ಜಾತಿ ಗಣತಿಗೆ ಬಿಜೆಪಿ ಹೆದರುತ್ತಿರುವುದೇಕೆ?
ಜಾತಿಯು ಸಾಮಾಜಿಕ ಜನಸಂಖ್ಯಾಶಾಸ್ತ್ರದ ಪ್ರಮುಖ ಸೂಚಕವಾಗಿದ್ದರೂ, ವಿಶೇಷವಾಗಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸಂಬಂಧಿಸಿದಂತೆ ರಾಷ್ಟ್ರೀಯ ದತ್ತಾಂಶ ದಾಖಲೆಯನ್ನು ಪಡೆಯಲು ಸರಕಾರಕ್ಕೆ ಸ್ಪಷ್ಟ ಹಿಂಜರಿಕೆಯಿದೆ. ರಾಷ್ಟ್ರೀಯ ಜಾತಿ ಗಣತಿಯ ಬೇಡಿಕೆಯನ್ನು ಕೇಂದ್ರ ಸರಕಾರ ಇತ್ತೀಚೆಗೆ ನಿರಾಕರಿಸಿರುವುದಕ್ಕೆ, ಅಂತಹ ಯಾವುದೇ ಕಸರತ್ತು ಜಾತಿ ಆಧಾರಿತ ಸಾಮಾಜಿಕ ಮತ್ತು ರಾಜಕೀಯ ಭಾವನೆಗಳಿಗೆ ಕಾರಣವಾಗುವುದರಿಂದ ಹಿಂದುತ್ವ-ರಾಷ್ಟ್ರೀಯವಾದಿ ಉದ್ದೇಶಕ್ಕೆ ಹಾನಿಕರ ಎಂಬ ಭಯವೇ ಕಾರಣ.
ದೇಶದ ಜನತೆ ಅನುಭವಿಸುತ್ತಿರುವ ಸಾಮಾಜಿಕ-ಆರ್ಥಿಕ ಬದಲಾವಣೆಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತಹ ಸಮೃದ್ಧ ಪ್ರಾಯೋಗಿಕ ಅಂಕಿಅಂಶಗಳನ್ನು ಅಧ್ಯಯನಕ್ಕೆ ಒದಗಿಸುವಲ್ಲಿ ಜನಗಣತಿಗಳು ಮತ್ತು ದೊಡ್ಡ ಸಮೀಕ್ಷೆಗಳು ಮಹತ್ವದ ಪಾತ್ರ ವಹಿಸುತ್ತವೆ. ಸಾಮಾನ್ಯವಾಗಿ, ವಿವಿಧ ನೀತಿಗಳು ಮತ್ತು ಕಾರ್ಯಕ್ರಮಗಳು ಜನರ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದರ ತಾಳೆ ನೋಡಲು ವಿವಿಧ ಸಮರ್ಥ ಸಂಸ್ಥೆಗಳು ವಲಸೆಗಾರರು, ವಿದ್ಯಾವಂತ ಯುವಕರು, ವೃತ್ತಿಪರ ಗುಂಪುಗಳು ಇತ್ಯಾದಿಗಳ ಮೇಲೆ ಮನೆಮನೆ ಸಮೀಕ್ಷೆಗಳನ್ನು ನಡೆಸುತ್ತವೆ. ಆದರೆ ಜಾತಿಯು ಸಾಮಾಜಿಕ ಜನಸಂಖ್ಯಾಶಾಸ್ತ್ರದ ಪ್ರಮುಖ ಸೂಚಕವಾಗಿದ್ದರೂ, ವಿಶೇಷವಾಗಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸಂಬಂಧಿಸಿದಂತೆ ರಾಷ್ಟ್ರೀಯ ದತ್ತಾಂಶ ದಾಖಲೆಯನ್ನು ಪಡೆಯಲು ಸರಕಾರಕ್ಕೆ ಸ್ಪಷ್ಟ ಹಿಂಜರಿಕೆಯಿದೆ. ರಾಷ್ಟ್ರೀಯ ಜಾತಿ ಗಣತಿಯ ಬೇಡಿಕೆಯನ್ನು ಕೇಂದ್ರ ಸರಕಾರ ಇತ್ತೀಚೆಗೆ ನಿರಾಕರಿಸಿರುವುದಕ್ಕೆ, ಅಂತಹ ಯಾವುದೇ ಕಸರತ್ತು ಜಾತಿ ಆಧಾರಿತ ಸಾಮಾಜಿಕ ಮತ್ತು ರಾಜಕೀಯ ಭಾವನೆಗಳಿಗೆ ಕಾರಣವಾಗುವುದರಿಂದ ಹಿಂದುತ್ವ-ರಾಷ್ಟ್ರೀಯವಾದಿ ಉದ್ದೇಶಕ್ಕೆ ಹಾನಿಕರ ಎಂಬ ಭಯವೇ ಕಾರಣ. ಜಾತಿಯು ಯಾವಾಗಲೂ ಭಾರತೀಯ ಪ್ರಜಾಪ್ರಭುತ್ವದ ಒಂದು ಆಂತರಿಕ ಅಂಶವಾಗಿದೆ. 1947ರ ನಂತರ, ನಮ್ಮ ಸಂವಿಧಾನವನ್ನು ರಚಿಸುವಾಗ, ಭಾರತದ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳ ಮೇಲೆ ಹಿಂದೂ ಜಾತಿ ವ್ಯವಸ್ಥೆಯ ಭೀಕರ ಪರಿಣಾಮವನ್ನು ಕಂಡ ನಮ್ಮ ರಾಷ್ಟ್ರ ನಿರ್ಮಾತೃಗಳು ಅದನ್ನು ಅಳಿಸಿಹಾಕಲು ಮತ್ತು ಭಾರತದ ನಾಗರಿಕರಲ್ಲಿ ಆಧುನಿಕ ರಾಷ್ಟ್ರೀಯತೆಯ ಅಸ್ಮಿತೆಯನ್ನು ರೂಪಿಸಲು ನಿರ್ಧರಿಸಿದರು. ಆದರೂ, ಸಂವಿಧಾನವು ಜಾರಿಗೆ ಬಂದ 73 ವರ್ಷಗಳ ನಂತರವೂ, ಭಾರತವು ಮೇಲ್ಜಾತಿಯ ಪಾಲಾಗಿರುವ ಅಧಿಕಾರಗಳು ಮತ್ತು ಸವಲತ್ತುಗಳನ್ನು ಪ್ರಜಾಸತ್ತಾತ್ಮಕವಾಗಿಸುವಲ್ಲಿ ವಿಫಲವಾಗಿದೆ. ಸಾಂಪ್ರದಾಯಿಕ ಸಾಮಾಜಿಕ ಗಣ್ಯರು ರಾಜಕೀಯ ಅಧಿಕಾರವನ್ನು ಹೊಂದಿದ್ದಾರೆ ಮತ್ತು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿಯಂತ್ರಣ ಹೊಂದಿದ್ದಾರೆ. ಸಾಮಾಜಿಕವಾಗಿ ಅಂಚಿನಲ್ಲಿರುವ ಸಮುದಾಯಗಳು ಅಧಿಕಾರ ವಂಚಿತವಾಗಿಯೇ ಉಳಿದಿವೆ.
