜೋಡೊ ಯಾತ್ರೆಯಲ್ಲಿ ಭಾಗಿಯಾಗಿದ್ದರು. ಬೆಳಿಗ್ಗೆ ಏಳು ಗಂಟೆಗೆ ಆರಂಭವಾಗಬೇಕಿದ್ದ ಯಾತ್ರೆ ವಿಪರೀತ ಮಂಜು ಸುರಿಯುತ್ತಿದ್ದರಿಂದ ಒಂದೂ ಕಾಲು ಗಂಟೆ ವಿಳಂಬಗೊಂಡಿತ್ತು.

ಕಾಂಗ್ರೆಸ್ನ ಜಮ್ಮು-ಕಾಶ್ಮೀರ ಘಟಕದ ಅಧ್ಯಕ್ಷ ವಿಕಾರ್ ರಸೂಲ್ ವಾನಿ ಮತ್ತು ಅವರ ಪೂರ್ವಾಧಿಕಾರಿ ಜಿ.ಎ.ಮೀರ್ ಸೇರಿದಂತೆ ಹಲವಾರು ಸ್ಥಳೀಯ ಕಾಂಗ್ರೆಸ್ ನಾಯಕರು ರಾಹುಲ್ಗೆ ಸಾಥ್ ನೀಡಿದ್ದರು. ಜ.30ರಂದು ಶ್ರೀನಗರದ ಕಾಂಗ್ರೆಸ್ ಕೇಂದ್ರಕಚೇರಿಯಲ್ಲಿ ರಾಹುಲ್ ರಾಷ್ಟ್ರಧ್ವಜದ ಆರೋಹಣವನ್ನು ನಡೆಸುವುದರೊಂದಿಗೆ ಭಾರತ ಜೋಡೊ ಯಾತ್ರೆಯು ಸಮಾರೋಪಗೊಳ್ಳಲಿದೆ.

ನನ್ನ ಬೇರುಗಳಿಗೆ ಮರಳುತ್ತಿದ್ದೇನೆ

ನಾನು ನನ್ನ ಬೇರುಗಳಿಗೆ ಮರಳುತ್ತಿದ್ದೇನೆ. ನನಗೆ ಜಮ್ಮು-ಕಾಶ್ಮೀರದ ಜನರ ಸಂಕಷ್ಟ ಗೊತ್ತಿದೆ ಮತ್ತು ತಲೆ ಬಾಗಿಸಿ ನಿಮ್ಮೆದುರು ಬಂದಿದ್ದೇನೆ. ನನ್ನ ಪೂರ್ವಜರು ಇದೇ ನೆಲಕ್ಕೆ ಸೇರಿದ್ದರು. ನನಗೆ ಮನೆಗೆ ಮರಳಿದಂತೆ ಅನ್ನಿಸುತ್ತಿದೆ.

ರಾಹುಲ್ ಸ್ವಾಗತಕ್ಕೆ ಬಂದ ಫಾರೂಕ್ ಅಬ್ದುಲ್ಲಾ

ಜಮ್ಮು-ಕಾಶ್ಮೀರಕ್ಕೆ ರಾಹುಲ್ ಗಾಂಧಿಯವರನ್ನು ಸ್ವಾಗತಿಸಲು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ತನ್ನ ಜಮ್ಮು ನಿವಾಸದಿಂದ ಪಕ್ಷದ ನಾಯಕರ ಜೊತೆಯಲ್ಲಿ ಬಸ್ಸಿನಲ್ಲಿ ಕಥುವಾಕ್ಕೆ ಪ್ರಯಾಣಿಸಿದ್ದರು.

ನೂರಾರು ವರ್ಷಗಳ ಹಿಂದೆ ಶಂಕರಾಚಾರ್ಯರು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಯಾತ್ರೆಯನ್ನು ನಡೆಸಿದ್ದರು. ಇಂದು ರಾಹುಲ್ ಅದನ್ನು ಮಾಡುತ್ತಿದ್ದಾರೆ ಎಂದು ರ್ಯಾಲಿಯಲ್ಲಿ ಹೇಳಿದ ಅವರು,‘ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಲಾಗಿರುವುದರಿಂದ ಇಂದಿನ ಭಾರತವು ಶ್ರೀರಾಮನ ಭಾರತವೂ ಅಲ್ಲ,ಗಾಂಧೀಜಿಯವರ ಹಿಂದುಸ್ಥಾನವೂ ಅಲ್ಲ. ನಾವು ಒಂದಾಗಿದ್ದರೆ ಈಗಿನ ದ್ವೇಷವನ್ನು ಮೀರಿ ನಿಲ್ಲಲು ಸಾಧ್ಯ ’ಎಂದರು.

ಮೋದಿಗೆ ರಾಹುಲ್ ಮಾತ್ರ ಸವಾಲು ಹಾಕಬಲ್ಲರು

2024ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲು ಹಾಕಲು ಮತ್ತು ಬಿಜೆಪಿಯ ಸರ್ವಾಧಿಕಾರಿ ಆಡಳಿತವನ್ನು ಅಂತ್ಯಗೊಳಿಸಲು ರಾಹುಲ್ ಗಾಂಧಿಯವರಿಗೆ ಮಾತ್ರ ಸಾಧ್ಯ ಎಂದು ಜಮ್ಮುವಿನಲ್ಲಿ ಭಾರತ ಜೋಡೊ ಯಾತ್ರೆಯನ್ನು ಸೇರಿದ ಶಿವಸೇನೆ (ಉದ್ಧವ ಬಣ) ಸಂಸದ ಸಂಜಯ ರಾವುತ್ ಹೇಳಿದರು. ಕಾಂಗ್ರೆಸ್ ಇಲ್ಲದ ಪ್ರತಿಪಕ್ಷಗಳ ಮೈತ್ರಿಕೂಟ ಅರ್ಥಹೀನವಾಗುತ್ತದೆ ಎಂದರು.

Similar News