ದ.ಕ. ಜಿಲ್ಲೆ: ಹಾಲು ಉತ್ಪಾದಕರಿಗೆ 1 ರೂ. ವಿಶೇಷ ಪ್ರೋತ್ಸಾಹ ಧನ ಮುಂದುವರಿಕೆ
ಮಂಗಳೂರು: ಹಾಲಿನ ಉತ್ಪಾದಕರನ್ನು ಉತ್ತೇಜಿಸುವ ಸಲುವಾಗಿ ಮತ್ತು ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಮನಗಂಡು 2023ರ ಜ.11ರಿಂದ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲಿಗೆ 2.05 ರೂ.ಗಳ ವಿಶೇಷ ಪ್ರೋತ್ಸಾಹ ಧನದ ಪೈಕಿ 1ರೂ. ವಿಶೇಷ ಪ್ರೋತ್ಸಾಹ ಮುಂದುವರಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 2022ರ ನವಂಬರ್‌ನಿಂದ ಸದಸ್ಯರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 2.05 ರೂ.ವನ್ನು ನೀಡಲಾಗುತ್ತಿತ್ತು. ಇದರಿಂದ ಪ್ರತಿ ತಿಂಗಳು ಒಕ್ಕೂಟಕ್ಕೆ ಸರಾಸರಿ 3 ಕೋ.ರೂ. ನಷ್ಟವಾಗಿವೆ. ವಿಶೇಷ ಪ್ರೋತ್ಸಾಹಧನವನ್ನು ಹೀಗೆ ಮುಂದುವರಿಸಿದಲ್ಲಿ ಮುಂದಿನ ಮೂರು ತಿಂಗಳಲ್ಲಿ ಸುಮಾರು 9 ಅಥವಾ 10 ಕೋ.ರೂ.ನಷ್ಟ ಭರಿಸಬೇಕಾಗಿದೆ. ಸದ್ಯ ಒಕ್ಕೂಟದಲ್ಲಿ 63ರಿಂದ 64 ಕೋ.ರೂ.ನಷ್ಟು ಹಣ ಅಭಿವೃದ್ಧಿ ನಿಧಿಯಾಗಿ ಸಂಗ್ರಹಣೆಯಾಗಿದ್ದು, ಇದರಿಂದ ಬರುವ ಅಂದಾಜು 3 ಕೋ.ರೂ.ಬಡ್ಡಿಯನ್ನು ಹಾಲಿನ ಖರೀದಿಗೆ ವಿನಿಯೋಗಿಸಿದರೆ ಕೇವಲ ಒಂದು ತಿಂಗಳು ಮಾತ್ರ ಹಾಲಿನ ಪ್ರೋತ್ಸಾಹಧನ ಮಾತ್ರ ನೀಡಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯ ದ.ಕ.ಜಿಲ್ಲೆಯಲ್ಲಿ ಪ್ರಸ್ತುತ 396 ಸಂಘಗಳ 35,707 ಸಕ್ರಿಯ ಸದಸ್ಯರಿಂದ 2,86,576 ಲೀ. ಮತ್ತು ಉಡುಪಿ ಜಿಲ್ಲೆಯಲ್ಲಿ 338 ಸಂಘಗಳ 29,396 ಸಕ್ರಿಯ ಸದಸ್ಯರಿಂದ 1,89,806 ಲೀ. ಹಾಲು ಸಂಗ್ರಹವಾಗುತ್ತಿದೆ. 2021ರ ಡಿಸೆಂಬರ್‌ನಲ್ಲಿ ದ.ಕ.ದಲ್ಲಿ 392 ಸಂಘಗಳ 36,943 ಸಕ್ರಿಯ ಸದಸ್ಯರಿಂದ 3,09,872 ಲೀ. ಹಾಗೂ ಉಡುಪಿಯಲ್ಲಿ 338 ಸಂಘಗಳ 30,553 ಸಕ್ರಿಯ ಸದಸ್ಯರಿಂದ 2,09,532 ಲೀ. ಹಾಲು ಸಂಗ್ರಹಣೆಯಾಗಿವೆ. ಇದನ್ನು ಗಮನಿಸಿದಾಗ ದ.ಕ.ದಲ್ಲಿ 1,236 ಮತ್ತು ಉಡುಪಿಯಲ್ಲಿ 1,157 ಸದಸ್ಯರ ಸಹಿತ 2,393 ಸಕ್ರಿಯ ಸದಸ್ಯರು ಕಡಿಮೆಯಾಗಿರುತ್ತಾರೆ.