ಸಾಂಪ್ರದಾಯಿಕವಾಗಿ, ಇತರ ಹಿಂದುಳಿದ ವರ್ಗದವರು ಅತ್ಯಂತ ಕೆಳಮಟ್ಟದ ಶೂದ್ರ ವರ್ಣಕ್ಕೆ ಸೇರಿದ್ದಾರೆ. ಕೃಷಿ ಆರ್ಥಿಕತೆಗೆ ಸಂಬಂಧಿಸಿದ ಗುಂಪುಗಳು ಅಥವಾ ಕುಶಲಕರ್ಮಿಗಳು, ಕರಕುಶಲತೆ ಅಥವಾ ಇತರ ಕಾರ್ಮಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರನ್ನು ಹೆಚ್ಚಾಗಿ ಬಹುಜನರು ಎಂದು ಕರೆಯಲಾಗುತ್ತದೆ. 1931ರ ಜಾತಿ ಜನಗಣತಿಯಲ್ಲಿ ಒಬಿಸಿ ಜನಸಂಖ್ಯೆಯನ್ನು ಕೊನೆಯದಾಗಿ ಪ್ರಕಟಿಸಲಾಯಿತು. ಅಲ್ಲಿ ಅವರನ್ನು ದೇಶದ ಜನಸಂಖ್ಯೆಯ ಶೇ. 52ರಷ್ಟು ಎಂದು ಪರಿಗಣಿಸಲಾಗಿದೆ. ಅದಾದ ಬಳಿಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಯಾವುದೇ ಸರಕಾರಗಳು ಒಬಿಸಿಗಳ ಪ್ರಮಾಣವನ್ನು ತಿಳಿಯಲು ಪ್ರಯತ್ನವನ್ನೇ ಮಾಡಿಲ್ಲ. ದಲಿತರು ಮತ್ತು ಆದಿವಾಸಿಗಳಂತಹ ಇತರ ಅಂಚಿನಲ್ಲಿರುವ ಸಾಮಾಜಿಕ ಗುಂಪುಗಳನ್ನು ಜನಗಣತಿಯಲ್ಲಿ ಎಣಿಸಲಾಗಿದೆ ಮತ್ತು ವಿವಿಧ ಪ್ರದೇಶಗಳು, ರಾಜ್ಯ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಅವರ ಉಪಸ್ಥಿತಿಯ ನಿಖರವಾದ ಸಂಖ್ಯೆಗಳು ಲಭ್ಯವಿದೆ. ಆದರೆ ಒಬಿಸಿಗಳ ಬಗ್ಗೆ ಯಾವುದೇ ರಾಷ್ಟ್ರೀಯ ಮಟ್ಟದ ದತ್ತಾಂಶ ಇಲ್ಲ.
ಸಾಮಾಜಿಕ ನ್ಯಾಯದ ರಾಜಕೀಯ
1970ರ ದಶಕದ ಆರಂಭದಲ್ಲಿ, ಪ್ರಬಲ ಕೃಷಿಕ ಜಾತಿಗಳ ನಾಯಕರು ರಾಜಕೀಯ ಅಧಿಕಾರದ ಹೊಸ ಹಕ್ಕುದಾರರಾಗಿ ಹೊರಹೊಮ್ಮಿದರು, ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಬಲ್ಯವನ್ನು ಕದಡಿದರು. ಸಾಮಾಜಿಕ ನ್ಯಾಯದ ಮೌಲ್ಯಗಳಿಗೆ ಸಂಬಂಧಿಸಿದ ಸಮಾಜವಾದದ ಮಾತು ಆಕರ್ಷಕವಾಗಿತ್ತು. ಇದು ಕೆಳಜಾತಿಗಳನ್ನು ಮತ್ತು ದಲಿತರನ್ನು ವಿಶೇಷವಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಸಜ್ಜುಗೊಳಿಸಿತು. ಲಾಲು ಪ್ರಸಾದ್ ಯಾದವ್, ಚೌಧರಿ ದೇವಿ ಲಾಲ್, ಮುಲಾಯಂ ಸಿಂಗ್ ಯಾದವ್, ರಾಮ್ ವಿಲಾಸ್ ಪಾಸ್ವಾನ್, ಶರದ್ ಪವಾರ್ ಮತ್ತಿತರ ಅನೇಕ ಒಬಿಸಿ, ದಲಿತ ಮತ್ತು ಪ್ರಾದೇಶಿಕ ಕೃಷಿಕ ಜಾತಿ ನಾಯಕರು ಕೇಂದ್ರಮಟ್ಟದಲ್ಲಿ ನಿಂತರು ಮತ್ತು ವಿವಿಧ ರಾಜ್ಯಗಳಲ್ಲಿ ಕೆಳ ಜಾತಿಯ ಅಸ್ಮಿತೆಯನ್ನು ಚುನಾವಣಾ ರಾಜಕೀಯದ ಅಗತ್ಯ ಅಂಶವನ್ನಾಗಿ ಮಾಡಿದರು.
