ಐಎಎಸ್ ಅಧಿಕಾರಿ ಸಿಪಿಆರ್ ನೀಡುತ್ತಿರುವ ವೀಡಿಯೊ ವೈರಲ್: ಆದರೂ ಅದು ಸರಿಯಾದ ವಿಧಾನವಲ್ಲವೇಕೆ?

ಉಸಿರಾಟ ನಿಂತ ವ್ಯಕ್ತಿಗೆ ಸಿಪಿಆರ್‌ ನೀಡುವ ಸಮರ್ಪಕ ವಿಧಾನ ಇಲ್ಲಿದೆ

Update: 2023-01-20 15:52 GMT

ಹೊಸದಿಲ್ಲಿ: ಚಂಡಿಗಡದಲ್ಲಿ ಇತ್ತೀಚಿಗೆ ಐಎಎಸ್ ಅಧಿಕಾರಿಯೋರ್ವರು ರೋಗಿಗೆ ಕಾರ್ಡಿಯೊಪಲ್ಮನರಿ ರೆಸಸಿಟೇಶನ್ ಅಥವಾ ಸಿಪಿಆರ್ ನಡೆಸುವ ಮೂಲಕ ಆತನ ಜೀವವನ್ನುಳಿಸಿದ್ದಾರೆ ಎಂದು ಹೇಳಲಾಗಿರುವ ವೀಡಿಯೊವೊಂದು ವೈರಲ್ ಆಗಿದೆ. ಆದರೆ ಸಿಪಿಆರ್ ವಿಧಾನವು ತಪ್ಪಾಗಿತ್ತು ಎಂಬ ಬಗ್ಗೆ ವೈದ್ಯರು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.

ಚಂಡಿಗಡ ಆರೋಗ್ಯ ಕಾರ್ಯದರ್ಶಿ ಯಶಪಾಲ್ ಗರ್ಗ್ ಅವರು ಕುರ್ಚಿಯ ಮೇಲೆ ಕುಳಿತಿದ್ದ ವ್ಯಕ್ತಿಯ ಎದೆಯನ್ನು ಒತ್ತುತ್ತಿದ್ದನ್ನು ವೀಡಿಯೊ ತೋರಿಸಿದೆ. ಆ ವ್ಯಕ್ತಿಗೆ ಏನಾಗಿತ್ತು ಅಥವಾ ಆತನಿಗೆ ಪ್ರಜ್ಞೆಯಿತ್ತೇ ಎನ್ನುವುದು ಸ್ಪಷ್ಟವಾಗಿಲ್ಲ. ಬುಧವಾರ ಪೋಸ್ಟ್ ಆಗಿರುವ ವೀಡಿಯೊವನ್ನು 6,50,000ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

ಅಧಿಕಾರಿಯ ಉದ್ದೇಶ ಶ್ರದ್ಧೆಯಿಂದ ಕೂಡಿತ್ತಾದರೂ ವೈರಲ್ ಆಗುತ್ತಿರುವ ವೀಡಿಯೊ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನೇ ಉಂಟು ಮಾಡಬಹುದು ಎಂದು ವೈದ್ಯರು ಅಭಿಪ್ರಾಯಿಸಿದ್ದಾರೆ.

 ವೀಡಿಯೊದಲ್ಲಿ ಬಳಸಿದ್ದ ಸಿಪಿಆರ್ ವಿಧಾನ ಏಕೆ ತಪ್ಪಾಗಿತ್ತು?