ರಾಸುಗಳು ಗರ್ಭಾವಸ್ಥೆಯಲ್ಲಿರುವುದು, ಇಳಿವಯಸ್ಸಿನಿಂದ ಹೈನುಗಾರಿಕೆಯಿಂದ ನಿವೃತ್ತಿ ಹೊಂದಿರುವುದು, ಪಟ್ಟಣಕ್ಕೆ ವಲಸೆ ಹೋಗುವುದು, ಕೋವಿಡ್‌ನಿಂದ ಪರ್ಯಾಯ ಉದ್ಯೋವಕಾಶಗಳು ಪ್ರಾರಂಭಗೊಂಡಿರುವುದು ಸಕ್ರಿಯ ಸದಸ್ಯತ್ವವು ಕಡಿಮೆಯಾಗಲು ಪ್ರಮುಖ ಕಾರಣಗಳಾಗಿರುತ್ತವೆ ಎಂದು ತಿಳಿಸಿದ್ದಾರೆ.
ಒಕ್ಕೂಟದ ವ್ಯಾಪ್ತಿಯಲ್ಲಿ 2021-22ನೇ ಸಾಲಿನಲ್ಲಿ ದಿನವಹಿ ಸರಾಸರಿ 3,52,085 ಲೀ. ಹಾಲು ಮತ್ತು 60,019 ಕೆ.ಜಿ ಮೊಸರು ಮಾರಾಟವಾಗುತ್ತಿತ್ತು. ಪ್ರಸ್ತುತ ಸಾಲಿನಲ್ಲಿ 3,75,992 ಲೀ. ಹಾಲು ಮತ್ತು 70,193 ಕೆ.ಜಿ ಮೊಸರು ಮಾರಾಟವಾಗುತ್ತಿದೆ. ಅಂದರೆ ಪ್ರತೀ ದಿನ 24,000 ಲೀ. ಹಾಲು ಹಾಗೂ 10,000 ಲೀ. ಮೊಸರು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಅಲ್ಲದೆ ನಂದಿನಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ. ಕಳೆದ ಸಾಲಿಗೆ ಹೋಲಿಸಿದಾಗ ಸರಾಸರಿ ಶೇ.25ರಷ್ಟು ಹೆಚ್ಚು ಮಾರಾಟವಾಗುತ್ತಿದೆ. ಹೆಚ್ಚುವರಿ ಮಾರಾಟದಿಂದಾಗಿ ಒಕ್ಕೂಟಕ್ಕೆ ಇನ್ನೂ ದಿನವಹಿ 40,000 ಲೀ. ಹಾಲಿನ ಆವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ಹಾಲಿನ ಶೇಖರಣೆ ಕಡಿಮೆಯಾಗಿದ್ದು, ಒಕ್ಕೂಟವು ಹಾಲನ್ನು ಇತರ ಒಕ್ಕೂಟಗಳಿಂದ ಪ್ರಸ್ತುತ ಖರೀದಿಸುತ್ತಿಲ್ಲ. ಒಕ್ಕೂಟವು ಹೈನುಗಾರರ ಹಿತಾಸಕ್ತಿಯನ್ನು ಕಾಪಾಡಲು ಕರು ಸಾಕಾಣಿಕೆ ಯೋಜನೆ, ಹಸಿರು ಮೇವು ಯೋಜನೆ, ಹಾಲು ಹೆಚ್ಚಳ ಕಾರ್ಯಕ್ರಮವನ್ನು ಒಕ್ಕೂಟದ ಅನುದಾನದ ಮೂಲಕ ನೀಡಲಾಗುತ್ತಿದೆ. ಅಲ್ಲದೆ ಒಕ್ಕೂಟದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗವು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಹಾಲಿನ ಗುಣಮಟ್ಟದಲ್ಲಿ ರಾಜ್ಯಮಟ್ಟದಲ್ಲಿ ಮೊದಲನೇ ಸ್ಥಾನದಲ್ಲಿರಲು ಸಾಧ್ಯವಾಗಿದೆ. ಮುಂದೆಯೂ ಸಹ ಉನ್ನತ ಸ್ಥಾನದಲ್ಲಿರಲು ಹೈನುಗಾರರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ರಾಸುಗಳಿಗೆ ಅಗತ್ಯವಾಗಿ ಬೇಕಾಗಿರುವ ನಂದಿನಿ ಪಶು ಆಹಾರವು 2021ರ ಡಿಸೆಂಬರ್‌ನಲ್ಲಿ ದ.