ಕೃಷಿಕ ಜಾತಿಗಳನ್ನು ಅವರ ರಾಜಕೀಯ ಕದನಗಳಲ್ಲಿ ಸ್ವತಂತ್ರವಾಗಿ ಕಾಣಿಸುವ ಮೂಲಕ, ಸಾಮಾಜಿಕ ನ್ಯಾಯದ ರಾಜಕೀಯವು ಪ್ರಜಾಪ್ರಭುತ್ವವನ್ನು ಹೆಚ್ಚು ವಸ್ತುನಿಷ್ಠಗೊಳಿಸಿತು ಮತ್ತು ಅದನ್ನು ವಂಚಿತ ಜನಸಾಮಾನ್ಯರಿಗೆ ಹತ್ತಿರವಾಗಿಸಿತು. ಹೆಚ್ಚು ಮುಖ್ಯವಾಗಿ, ಇದು ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಬಲಪಂಥೀಯ ರಾಜಕೀಯದ ಓಟಕ್ಕೆ ತಡೆಯೊಡ್ಡಿತು. 1951ರಲ್ಲಿ ಜನಸಂಘದಿಂದ ಪ್ರಾರಂಭವಾದ ಮತ್ತು ನಂತರ ಭಾರತೀಯ ಜನತಾ ಪಕ್ಷವು (ಬಿಜೆಪಿ) ಮುನ್ನಡೆಸಿದ ಬಲಪಂಥೀಯ ರಾಜಕೀಯವು ಮೇಲ್ವರ್ಗದ ಜಾತಿಗಳು ಮತ್ತು ಬೂರ್ಜ್ವಾ ವರ್ಗದ ಹಿತಾಸಕ್ತಿಗಳನ್ನು ಪೂರೈಸುವ ವೇದಿಕೆಯಾಗಿದೆ ಮತ್ತು ರಾಜಕೀಯದಲ್ಲಿ ದಲಿತ-ಬಹುಜನ ಗುಂಪುಗಳ ಬೆಳೆಯುವುದಕ್ಕೆ ಅಡ್ಡಿಯಾಗಿದೆ ಎಂದು ಸಾಮಾಜಿಕ ನ್ಯಾಯದ ಪ್ರತಿಪಾದಕರಿಂದ ಟೀಕೆಗೊಳಗಾಯಿತು. ಆದರೂ, ಸಾಮಾಜಿಕ ನ್ಯಾಯದ ರಾಜಕೀಯವು ಬಹುಬೇಗ ತನ್ನ ಹೊಳಪನ್ನು ಕಳೆದುಕೊಂಡಿತು ಮತ್ತು ಕೋಮು ರಾಷ್ಟ್ರೀಯತೆಯ ಬಿಜೆಪಿಯ ಆಕ್ರಮಣಕಾರಿ ರಾಜಕೀಯವು ತನ್ನ ವಿಭಜಕ ಪಾತ್ರವನ್ನು ನಿರ್ವಹಿಸಲು ಅವಕಾಶ ಮಾಡಿಕೊಟ್ಟಿತು.
