ಮುಸ್ಲಿಮ್ ದ್ವೇಷವೇ ಬಿಜೆಪಿಯ ಬಂಡವಾಳ: ರಮಾನಾಥ ರೈ

Update: 2023-01-21 17:35 GMT

ಮಂಗಳೂರು: ಬಿಜೆಪಿಗೆ ಮುಸ್ಲಿಮ್ ದ್ವೇಷವೇ ಬಂಡವಾಳ. ಅದಿಲ್ಲದೆ ಹೋದರೆ ಅವರ ಅಂಗಡಿಗೆ ಬಾಗಿಲು ಹಾಕಬೇಕಾದೀತು ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ. ರಮಾನಾಥ ರೈ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ತಮ್ಮ ಹೆಸರಿನ ಜೊತೆ ಪವಿತ್ರ ಕ್ಷೇತ್ರವಾದ ಕಟೀಲುವಿನ ಹೆಸರನ್ನು ಇಟ್ಟುಕೊಂಡು ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗುವ ಮಾತುಗಳನ್ನಾಡುತ್ತಿದ್ದಾರೆ. ಅದಕ್ಕಾಗಿ ಅವರನ್ನು ಕೇವಲ ನಳಿನ್ ಕುಮಾರ್ ಎಂದು ಮಾತ್ರ ಕರೆಯುವುದು ಸೂಕ್ತ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದವರು ತಿಳಿಸಿದ್ದಾರೆ.

ಅಭಿವೃದ್ಧಿಯ ಬಗ್ಗೆ ಮಾತನಾಡುವ ಬದಲು ಲವ್ ಜಿಹಾದ್ ಬಗ್ಗೆ ಮಾತನಾಡಲು ಕರೆ ನೀಡುವ ನಳಿಕ್ ಹೇಳಿಕೆ ಅವರ ರಾಜಕೀಯ ದಿವಾಳಿತನದ ಪ್ರತೀಕ ಎಂದು ರಮಾನಾಥ ರೈ ಟೀಕಿಸಿದ್ದಾರೆ.

ತಮ್ಮ ಬೇಡಿಕೆ ಈಡೇರಿಕೆಗಾಗಿ ಧರಣಿ ನಡೆಸುತ್ತ್ತಿರುವ ಅಂಗನವಾಡಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ನಡೆಸಿ, ಬಲವಂತವಾಗಿ ಧರಣಿ ಸ್ಥಳದಿಂದ ಹೊರಹಾಕುವ ಪ್ರಯತ್ನ ನಡೆದಿದೆ. ದ.ಕ. ಜಿಲ್ಲೆಯಿಂದಲೂ ಪ್ರತಿನಿಧಿಗಳು ಅದರಲ್ಲಿ ಭಾಗವಹಿಸಿದ್ದರು. ಮಧ್ಯರಾತ್ರಿ ಅಸುರಕ್ಷಿತ ಜಾಗದಲ್ಲಿ ಅವರನ್ನು ಬಿಟ್ಟು, ಊಟ ಇಲ್ಲದೆ ಪರದಾಡುವಂತೆ ಮಾಡಲಾಗಿದೆ. ಈ ರೀತಿಯ ದೌರ್ಜನ್ಯ ಖಂಡನೀಯ ಎಂದು ರಮಾನಾಥ ರೈ ಹೇಳಿದರು.

ಗೃಹಜ್ಯೋತಿ, ಗೃಹಲಕ್ಷ್ಮೀ ಗ್ಯಾರಂಟಿ ಕಾರ್ಯಕ್ರಮ: ಕಾಂಗ್ರೆಸ್ ನೀಡಿರುವ ಭರವಸೆ ಜುಮ್ಲಾ ಅಲ್ಲ-ನುಡಿದಂತೆ ನಡೆದು ತೋರಿಸಿದ ಪಕ್ಷ. ಗೃಹಲಕ್ಷ್ಮೀ ಪ್ರತಿ ಗೃಹಿಣಿಗೆ ಮಾಸಿಕ 2,000 ರೂ. ನೀಡುವ ಯೋಜನೆ ಮತ್ತು 200 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಜಾರಿಯಾಗಲಿದೆ. ಈ ಬಗ್ಗೆ ಬಿಜೆಪಿಯ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ರಮಾನಾಥ ರೈ ಮನವಿ ಮಾಡಿದ್ದಾರೆ.

ಕೇಂದ್ರ ಮಾತ್ರವಲ್ಲದೆ ರಾಜ್ಯದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಬಡವರ ಆರ್ಥಿಕ ಸುಧಾರಣೆಗೆ ಪೂರಕವಾದ ಯೋಜನೆಗಳನ್ನು ಕಾಂಗ್ರೆಸ್ ನೀಡಿದೆ. ಮುಂದೆಯೂ ನೀಡಿರುವ ಭರವಸೆಯನ್ನು ಈಡೇರಿಸಲಿದೆ ಎಂದು ರಮಾನಾಥ ರೈ ತಿಳಿಸಿದರು.

71 ಸಾವಿರ ಕೋಟಿ ಕೃಷಿಕರ ಸಾಲ ಮನ್ನಾ ಮಾಡಿದ ಕೀರ್ತಿ ಕಾಂಗ್ರೆಸ್‌ಗಿದೆ. ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ವಿಜಯ ಮಲ್ಯ, ನೀರವ್ ಮೋದಿ, ದಾವೂದ್ ಇಬ್ರಾಹೀಂ ಮತ್ತಿತರರನ್ನು ಭಾರತಕ್ಕೆ ತರಿಸುವುದಾಗಿ ಬಿಜೆಪಿ ಹೇಳಿತ್ತು. ಆದರೆ ಎಂಟು ವರ್ಷಗಳಾದರೂ ಆ ಕಾರ್ಯ ಮಾಡಲಾಗಿಲ್ಲ ಎಂದು ಟೀಕಿಸಿದರು.
ಜ.22ರ ಪ್ರಜಾಧ್ವನಿ ಯಾತ್ರೆ ಕಾಂಗ್ರೆಸ್ ಗೆ ಇನ್ನಷ್ಟು ಪ್ರೇರಣೆ ನೀಡಲಿದೆ ಎಂದು ರಮಾನಾಥ ರೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಹರಿನಾಥ್, ಭಾಸ್ಕರ ಕೆ., ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶಾಲೆಟ್ ಪಿಂಟೊ, ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮನಪಾ ವಿಪಕ್ಷ ನಾಯಕ ನವೀನ್ ಡಿಸೋಜ, ಮುಖಂಡರಾದ ಪೃಥ್ವಿರಾಜ್, ಮುಹಮ್ಮದ್ ಕುಂಜತ್ತಬೈಲ್, ಮುಸ್ತಫ, ನೀರಜ್ ಪಾಲ್, ಶಾಹುಲ್ ಹಮೀದ್, ಉಮೇಶ್ ದಂಡೆಕೇರಿ, ಗಣೇಶ್ ಪೂಜಾರಿ, ಅಪ್ಪಿ, ದಿನೇಶ್ ರೈ, ಸಮದ್ ಅಡ್ಯಾರ್, ಶಬೀರ್ ಸಿದ್ಧಕಟ್ಟೆ, ನಝೀರ್ ಬಜಾಲ್ ಉಪಸ್ಥಿತರಿದ್ದರು.

Similar News