ಕ.ಜಿಲ್ಲೆಯಲ್ಲಿ 2,761 ಮೆ.ಟನ್ ಹಾಗೂ ಉಡುಪಿ ಜಿಲ್ಲೆಯಲ್ಲಿ 3,090 ಮೆ.ಟನ್ ಸಹಿತ 5,851 ಮೆ.ಟನ್ ಮಾರಾಟವಾಗಿದೆ. ಆದರೆ 2022ರ ಡಿಸೆಂಬರ್‌ನಲ್ಲಿ ದ.ಕ. ಜಿಲ್ಲೆಯಲ್ಲಿ 3,384 ಮೆ.ಟನ್ ಹಾಗೂ ಉಡುಪಿಯಲ್ಲಿ 3,748 ಮೆ.ಟನ್ ಸಹಿತ 7,133 ಮೆ.ಟನ್ ಪಶು ಆಹಾರ ಮಾರಾಟವಾಗಿದೆ. 2021ರ ಡಿಸೆಂಬರ್‌ಗಿಂತ 2022ರ ಡಿಸೆಂಬರ್‌ನಲ್ಲಿ 1,282 ಮೆ.ಟನ್‌ನಷ್ಟು ಉತ್ತಮ ಗುಣಮಟ್ಟದ ಸಮತೋಲನ ಪಶು ಆಹಾರ ಹೆಚ್ಚುವರಿ ಮಾರಾಟವಾಗಿರುತ್ತದೆ. ಪಶು ಆಹಾರದ ಗುಣಮಟ್ಟವನ್ನು ಕಾಯ್ದುಕೊಳ್ಳುವ ವಿಚಾರದಲ್ಲಿ ಪ್ರತಿ ತಿಂಗಳು ಪಶು ಆಹಾರದ ಮಾದರಿಯನ್ನು ಪರೀಕ್ಷಿಸಿ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಕಾಲಿಕ ಮಳೆಯಿಂದ ಪಶು ಆಹಾರದ ಕಚ್ಚಾ ಪದಾರ್ಥಗಳಾದ ಮೆಕ್ಕೆಜೋಳ, ಅಕ್ಕಿ ತೌಡು, ಕಾಕಂಬಿ ಬೆಲೆಯು ಕನಿಷ್ಟ ಶೇ.20ರಷ್ಟು ಗಣನೀಯವಾಗಿ ಹೆಚ್ಚಳವಾಗಿರುವುದರಿಂದ ಪಶು ಆಹಾರದ ಮಾರಾಟ ದರದ ಮೇಲಿನ ಅನುದಾನವನ್ನು ರಾಜ್ಯ ಹಾಲು ಮಹಾ ಮಂಡಳವು ಹಿಂಪಡೆದ ಕಾರಣ ಪ್ರಸ್ತುತ ಪಶು ಆಹಾರ ದರವು ಹೆಚ್ಚಳವಾಗಿರುತ್ತದೆ.
ಒಕ್ಕೂಟದ ವ್ಯಾಪ್ತಿಯಲ್ಲಿ ಉಭಯ ಜಿಲ್ಲೆಯಲ್ಲಿ ಪ್ರಸ್ತುತ 16 ಪಶು ವೈದ್ಯಕೀಯ ಶಿಬಿರ ಕಚೇರಿಗಳು ಕಾರ್ಯಾಚರಣೆಯಲ್ಲಿದೆ. 17 ಪಶು ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 6 ತಜ್ಞ ಪಶು ವೈದ್ಯರು ವಿಶೇಷ ಸಲಹಾ ಸೂಚನೆಗಳನ್ನು ನೀಡುತ್ತಿದ್ದಾರೆ. ಇತ್ತೀಚಿನ ವರದಿಯಂತೆ ರಾಜ್ಯದಲ್ಲಿ 28,386 ರಾಸುಗಳು ಚರ್ಮಗಂಟು ರೋಗದಿಂದ ಮರಣ ಹೊಂದಿದೆ. ಆ ಪೈಕಿ ಉಡುಪಿಯಲ್ಲಿ 54 ಹಾಗೂ ದ.ಕ.ಜಿಲ್ಲೆಯಲ್ಲಿ 229 ರಾಸುಗಳು ಮರಣ ಹೊಂದಿರುವುದಾಗಿ ವರದಿಯಾಗಿರುತ್ತದೆ ಎಂದು ತಿಳಿಸಿದ್ದಾರೆ.