ಕಟುವಾದ ಹಿಂದುತ್ವದ ಪ್ರಚಾರವು ಕೇವಲ ಆಂಶಿಕ ಯಶಸ್ಸನ್ನು ತರುತ್ತದೆ ಮತ್ತು ಕೆಳವರ್ಗದ ಗುಂಪುಗಳನ್ನು ಸೇರಿಸದೆ ಪಕ್ಷವು ದೊಡ್ಡ ಚುನಾವಣಾ ವಿಜಯಗಳನ್ನು ಸಾಧಿಸುವುದು ಕಷ್ಟ ಎಂದು ಬಿಜೆಪಿ ಕ್ರಮೇಣ ಅರಿತುಕೊಂಡಿತು. ಆದ್ದರಿಂದ ಅದು ಸಾಂಸ್ಕೃತಿಕ ಕಾರ್ಯತಂತ್ರಗಳು ಮತ್ತು ಕಾರ್ಯಕ್ರಮಗಳನ್ನು, ಮುಖ್ಯವಾಗಿ ಕೆಳ ಒಬಿಸಿ ಗುಂಪುಗಳನ್ನು (ಉದಾಹರಣೆಗೆ, ಉತ್ತರ ಪ್ರದೇಶ ಮತ್ತು ಬಿಹಾರದ ಯಾದವೇತರ ಜಾತಿಗಳು) ತೊಡಗಿಸಿಕೊಳ್ಳಲು ಕಾರ್ಯಗತಗೊಳಿಸಿತು. ಸಾಮಾಜಿಕ ನ್ಯಾಯದ ರಾಜಕೀಯವು ಕೆಲವು ಪ್ರಬಲ ಜಾತಿಗಳಿಗೆ ಮಾತ್ರ ಲಾಭದಾಯಕವಾಗಿದೆ ಎಂದು ಆರೋಪಿಸಿತು. ಹಿಂದುತ್ವ ರಾಜಕಾರಣದ ಅಡಿಯಲ್ಲಿ, ಕೆಳ ಜಾತಿಯ ಗುಂಪುಗಳಿಗೆ ಅಧಿಕಾರ ವಲಯಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವನ್ನು ನೀಡಲಾಗುವುದು, ಅವರ ಸಬಲೀಕರಣಕ್ಕಾಗಿ ವಿಶೇಷ ಕಲ್ಯಾಣ ನೀತಿಗಳನ್ನು ಜಾರಿಗೊಳಿಸಲಾಗುವುದು ಮತ್ತು ಗೌರವಾನ್ವಿತ ಸಾಮಾಜಿಕ ಸ್ಥಾನವನ್ನು ಖಾತ್ರಿಪಡಿಸಲಾಗುವುದು ಎಂದು ಬಿಜೆಪಿ ಘೋಷಿಸಿತು.
2014ರಿಂದ, ಕೆಳವರ್ಗದ ಗುಂಪುಗಳ ಸಾಂಸ್ಕೃತಿಕ ಅಸ್ಮಿತೆಯನ್ನು ಬಳಸಿಕೊಂಡು ಬಿಜೆಪಿಯ ತಂತ್ರವು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಅಸೆಂಬ್ಲಿ ಮತ್ತು ಸಾರ್ವತ್ರಿಕ ಚುನಾವಣೆಗಳೆರಡರಲ್ಲೂ, ವಿಶೇಷವಾಗಿ ಬಿಹಾರ, ಉತ್ತರ ಪ್ರದೇಶ, ಹರ್ಯಾಣ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಅದರ ಮತ ಮತ್ತು ಸ್ಥಾನಗಳ ಹಂಚಿಕೆಯು ವೃದ್ಧಿಸಿರುವುದು, ಕೆಳಮಟ್ಟದ ದಲಿತ-ಒಬಿಸಿ ಗುಂಪುಗಳ ಹೆಚ್ಚುತ್ತಿರುವ ಬೆಂಬಲದಿಂದಾಗಿ.
ಇನ್ನೂ ಮುಖ್ಯವಾಗಿ, ಬಿಜೆಪಿಯ ಸಾಂಸ್ಕೃತಿಕ ರಾಜಕೀಯವು ಒಬಿಸಿ ಸಮುದಾಯಗಳ ಐಕ್ಯತೆಯೊಳಗೆ ಆಳವಾದ ಬಿರುಕುಗಳನ್ನು ಉಂಟುಮಾಡಿತು ಮತ್ತು ಸಾಮಾಜಿಕ ನ್ಯಾಯದ ರಾಜಕೀಯದ ಪ್ರಗತಿಯನ್ನು ನಿಲ್ಲಿಸಿತು. ಹಿಂದುತ್ವ ರಾಜಕೀಯದಿಂದ ಆಮಿಷಕ್ಕೊಳಗಾಗಿ ಕೆಳಹಂತದ ಒಬಿಸಿ ಗುಂಪುಗಳು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಸಮಾಜವಾದಿ ಪಕ್ಷದಂತಹ ಪಕ್ಷಗಳನ್ನು ತೊರೆದು ಬಿಜೆಪಿಯನ್ನು ನೆಚ್ಚತೊಡಗಿದವು.
