ಮೊರ್ಬಿ ದುರಂತ: ಒರೇವಾ ಪ್ರವರ್ತಕನ ವಿರುದ್ಧ ಬಂಧನ ವಾರೆಂಟ್

Update: 2023-01-22 02:55 GMT

ರಾಜ್‌ಕೋಟ್: ಮೊರ್ಬಿ ತೂಗುಸೇತುವೆ ದುರಂತದಲ್ಲಿ ಒರೇವಾ ಸಮೂಹದ ಪಾತ್ರದ ಬಗ್ಗೆ ಎರಡೂವರೆ ತಿಂಗಳು ಮೌನವಾಗಿದ್ದ ಗುಜರಾತ್ ಪೊಲೀಸರು ಕೊನೆಗೂ ಅಜಂತಾ-ಒರೇವಾ ಸಮೂಹದ ಪ್ರವರ್ತಕ ಜಯಸುಖ್ ಪಟೇಲ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ್ದಾರೆ. ಸದ್ಯದಲ್ಲೇ ಸಲ್ಲಿಕೆಯಾಗಲಿರುವ ಆರೋಪಪಟ್ಟಿಯಲ್ಲಿ ಹೆಸರಿಸಿರುವ ಆರೋಪಿಗಳ ಪೈಕಿ ಪಟೇಲ್ ಹೆಸರೂ ಸೇರಿದೆ ಎನ್ನಲಾಗಿದೆ.

ಸದ್ಯದಲ್ಲೇ ಪಟೇಲ್ ವಿರುದ್ಧ ಪೊಲೀಸರು ಲುಕೌಟ್ ನೋಟಿಸ್ ಹೊರಡಿಸಲಿದ್ದಾರೆ. ಕಳೆದ ವರ್ಷದ ಅಕ್ಟೋಬರ್ 30ರಂದು ಕುಸಿದು ಬಿದ್ದು 135 ಜನರ ಸಾವಿಗೆ ಕಾರಣವಾಗಿದ್ದ ವಿಕ್ಟೋರಿಯಾ ಕಾಲದ ಈ ತೂಗುಸೇತುವೆಯ ನವೀಕರಣ, ಕಾರ್ಯಾಚರಣೆ ಮತ್ತು ನಿರ್ವಹಣೆ ಲೈಸನ್ಸ್ ಒರೇವಾ ಸಮೂಹದ ಪಾಲಾಗಿತ್ತು.

ಕಳೆದ ಒಂದೂವರೆ ತಿಂಗಳಿನಿಂದ ಪಟೇಲ್ ಬಂಧನದಿಂದ ತಪ್ಪಿಸಿಕೊಂಡಿದ್ದ ಹಾಗೂ ವಿಚಾರಣೆಗಾಗಿ ನೀಡಿದ ಸಮನ್ಸ್ ನಿರ್ಲಕ್ಷಿಸಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಎರಡು ತಿಂಗಳುಗಳಲ್ಲಿ ಆತನ ಮನೆ, ಫ್ಯಾಕ್ಟರಿ ಹಾಗೂ ಅಡಗಿರುವ ಸಂದೇಹ ಇರುವ ಹಲವು ಅಡಗುದಾಣಗಳ ಮೇಲೆ ದಾಳಿ ಮಾಡಿದ್ದೇವೆ. ಹಲವು ಬಾರಿ ವಿಚಾರಣೆಗಾಗಿ ಸಮನ್ಸ್ ನೀಡಲಾಗಿತ್ತು. ಅಂತಿಮವಾಗಿ ಅಪರಾಧ ದಂಡಸಂಹಿತೆ ಸೆಕ್ಷನ್ 70ರ ಅನ್ವಯ ಅರೆಸ್ಟ್ ವಾರೆಂಟ್ ನೀಡಲಾಗಿದೆ. 10 ದಿನಗಳ ಬಳಿಕ ಲುಕೌಟ್ ನೋಟಿಸ್ ನೀಡಲಾಗುತ್ತಿದೆ: ಎಂದು ಉನ್ನತ ಅಧಿಕಾರಿಯೊಬ್ಬರು ವಿವರ ನೀಡಿದ್ದಾರೆ.

ಈ ದುರಂತದ ಬಗ್ಗೆ ತನಿಖೆ ನಡೆಸಲು ರಚಿಸಿದ್ದ ವಿಶೇಷ ತನಿಖಾ ತಂಡ, ಸೇತುವೆ ದುರಸ್ತಿ ಕಾರ್ಯ ಕಳಪೆಯಾಗಿದ್ದನ್ನು ಬಹಿರಂಗಪಡಿಸಿತ್ತು. ಮೊರ್ಬಿ ನಗರಪಾಲಿಕೆಯ ಗಮನಕ್ಕೆ ತರದೇ ಮತ್ತು ಕಡ್ಡಾಯ ಫಿಟ್ನೆಸ್ ಪರೀಕ್ಷೆ ನಡೆಸದೇ ದೀಪಾವಳಿ ರಜೆ ಸಂದರ್ಭದಲ್ಲಿ ಒರೇವಾ ಸಮೂಹ ಸೇತುವೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿತ್ತು.

Similar News