ಸ್ಲಿಮ್, ಟ್ರಿಮ್ ಆಗಿದ್ದವರು ಬೇಕಿದ್ದರೆ ಫ್ಯಾಶನ್ ಶೋಗೆ ಹೋಗಿ: ಸರ್ಫರಾಝ್ ಖಾನ್ ನಿರ್ಲಕ್ಷಿಸಿದ್ದಕ್ಕೆ ಗವಾಸ್ಕರ್ ಕಿಡಿ

Update: 2023-01-20 14:23 GMT

ಹೊಸದಿಲ್ಲಿ: ದೇಶೀಯ ಕ್ರಿಕೆಟ್ ನಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ  ಬ್ಯಾಟರ್ ಸರ್ಫರಾಝ್ ಖಾನ್ ಅವರನ್ನು ಚೇತನ್ ಶರ್ಮಾ ನೇತೃತ್ವದ ಅಖಿಲ ಭಾರತ ಆಯ್ಕೆ ಸಮಿತಿಯು ನಿರ್ಲಕ್ಷಿಸಿದ್ದಕ್ಕಾಗಿ ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್(Sunil Gavaskar) ಅವರು ಟೀಕಿಸಿದ್ದಾರೆ.

ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆ ಸಮಿತಿಯು ತನ್ನನ್ನು ಕಡೆಗಣಿಸಿದ ಬಳಿಕ ಸರ್ಫರಾಝ್  ದಿಲ್ಲಿ ವಿರುದ್ಧ ನಡೆದ ರಣಜಿ ಟ್ರೋಫಿ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮುಂಬೈ ಪರ ಮತ್ತೊಂದು ಶತಕವನ್ನು ಸಿಡಿಸಿದ್ದಾರೆ.

ದೇಶೀಯ ಕ್ರಿಕೆಟ್ ನಲ್ಲಿ ಬ್ಯಾಟ್‌ನೊಂದಿಗೆ ಅತ್ಯುತ್ತಮ ಫಾರ್ಮ್‌ನ ಹೊರತಾಗಿಯೂ ಸರ್ಫರಾಝ್ ಅವರನ್ನು ತಂಡದಿಂದ ಹೊರಗಿಟ್ಟಿರುವುದರ ಬಗ್ಗೆ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.

ಇದೀಗ, ಗವಾಸ್ಕರ್ ಕೂಡ ಇನ್-ಫಾರ್ಮ್ ಬ್ಯಾಟರ್‌ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು, ಆಯ್ಕೆದಾರರಿಗೆ  "ಸ್ಲಿಮ್ ಹಾಗೂ  ಟ್ರಿಮ್ ಇದ್ದವರು ಬೇಕಾಗಿದ್ದರೆ  ಮಾಡೆಲ್ ಗಳನ್ನು ಆಯ್ಕೆ ಮಾಡಬೇಕು'' ಎಂದು ಸಲಹೆ ನೀಡಿದರು.

" ಕ್ರಿಕೆಟ್ ಗೆ ಫಿಟ್ನೆಸ್   ಇರುವುದು ಮುಖ್ಯ. ಆದರೆ ನೀವು ಸ್ಲಿಮ್ ಮತ್ತು ಟ್ರಿಮ್ ಹುಡುಗರನ್ನು ಮಾತ್ರ ಹುಡುಕುತ್ತಿದ್ದರೆ, ನೀವು ಫ್ಯಾಶನ್ ಶೋಗೆ ಹೋಗಿ, ಕೆಲವು ಮಾಡಲ್ ಗಳನ್ನು ಆರಿಸಿ. ನಂತರ ಅವರ ಕೈಯಲ್ಲಿ ಬ್ಯಾಟ್ ಹಾಗೂ  ಬಾಲ್ ನೀಡಿ ನಂತರ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಿ. ನಿಮ್ಮಲ್ಲಿ ಎಲ್ಲಾ ಆಕಾರಗಳು ಹಾಗೂ ಗಾತ್ರಗಳಲ್ಲಿ ಕ್ರಿಕೆಟಿಗರು ಇದ್ದಾರೆ. ಗಾತ್ರವನ್ನು ಮಾತ್ರ ನೋಡಬೇಡಿ, ರನ್ ಹಾಗೂ ವಿಕೆಟ್‌ಗಳತ್ತಲೂ  ಗಮನ ನೀಡಿ" ಎಂದು ಗವಾಸ್ಕರ್ 'ಇಂಡಿಯಾ ಟುಡೇ'ಗೆ ತಿಳಿಸಿದರು.

ಸರ್ಫರಾಝ್ ಖಾನ್ ತುಂಬಾ ದಪ್ಪಗಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಲಾಗಿಲ್ಲ ಎಂಬ ಮಾತು ಕೇಳಿ ಬಂದಿದ್ದು, ಆ ಮಾತಿಗೆ ಗವಾಸ್ಕರ್ ತಕ್ಕ ತಿರುಗೇಟು ನೀಡಿದ್ದಾರೆ.

Similar News