ಆದರೂ, ಕೆಳವರ್ಗದ ಗುಂಪುಗಳ ಬೆಂಬಲದಿಂದ ಬಿಜೆಪಿ ಲಾಭ ಪಡೆದಿದ್ದರೂ, ಒಬಿಸಿಗಳ ಪಾಲಿಗೆ ದಕ್ಕಿದ್ದು ಅಷ್ಟರಲ್ಲೇ ಇದೆ. ಅವು ಹೆಚ್ಚುಕಡಿಮೆ ಇದ್ದ ಹಾಗೆಯೇ ಇವೆ. ಅವರು ತಮ್ಮ ವರ್ಗ ಅಥವಾ ಸಾಮಾಜಿಕ ಪರಿಸ್ಥಿತಿಗಳಲ್ಲಿ ಯಾವುದೇ ನಿರ್ದಿಷ್ಟ ಪ್ರಭಾವಶಾಲಿ ಸಬಲೀಕರಣವನ್ನು ಕಂಡಿಲ್ಲ. ಅಧಿಕಾರದ ಪ್ರಮುಖ ಸ್ಥಳಗಳಲ್ಲಿ ಮತ್ತು ನಿರ್ಣಾಯಕ ಆರ್ಥಿಕ ಸ್ವತ್ತುಗಳ ನಿಯಂತ್ರಕರಾಗಿ (ಉದಾಹರಣೆಗೆ ದೊಡ್ಡ ವ್ಯಾಪಾರ, ಭೂಮಿ, ಉತ್ಪಾದನಾ ಕೈಗಾರಿಕೆಗಳು, ಇತ್ಯಾದಿ) ಅವರ ಪ್ರಾತಿನಿಧ್ಯವು ಅತ್ಯಲ್ಪ. ಈ ಎಲ್ಲಾ ಕ್ಷೇತ್ರಗಳಲ್ಲಿ ಸಾಮಾಜಿಕ ಗಣ್ಯರದ್ದೇ ಪ್ರಾಬಲ್ಯ.
ಒಬಿಸಿ ರಾಜಕೀಯದ ಮರುಹುಟ್ಟು
ಜಾತಿ ಗಣತಿಯೊಂದಿಗೆ, ಸಾಮಾಜಿಕ ನ್ಯಾಯದ ರಾಜಕೀಯದ ಮುಂಚೂಣಿಯಲ್ಲಿರುವವರು, ವಿಶೇಷವಾಗಿ ಬಿಹಾರದಲ್ಲಿ, ಒಬಿಸಿ ರಾಜಕೀಯವನ್ನು ಪುನರುಜ್ಜೀವನಗೊಳಿಸಲು ಬಯಸುತ್ತಾರೆ. ಬಿಹಾರದಲ್ಲಿ, ಆರ್‌ಜೆಡಿ ಮತ್ತು ಸಂಯುಕ್ತ ಜನತಾ ದಳ ನಡುವಿನ ಮೈತ್ರಿಯೊಂದಿಗೆ, ಪ್ರಬಲವಾದ ಯಾದವ್, ಕುರ್ಮಿ ಮತ್ತು ಮುಸ್ಲಿಮ್ ವಿಭಾಗಗಳು ಬಲಗೊಂಡಿವೆ. ಆದಾಗ್ಯೂ, ಇತರ ಒಬಿಸಿಗಳಿಂದ, ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಂದ ಇದೇ ರೀತಿಯ ಬೆಂಬಲವನ್ನು ಪಡೆಯುವುದು ಮೈತ್ರಿಕೂಟಕ್ಕೆ ಸುಲಭವಿಲ್ಲ. ಹಾಗಿದ್ದರೂ, ಒಬಿಸಿ ಸಮುದಾಯಗಳ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯ ಸಮಸ್ಯೆಗಳನ್ನು ಎತ್ತುವ ಮೂಲಕ, ಸಾಮಾಜಿಕ ನ್ಯಾಯದ ರಾಜಕೀಯದ ಹೊಸ ಚಕ್ರವು ಬಿಜೆಪಿಯನ್ನು ಹಿಂದಕ್ಕೆ ತಳ್ಳಬಹುದು ಎಂದು ಭಾವಿಸಲಾಗಿದೆ.
