ಚೀನಾದ ಜನಸಂಖ್ಯೆಯ 80%ದಷ್ಟು ಮಂದಿ ಕೋವಿಡ್ ಸೋಂಕು ಬಾಧಿತರು: ವರದಿ‌

Update: 2023-01-21 18:24 GMT

ಬೀಜಿಂಗ್, ಜ.21: ಡಿಸೆಂಬರ್ನಲ್ಲಿ ಶೂನ್ಯ ಕೋವಿಡ್ ನೀತಿಯನ್ನು ಕೈಬಿಟ್ಟು ನಿರ್ಬಂಧ ಸಡಿಲಿಸಿದ ಬಳಿಕ ಚೀನಾದಲ್ಲಿ ಮತ್ತೆ ಉಲ್ಬಣಿಸಿದ ಕೋವಿಡ್ ಸಾಂಕ್ರಾಮಿಕದಿಂದ ದೇಶದ 80%ದಷ್ಟು ಜನಸಂಖ್ಯೆ ಸೋಂಕಿಗೆ ಒಳಗಾಗಿದೆ ಎಂದು ಚೀನಾದ ರೋಗನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಮುಖ್ಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ವು ಝುನ್ಯು ಶನಿವಾರ ಹೇಳಿದ್ದಾರೆ.

ಮುಂದಿನ ಎರಡು ಅಥವಾ ಮೂರು ತಿಂಗಳಲ್ಲಿ ಚೀನಾದಲ್ಲಿ ಮತ್ತೊಮ್ಮೆ ಕೋವಿಡ್-19 ಸಾಂಕ್ರಾಮಿಕ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದವರು ಎಚ್ಚರಿಕೆ ನೀಡಿದ್ದಾರೆ.ಚೀನಾದಲ್ಲಿ ಈಗ ವಸಂತ ಹಬ್ಬ ಅಥವಾ ಚಾಂದ್ರಮಾನ ಹೊಸವರ್ಷದ ಸಂಭ್ರಮ ನಡೆಯುತ್ತಿದ್ದು ಜನತೆ ದೇಶದ ಒಂದೆಡೆಯಿಂದ ಇನ್ನೊಂದೆಡೆ ಸಾಮೂಹಿಕವಾಗಿ ಪ್ರವಾಸ ಹೋಗುವುದು ಇದರ ವೈಶಿಷ್ಟ್ಯವಾಗಿದೆ. ಈ ಸಾಮೂಹಿಕ ಜನಸಂಚಾರವು ಸಾಂಕ್ರಾಮಿಕವನ್ನು ಹರಡಬಹುದು ಮತ್ತು ಕೆಲವು ಪ್ರದೇಶಗಳಲ್ಲಿ ಸೋಂಕನ್ನು ಹೆಚ್ಚಿಸಬಹುದು ಎಂದವರು ಹೇಳಿದ್ದಾರೆ. 

ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಚಾಂದ್ರಮಾನ ಹೊಸ ವರ್ಷಾಚರಣೆಯನ್ನು ಚೀನಾದಲ್ಲಿ ನಿಷೇಧಿಸಲಾಗಿತ್ತು. ಆದರೆ, ಕೋವಿಡ್ ನಿರ್ಬಂಧವನ್ನು ವಿರೋಧಿಸಿ ಕಳೆದ ಡಿಸೆಂಬರ್ನಲ್ಲಿ ಚೀನಾದಲ್ಲಿ ನಡೆದ ಬೃಹತ್ ಪ್ರತಿಭಟನೆಯ ಬಳಿಕ ಈ ವರ್ಷ ಸಂಭ್ರಮಾಚರಣೆಗೆ ಅವಕಾಶ ನೀಡಲಾಗಿದೆ. ಸಾವಿರಾರು ಮಂದಿ ಒಂದೆಡೆಯಿಂದ ಇನ್ನೊಂದೆಡೆಗೆ ಪ್ರವಾಸ ಹೋಗುವುದರಿಂದ ಹೆಚ್ಚಿನ ಮೂಲಸೌಕರ್ಯವಿಲ್ಲದ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಉಲ್ಬಣಿಸುವ ಆತಂಕ ಹೆಚ್ಚಿಸಿದೆ. ಡಿಸೆಂಬರ್ನಲ್ಲಿ ಕೋವಿಡ್ ನಿರ್ಬಂಧ ಸಡಿಲಿಸಿದ ಬಳಿಕ ಜನವರಿ 12ರವರೆಗೆ ಚೀನಾದಲ್ಲಿ ಕೋವಿಡ್ ಸೋಂಕಿನಿಂದಾಗಿ ಆಸ್ಪತ್ರೆಯಲ್ಲಿ ಸುಮಾರು 60,000 ಜನ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದರೆ ಈ ಅಂಕಿಅಂಶ ಸಮಗ್ರವಾಗಿಲ್ಲ. ಮನೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಮಾಹಿತಿಯನ್ನು ಇದು ಒಳಗೊಂಡಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