ಸಿಪಿಆರ್ ಹೃದಯಾಘಾತ,ನೀರಿನಲ್ಲಿ ಮುಳುಗುವಿಕೆ ಅಥವಾ ಇತರ ಇಂತಹ ತುರ್ತು ಸಂದರ್ಭಗಳಿಂದಾಗಿ ಉಸಿರಾಟವನ್ನು ನಿಲ್ಲಿಸಿದ ವ್ಯಕ್ತಿಯನ್ನು ಪುನಃಶ್ಚೇತನಗೊಳಿಸಲು ಬಳಸಲಾಗುವ ತಂತ್ರವಾಗಿದೆ. ಐಎಎಸ್ ಅಧಿಕಾರಿ ಸಿಪಿಆರ್ ಅನ್ನು ನಿರ್ವಹಿಸಿದ್ದ ರೀತಿಯಲ್ಲಿ ಹಲವಾರು ದೋಷಗಳಿದ್ದವು ಎಂದು ಹೇಳಿದ ಮುಂಬೈ ವಾಶಿಯ ಫೋರ್ಟಿಸ್ ಹಿರಾನಂದನಿ ಆಸ್ಪತ್ರೆಯ ಕಾರ್ಡಿಯಾಲಜಿ ಕನ್ಸ್ಲ್ಟಂಟ್ ಡಾ.ಪ್ರಶಾಂತ್ ಪವಾರ್ ಸರಿಯಾದ ಕ್ರಮವನ್ನು ವಿವರಿಸಿದರು.

ಮೊದಲಿಗೆ ರೋಗಿಯನ್ನು ನೆಲದ ಮೇಲೆ ಅಂಗಾತ ಮಲಗಿಸಬೇಕು. ಎರಡನೆಯದಾಗಿ ಕತ್ತಿನ ನಾಡಿ ಅಥವಾ ಶೀರ್ಷಧಮನಿ (ತಲೆಗೆ ರಕ್ತವನ್ನು ಸಾಗಿಸುವ ಧಮನಿಗಳಲ್ಲೊಂದು) ಯನ್ನು ಸ್ಪರ್ಶಿಸಬೇಕು. ಮೂರನೆಯದಾಗಿ ರೋಗಿಯ ಸುತ್ತ ಜನರು ಗುಂಪು ಸೇರಿರಬಾರದು. ರೋಗಿಯ ಎದೆಯ ಮೇಲೆ, ಎರಡೂ ಸ್ತನ ತೊಟ್ಟುಗಳನ್ನು ಸಂಪರ್ಕಿಸುವ ರೇಖೆಯ ಮಧ್ಯದಲ್ಲಿ ಎರಡೂ ಕೈಗಳನ್ನು ಇಟ್ಟು ಒತ್ತುತ್ತಿರಬೇಕು. ನಿಮಿಷಕ್ಕೆ 100ಕ್ಕಿಂತ ಹೆಚ್ಚು ಸಲ ವೇಗವಾಗಿ ಒತ್ತಬೇಕು. ಇದರಿಂದ ಹೃದಯ ಆಕುಂಚನ-ಸಂಕುಚನಗೊಂಡು ರಕ್ತ ಪರಿಚಲನೆ ಮತ್ತೆ ಪ್ರಾರಂಭವಾಗುತ್ತದೆ. ಬಳಿಕ ರೋಗಿಯ ತಲೆಯನ್ನು ನೇರವಾಗಿರಿಸಿ ನಮ್ಮ ಬಾಯಿಯಿಂದ ಎರಡು ಬಾರಿ ಉಸಿರನ್ನು ನೀಡಬೇಕು ಎಂದು ಡಾ.ಪವಾರ್ ಹೇಳಿದರು.

ಸಿಪಿಆರ್ ಅನ್ನು ನಿಜವಾಗಿ ಹೇಗೆ ನಿರ್ವಹಿಸಬೇಕು?

ದಿಲ್ಲಿಯ ಇಂದ್ರಪ್ರಸ್ಥ ಅಪೋಲೊ ಹಾಸ್ಪಿಟಲ್ ನ ಹೃದಯ ತಜ್ಞ ಡಾ.ನಿಖಿಲ್ ಮೋದಿಯವರ ಪ್ರಕಾರ, ವ್ಯಕ್ತಿಯು ಕುಸಿದು ಬಿದ್ದಿದ್ದರೆ ಅಥವಾ ಪ್ರಜ್ಞಾಹೀನನಾಗಿದ್ದರೆ ಅಥವಾ ಉಸಿರಾಟವನ್ನು ನಿಲ್ಲಿಸಿದ್ದರೆ ಮೊದಲು ಮಾಡಬೇಕಾದ ಕೆಲಸವೆಂದರೆ ಆತನನ್ನು ಸಮತಟ್ಟಾದ ಟೇಬಲ್ ಮೇಲೆ ಅಥವಾ ನೆಲದ ಮೇಲೆ ಮಲಗಿಸುವುದು. ನಿಮ್ಮ ಎರಡೂ ಹಸ್ತಗಳನ್ನು ವ್ಯಕ್ತಿಯ ಎದೆಯ ಮಧ್ಯಭಾಗದಲ್ಲಿರಿಸಿ ಸರಿಯಾದ ರೀತಿಯಲ್ಲಿ ಒತ್ತಬೇಕು. ಇದರಿಂದ ಸಾಕಷ್ಟು ಚಲನೆ ಕಾಯ್ದುಕೊಳ್ಳಲ್ಪಡುತ್ತದೆ.

