ಬಿಜೆಪಿ ಸಂಸದನಿಂದ ಲೈಂಗಿಕ ಕಿರುಕುಳ ಆರೋಪ: ಕುಸ್ತಿಪಟುಗಳ ಹೋರಾಟ ಮೋದಿ ವಿರುದ್ಧವಲ್ಲವೆಂದ ಬಬಿತಾ ಫೋಗಟ್

ಬಿಜೆಪಿ ನಾಯಕಿ ಟ್ವೀಟ್‌ಗೆ ವ್ಯಾಪಕ ಆಕ್ರೋಶ

Update: 2023-01-20 17:16 GMT

ಹೊಸದಿಲ್ಲಿ: ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಬಿಜೆಪಿ ಸಂಸದನ ಲೈಂಗಿಕ ಹಗರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕಿ, ಕುಸ್ತಿಪಟು ಬಬಿತಾ ಫೋಗಟ್‌ ಮಾಡಿರುವ ಟ್ವೀಟ್‌ ವಿವಾದಕ್ಕೆ ಕಾರಣವಾಗಿದೆ.

ಕುಸ್ತಿ ಫೆಡರೇಷನ್‌ನ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್‌ ಭೂಷಣ್ ಶರಣ್‌ ಸಿಂಗ್‌ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಹಾಗೂ ಫೆಡರೇಷನ್‌ನಲ್ಲಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕುಸ್ತಿಪಟುಗಳು ಜಂತರ್‌ ಮಂತರ್‌ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬೆನ್ನಲ್ಲೇ ಫೋಗಟ್‌ ಈ ಟ್ವೀಟ್‌ ಮಾಡಿದ್ದಾರೆ. ಫೆಡೆರೇಷನ್‌ನ ಹಲವು ಕೋಚ್‌ಗಳೂ ಕ್ರೀಡಾಪಟುಗಳಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಕ್ರೀಡಾಪಟುಗಳು ಆರೋಪಿಸಿದ್ದಾರೆ.

ಈ ಪ್ರತಿಭಟನೆಯ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಬಿಜೆಪಿ ನಾಯಕಿ ಬಬಿತಾ ಪೋಗಟ್‌, “ನಮ್ಮ ಹೋರಾಟ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಲ್ಲ, ದೀದಿ ಸ್ಮೃತಿ ಇರಾನಿ ವಿರುದ್ಧ ಅಲ್ಲ ಮತ್ತು ಬಿಜೆಪಿ ವಿರುದ್ಧವೂ ಅಲ್ಲ. ಒಬ್ಬ ವ್ಯಕ್ತಿಯ ವಿರುದ್ಧ ಹಾಗೂ ಫೆಡೆರೇಷನ್‌ ವಿರುದ್ಧ ಕ್ರೀಡಾಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಲಾಭಕ್ಕಾಗಿ ಕ್ರೀಡಾಪಟುಗಳ ಪ್ರತಿಭಟನೆಯನ್ನು ಕ್ಷುಲ್ಲಕ ರಾಜಕಾರಣ ಮಾಡುವುದನ್ನು ನಿಲ್ಲಿಸಿ ಎಂದು ನಾನು ಕಾಂಗ್ರೆಸ್ ಪಕ್ಷಕ್ಕೆ ಹೇಳಲು ಬಯಸುತ್ತೇನೆ” ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಈ ಟ್ವೀಟ್‌ಗೆ ನೆಟ್ಟಿಗರು ಫೋಗಟ್‌ರನ್ನು ತರಾಟೆಗೆ ತೆಗೆದಿದ್ದು, ಇದುವರೆಗೂ ಸಂಸದನ ವಿರುದ್ಧ ಕ್ರಮ ಕೈಗೊಳ್ಳದ ಪಕ್ಷದ ಪರವಾಗಿ ಯಾಕೆ ಮಾತನಾಡುತ್ತಿದ್ದೀರ ಎಂದು ಮಾಜಿ ಕುಸ್ತಿಪಟುವನ್ನು ಪ್ರಶ್ನಿಸುತ್ತಿದ್ದಾರೆ.

ಫೋಗಟ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, “ಚುನಾವಣೆಯಲ್ಲಿ ಗೆಲ್ಲಲು ಮತಕ್ಕಾಗಿ ಅತ್ಯಾಚಾರ ಮತ್ತು ಭಯೋತ್ಪಾದಕ ಕೃತ್ಯಗಳಿಗೆ ಹಾಲುಣಿಸುವ ನಿಮ್ಮ ಹೊಲಸು ಡಿವೈಡರ್ ಬಾಸ್‌ನಂತೆ ಎಲ್ಲರೂ ಅಲ್ಲ. ತನ್ನ ಕುರ್ಚಿ ಉಳಿಸಿಕೊಳ್ಳಲು 2019 ರಲ್ಲಿ ಪುಲ್ವಾಮಾದಲ್ಲಿ ನಾಚಿಕೆಯಿಲ್ಲದೆ ಮತ ಕೇಳಿದರು. ಅತ್ಯಾಚಾರಿಗಳು ಮತ್ತು ಕೊಲೆಗಾರರನ್ನು ರಕ್ಷಿಸುವ ಪಕ್ಷವನ್ನು (ನೀವು) ರಕ್ಷಿಸುವುದು ನಿಮ್ಮ ಕ್ರೀಡೆಗೆ ನೀವು ಮಾಡುವ ಅವಮಾನ ಎಂದು ಹೇಳಿದ್ದಾರೆ.