 ಉ.ಕೊರಿಯಾ ವಲಸಿಗರಿಗೆ ಚೀನಾದಲ್ಲಿ ಕೋವಿಡ್ ಲಸಿಕೆ ನಿರಾಕರಣೆ: ವರದಿ 

ಉತ್ತರ ಕೊರಿಯಾದಿಂದ ಪಲಾಯನ ಮಾಡಿ ಚೀನಾದಲ್ಲಿ ಆಶ್ರಯ ಪಡೆದಿರುವ ಜನರಿಗೆ ಚೀನಾದಲ್ಲಿ ಕೋವಿಡ್ ಲಸಿಕೆ ನಿರಾಕರಿಸುವ ಮೂಲಕ ಅವರ ಜೀವವನ್ನು ಅಪಾಯಕ್ಕೆ ದೂಡಲಾಗುತ್ತಿದೆ ಎಂದು ಅಮೆರಿಕ ಮೂಲದ ರೇಡಿಯೊ ಜಾಲ ‘ನೆಟ್ವರ್ಕ್ ವಾಯ್ಸಿ ಆಫ್ ಅಮೆರಿಕಾ’ ವರದಿ ಮಾಡಿದೆ.
  

ಚೀನಾವು ಕೋವಿಡ್-19 ನಿರ್ಬಂಧ ತೆರವುಗೊಳಿಸಿದ್ದರೂ ಉತ್ತರ ಕೊರಿಯಾದ ನಿರಾಶ್ರಿತರಿಗೆ ಕೋವಿಡ್ ಲಸಿಕೆ ನಿರಾಕರಿಸುತ್ತಿದೆ. ಗುರುತು ಪತ್ರವಿಲ್ಲದ ಕಾರಣ ವಲಸಿಗರು ತೀವ್ರ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದರೂ ಕೋವಿಡ್ ಚಿಕಿತ್ಸೆ ಲಭಿಸುತ್ತಿಲ್ಲ. ಕೋವಿಡ್ ಲಸಿಕೆ ಪಡೆದ ಪ್ರಮಾಣಪತ್ರ ಇರದಿದ್ದರೆ ದೇಶದ ಒಳಗೆ ಅಥವಾ ದೇಶದಿಂದ ಹೊರಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಚೀನಾದಿಂದ ದಕ್ಷಿಣ ಕೊರಿಯಾಕ್ಕೆ ಪಲಾಯನ ಮಾಡಲು ಮುಂದಾದ ಉತ್ತರ ಕೊರಿಯಾದ ನಿರಾಶ್ರಿತರನ್ನು ಗಡಿಭಾಗದಲ್ಲಿ ಚೀನಾದ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ವರದಿ ಹೇಳಿದೆ.
 
ಉತ್ತರ ಕೊರಿಯಾದ ನಿಕಟ ಮಿತ್ರನಾಗಿರುವ ಚೀನಾವು ಉತ್ತರ ಕೊರಿಯಾದಿಂದ ಓಡಿಬಂದಿರುವವರನ್ನು ನಿರಾಶ್ರಿತರು ಎಂದು ಪರಿಗಣಿಸದೆ, ಅಕ್ರಮ ವಲಸಿಗರು ಎಂದು ಪರಿಗಣಿಸುತ್ತಿದೆ. ಉತ್ತರ ಕೊರಿಯಾ-ಚೀನಾದ ನಡುವಿನ ಗಡಿ ಒಪ್ಪಂದದ ಪ್ರಕಾರ, ಉತ್ತರ ಕೊರಿಯಾದಿಂದ ಓಡಿಬರುವ ಜನರನ್ನು ಬಲವಂತವಾಗಿ ಮತ್ತೆ ಉತ್ತರಕೊರಿಯಾಕ್ಕೆ ಚೀನಾ ಗಡೀಪಾರು ಮಾಡುತ್ತಿದೆ. ಹೀಗೆ ಗಡೀಪಾರುಗೊಂಡವರು ಉತ್ತರಕೊರಿಯಾದಲ್ಲಿ ಚಿತ್ರಹಿಂಸೆ, ಜೀತ, ಲೈಂಗಿಕ ದೌರ್ಜನ್ಯ, ಬಂಧನ ಕೇಂದ್ರದಲ್ಲಿ ವಾಸ ಇತ್ಯಾದಿ ಹಿಂಸೆ ಅನುಭವಿಸಬೇಕಾಗಿದೆ ಎಂದು ನೆಟ್ವರ್ಕ್ ವಾಯ್ಸಾ ಆಫ್ ಅಮೆರಿಕಾ’ದ ವರದಿ ಹೇಳಿದೆ.

Similar News