ಸಾಮಾನ್ಯವಾಗಿ ವ್ಯಕ್ತಿಯನ್ನು ಪುನಃಶ್ಚೇತನಗೊಳಿಸಲು ಸಂಕೋಚನ (ಎದೆಯನ್ನು ವೇಗವಾಗಿ ಒತ್ತುವುದು) ಮಾತ್ರ ಸಾಕಾಗಬಹುದು ಎನ್ನುವ ಡಾ.ಅಶ್ವಿನ್ ರಜನೀಶ್ ಟ್ವಿಟರ್ನಲ್ಲಿ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ರೋಗಿಯ ತಲೆಯನ್ನು ಮೇಲಕ್ಕೆತ್ತಲು ಅಥವಾ ಅದಕ್ಕೆ ಆಧಾರ ನೀಡಲು ಪ್ರಯತ್ನಿಸಬೇಡಿ,‌ ಬದಲಾಗಿ ರೋಗಿಯ ಪಾದಗಳನ್ನು ಮೇಲಕ್ಕೆತ್ತಿ. ಗಟ್ಟಿಯಾದ ಕರೆಗೆ ಅಥವಾ ಸ್ಪರ್ಶಕ್ಕೆ ರೋಗಿಯ ಸ್ಪಂದಿಸುವಿಕೆಯನ್ನು ಪರಿಶೀಲಿಸಿ. ರೋಗಿಯು ಸ್ಪಂದಿಸುತ್ತಿಲ್ಲವಾದರೆ ಆತನ ಬಾಯಿಗೆ ಬಲವಂತದಿಂದ ಯಾವುದೇ ದ್ರವವನ್ನು ಹಾಕಲು ಪ್ರಯತ್ನಿಸಬೇಡಿ.
ನೆರವಿಗಾಗಿ ಕರೆ ಮಾಡಿ ಮತ್ತು ಅದು ಸಿಗುವವರೆಗೂ ಸಿಪಿಆರ್ ಮಾಡುತ್ತಿರಿ.
 
ಸಿಪಿಆರ್ ಸರಿಯಾಗಿ ಮಾಡದಿದ್ದರೆ ಏನಾಗುತ್ತದೆ?

ಅಧ್ಯಯನವೊಂದರ ಪ್ರಕಾರ ಸಿಪಿಆರ್‌ ಅನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದಿದ್ದರೆ ಈ ಕೆಳಗಿನ ತೊಡಕುಗಳು ಕಾಣಿಸಿಕೊಳ್ಳಬಹುದು.

ಪಕ್ಕೆಲಬಿನ ಮುರಿತಗಳು, ನ್ಯುಮೋಥೊರಾಕ್ಸ್ (ಶ್ವಾಸಕೋಶ ಕಿರಿದಾಗುವುದು) ಸೇರಿದಂತೆ ಶ್ವಾಸಕೋಶ ಹಾನಿಗಳು, ಯಕೃತ್ತು, ಗುಲ್ಮ ಅಥವಾ ಜಠರಕ್ಕೆ ಹಾನಿ, ಕಿಬ್ಬೊಟ್ಟೆಯ ಗಾಯಗಳು, ಎದೆ ನೋವು, ಹೊಟ್ಟೆನೋವು.

ಕೃಪೆ: Thequint.com

Similar News