“ನಿಮ್ಮ ಸಹೋದರಿ ಮೋದಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ, ನೀವು ಅವರನ್ನು ಹೊಗಳುವುದರಲ್ಲಿ ನಿರತರಾಗಿದ್ದೀರಿ. ಆರೋಪಿಯನ್ನು ರಕ್ಷಿಸಲು ನಿಲ್ಲಬೇಡಿ ಬಬಿತಾ ಅವರೇ” ಎಂದು ಅಶ್ವಿನಿ ಸೋನಿ ಎಂಬವರು ಟ್ವೀಟ್‌ ಮಾಡಿದ್ದಾರೆ.

ಮಹರಾಷ್ಟ್ರ ಎನ್‌ಎಸ್‌ಯುಐ ನಾಯಕ ಅಕ್ಷಯ್‌ ಮಂಡಾಲ್ಕರ್‌ ಪ್ರತಿಕ್ರಿಯಿಸಿ, “ಬಬಿತಾ ಯಾವಾಗ ವಿಷ ಉಗುಳುತ್ತಾರೆ ಎಂದು ನಿನ್ನೆಯಿಂದ ಯೋಚಿಸುತ್ತಿದ್ದೆ, ಮೊದಲ ಕ್ರಮ ಈ ಸಮಿತಿಯ ಭಾಗವಾಗಿರುವ ಸಾಕ್ಷಿ ಮಲಿಕ್‌ ಹಾಗೂ ಬಜರಂಗ್‌ ಫೂನಿಯಾ ಅವರ ಮೇಲೆ ಇರಬೇಕು, ಕಾಂಗ್ರೆಸ್ ಪಕ್ಷದ ಮೇಲೆ ವಿಷ ಉಗುಳಬೇಡಿ.  ನಿಮ್ಮದೇ ಪಕ್ಷದ ನಾಯಕರೇ ಅತ್ಯಾಚಾರಿಯಾಗಿರುವಾಗ  ಮುಂದೊಂದು ದಿನ ಸಾರ್ವಜನಿಕರು ಮತ್ತು ಆಟಗಾರರು (ನಿಮ್ಮನ್ನು ಬಿಟ್ಟು) ಓಡುತ್ತಾರೆ” ಎಂದು ಬರೆದಿದ್ದಾರೆ.

“ಬಬಿತಾ ಜೀ, ನೀವು ಯಾಕೆ ಈ ಬೂಟಾಟಿಕೆ ಬಿಟ್ಟು ಆಟಗಾರರ ಜೊತೆ ನಿಲ್ಲಬಾರದು? ಒಕ್ಕೂಟದ ಮುಖ್ಯಸ್ಥರೂ ಬಿಜೆಪಿಯವರೇ ಆಗಿದ್ದು, ಅವರ ಸಂಸದರಾಗಿದ್ದಾರೆ. ಈ ಆಟಗಾರರಲ್ಲಿ ನಿಮ್ಮ ಸಂಬಂಧಿಕರು ಇಲ್ಲದಿದ್ದರೆ, ನೀವು ಅವರನ್ನು ನಾಚಿಕೆಯಿಲ್ಲದೆ ತುಕ್ಡೆ ತುಕ್ಡೆ ಗ್ಯಾಂಗ್ ಅಥವಾ ದೇಶದ್ರೋಹಿ ಎಂದು ಕರೆಯುತ್ತಿದ್ದೀರಿ.  ನಿಮ್ಮ ಸ್ವಂತ ಸಹೋದರಿ ಅವರು ಈ ವಿಷಯಗಳನ್ನು ನರೇಂದ್ರ ಮೋದಿ ಹಾಗೂ ಇತರರಿಗೆ ಹೇಳಿದರೂ ಅವರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಹೇಳುತ್ತಾರೆ, ಬಬಿತಾ ಜೀ, ಆಟಗಾರರ ಜೊತೆ ನಿಲ್ಲಿ, ಅಧಿಕಾರದ ದುರಾಸೆಯನ್ನು ಬಿಡಿ.” ಎಂದು ಸಾಮಾಜಿಕ ಕಾರ್ಯಕರ್ತ ಮಾಣಿಕ್ ಗೊಯೆಲ್‌ ಎಂಬುವವರು ಹೇಳಿದ್ದಾರೆ.

Similar News