ಜಾತಿ ಗಣತಿಯಲ್ಲಿ ಒಬಿಸಿಗಳ ಎಣಿಕೆಯು ವಿವಿಧ ರಾಜ್ಯಗಳಲ್ಲಿ ಅವರ ಸಂಖ್ಯಾಬಲದ ಬಗ್ಗೆ ಪಕ್ಕಾ ದತ್ತಾಂಶವನ್ನು ಒದಗಿಸುತ್ತದೆ. ವಿವಿಧ ರಾಜ್ಯಗಳ ಸಂಸ್ಥೆಗಳಲ್ಲಿ ಒಬಿಸಿಗಳ ಪಾಲನ್ನು ಪರೀಕ್ಷಿಸಲು ಈ ಸಂಖ್ಯೆಗಳನ್ನು ಮತ್ತಷ್ಟು ಬಳಸಿಕೊಳ್ಳಲಾಗುತ್ತದೆ. ನ್ಯಾಯಾಂಗ, ಶಿಕ್ಷಣ ಸಂಸ್ಥೆಗಳು ಮತ್ತು ಮಾಧ್ಯಮದಂತಹ ಹೆಚ್ಚಿನ ಅಧಿಕಾರ ಕ್ಷೇತ್ರಗಳು ಸಾಮಾಜಿಕ ಗಣ್ಯರಿಂದ ನಿಯಂತ್ರಿಸಲ್ಪಟ್ಟಿವೆ ಮತ್ತು ಏಕಸ್ವಾಮ್ಯವನ್ನು ಹೊಂದಿದ್ದು, ದಲಿತ-ಬಹುಜನ ಗುಂಪುಗಳಿಗೆ ನೆಪಮಾತ್ರ ಅವಕಾಶವನ್ನಷ್ಟೆ ನೀಡುತ್ತದೆ ಎಂಬುದು ಸ್ಪಷ್ಟವಾಗಿದೆ. ಜಾತಿ ಗಣತಿಯು ಒಬಿಸಿ ಜನಸಂಖ್ಯೆಯ ಸಾಮಾಜಿಕ-ಆರ್ಥಿಕ ಸೂಕ್ಷ್ಮ ವ್ಯತ್ಯಾಸಗಳನ್ನು ಒದಗಿಸುತ್ತದೆ ಮತ್ತು ವಿವಿಧ ಸಂಸ್ಥೆಗಳಲ್ಲಿ ಅವರ ಪ್ರಾತಿನಿಧ್ಯವು ಅವರ ಜನಸಂಖ್ಯೆಯ ಗಾತ್ರಕ್ಕೆ ಅನುಗುಣವಾಗಿಲ್ಲ ಎಂಬುದನ್ನು ತೋರಿಸುತ್ತದೆ. ಇಂತಹ ಅನಿಶ್ಚಿತ ಸಾಮಾಜಿಕ ಸತ್ಯವನ್ನು ಒಪ್ಪಿಕೊಳ್ಳುವುದರೊಂದಿಗೆ, ಸಾಮಾಜಿಕವಾಗಿ ಅಂಚಿನಲ್ಲಿರುವ ಗುಂಪುಗಳಲ್ಲಿ ಹೊಸ ರಾಜಕೀಯ ಪ್ರಜ್ಞೆಯು ಹೊರಹೊಮ್ಮಬಹುದು, ಸಾಮಾಜಿಕ ನ್ಯಾಯಕ್ಕಾಗಿ ಹೊಸ ಚಳವಳಿಯನ್ನು ಪ್ರಾರಂಭಿಸಲು ಅವರನ್ನು ಇದು ಪ್ರೇರೇಪಿಸಬಹುದು. ಹೀಗಾದಾಗ ಬಿಜೆಪಿ ಮೂಲೆಗುಂಪಾಗುವುದು ಖಚಿತ.
ಬಿಜೆಪಿಯ 'ಅಂತರ್ಗತ ಹಿಂದುತ್ವ' ಭಾರತದ ಪ್ರಜಾಪ್ರಭುತ್ವದಲ್ಲಿ ಆಡಿದ ಆಟವೇ ಬೇರೆಯಿತ್ತು. ಕಳೆದ ದಶಕದಲ್ಲಿ, ಸಾಮಾಜಿಕ ನ್ಯಾಯದ ರಾಜಕೀಯವು ಹಿಂದುತ್ವದ ಬಲಾಢ್ಯತೆಗೆ ಸವಾಲು ಹಾಕಿದ್ದು ಕೆಲವೇ ಸೈದ್ಧಾಂತಿಕ ಅಥವಾ ಕಾರ್ಯತಂತ್ರದ ಅಸ್ತ್ರಗಳ ಮೂಲಕ. ಆದರೆ ಸಾಂಪ್ರದಾಯಿಕ ಅಧಿಕಾರಸ್ಥರ ವಿರುದ್ಧ ಅಂಚಿನಲ್ಲಿರುವ ಸಮುದಾಯಗಳನ್ನು ಒಗ್ಗೂಡಿಸಲು ಸಮರ್ಥವಾಗುವುದು ಒಬಿಸಿಗಳ ಆರ್ಥಿಕ ಮತ್ತು ಸಾಮಾಜಿಕ ಕೊರತೆಗಳ ಮೇಲಿನ ಹೊಸ ರಾಜಕೀಯ ಮಾತುಗಾರಿಕೆ. ಸಾಮಾಜಿಕ ನ್ಯಾಯದ ರಾಜಕೀಯವನ್ನು ಮತ್ತೊಮ್ಮೆ ಪುನರುಜ್ಜೀವನಗೊಳಿಸಲು ಇದು ಖಂಡಿತವಾಗಿಯೂ ಸಹಾಯ ಮಾಡುತ್ತದೆ ಎಂದು ಹೇಳುವುದು ಕಷ್ಟಕರವಾದರೂ, ಇದು ಇತರ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಆರ್ಥಿಕ ಕಾಳಜಿಗಳನ್ನು ಮುಖ್ಯವಾಹಿನಿಯ ರಾಜಕೀಯ ಮಾತಿನೊಳಗೆ ತರುತ್ತದೆ. ದಲಿತರು, ಬಹುಜನರು ಮತ್ತು ಆದಿವಾಸಿಗಳನ್ನು ರಾಜ್ಯದ ಸಂಸ್ಥೆಗಳು ಮತ್ತು ಇತರ ನಿರ್ಣಾಯಕ ಅಧಿಕಾರ ಕ್ಷೇತ್ರಗಳಲ್ಲಿ ಸೇರಿಸುವುದರಿಂದ ಭಾರತವನ್ನು ಹೆಚ್ಚು ಪ್ರಜಾಪ್ರಭುತ್ವ ಮತ್ತು ವಸ್ತುನಿಷ್ಠವಾಗಿಸುತ್ತದೆ ಎಂಬ ನೈತಿಕ ವಾದವು ಭವಿಷ್ಯದಲ್ಲಿ ಸವಾಲುಗಳಿಗೆ ಹೆಚ್ಚು ತೆರೆದುಕೊಳ್ಳಲಿದೆ.
(ಕೃಪೆ: thewire.in)