ಅರಮನೆ ಮೈದಾನದಲ್ಲಿ ಮೇಳೈಸಿದ ಸಿರಿಧಾನ್ಯ!

ಸಾವಯವ ಕೃಷಿ, ಪರಿಸರ ಸ್ನೇಹಿ ಉತ್ಪನ್ನಗಳ ವೈವಿಧ್ಯಮಯ ಮೇಳ

Update: 2023-01-22 04:06 GMT

ಬೆಂಗಳೂರು, ಜ. 22: ‘ಸಿರಿಧಾನ್ಯ ಆರೋಗ್ಯಯುತ ಜೀವನ ಶೈಲಿಯ ಸಂಜೀವಿನಿ’ ಎಂದು ಕೃಷಿ ತಜ್ಞರು ವರದಿಗಳ ಮುಖೇನ ಸಾಬೀತುಪಡಿಸಿದ್ದಾರೆ. ಅಂತೆಯೇ ರಾಜ್ಯದಲ್ಲಿ ಸಾವಯವ, ಸಿರಿಧಾನ್ಯಗಳಿಂದ ಅನೇಕ ರೋಗರುಜಿನಗಳು, ದೈಹಿಕ ಕುಂದುಕೊರತೆಗಳು ನಿವಾರಣೆಯಾಗಿರುವ ಉದಾಹರಣೆಗಳು ಕಂಡುಬಂದಿವೆ. ಈ ಹಿನ್ನೆಲೆ ಸರಕಾರವು ಸಿರಿಧಾನ್ಯಗಳ ಬಳಕೆಗೆ ಹೆಚ್ಚಿನ ಒತ್ತು ನೀಡಿದ್ದು, ರಾಜ್ಯದಲ್ಲಿ ಸಿರಿಧಾನ್ಯ ಪೂರೈಕೆ ದುಪ್ಪಟ್ಟುಗೊಳಿಸುವ ಯೋಜನೆಯನ್ನು ಕೈಗೊಂಡಿದೆ.

ಇದರ ಭಾಗವಾಗಿ ಕೃಷಿ ಇಲಾಖೆ ಆಶ್ರಯದೊಂದಿಗೆ ರೈತರಿಗೆ ಸಾವಯವ ಮತ್ತು ಸಿರಿಧಾನ್ಯ ಮಾರುಕಟ್ಟೆ ವಿಸ್ತರಣೆ ಹಾಗೂ ಆರೋಗ್ಯಕರ ಜೀವನ ಶೈಲಿಗೆ ಸಿರಿಧಾನ್ಯಗಳ ಮಹತ್ವ ತಿಳಿಸುವ ಉದ್ದೇಶದಿಂದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಮೂರು ದಿನಗಳ ಅಂತರ್‌ರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳವನ್ನು ಆಯೋಜಿಸಿದೆ.

ಶುಕ್ರವಾರ ಆರಂಭವಾಗಿರುವ ಈ ಮೇಳದಲ್ಲಿ ಮಾರಾಟಗಾರರು, ರೈತರು, ಖರೀದಿದಾರರ ಸಮಾಗಮವೇ ನಡೆದಿದೆ. ಸಿರಿಧಾನ್ಯ ಆಹಾರ ಪದಾರ್ಥಗಳಷ್ಟೇ ಅಲ್ಲದೆ, ಹೊರರಾಜ್ಯಗಳ ಸಿರಿಧಾನ್ಯಗಳ ಆಹಾರ ಪದಾರ್ಥಗಳು ಒಂದೇ ಸೂರಿನಡಿಯಲ್ಲಿ ಸಿಗುತ್ತದೆ. ಇನ್ನು ಮೇಳದಲ್ಲಿ ರಾಜ್ಯದ ಪ್ರಮುಖ ತೃಣಧಾನ್ಯ ಉತ್ಪನ್ನಗಳ ಮಾರಾಟ ಸೇರಿದಂತೆ ಮತ್ತಿತರ ವಿಶೇಷತೆಗಳನ್ನು ಕಾಣಬಹುದಾಗಿದ್ದು, ರಾಗಿ, ಹಾರಕ, ಸಾಮೆ, ಊದಲು, ಕೊರಲು, ಬರಗು, ನವಣೆ, ಸಜ್ಜೆಯಂತಹ ವೈವಿಧ್ಯಮಯ ಸಿರಿಧಾನ್ಯಗಳು, ಮತ್ತವುಗಳಿಂದ ಸಿದ್ಧಪಡಿಸಿದ ಆಹಾರ ಪದಾರ್ಥಗಳು ಜನರನ್ನು ಆಕರ್ಷಿಸುತ್ತವೆ.

ನುರಿತ ತಜ್ಞರಿಂದ ಕಾರ್ಯಾಗಾರ: ಮೇಳದಲ್ಲಿ ರೈತರಿಗೆ ಅನುಕೂಲವಾಗುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ತಜ್ಞರಿಂದ ಸಿರಿಧಾನ್ಯ, ಸಾವಯವ ಕೃಷಿ ಪ್ರಾಮುಖ್ಯತೆ ಕುರಿತು ಚರ್ಚಾಗೋಷ್ಠಿ ಹಾಗೂ ಕಾರ್ಯಾಗಾರಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ಕೃಷಿಯಲ್ಲಿ ತೊಡಗುವ ಯುವ ಉದ್ಯಮಿಗಳಿಗೆ ಹಲವು ಸವಾಲುಗಳು ಮತ್ತು ವಿಷಯಗಳ ಕುರಿತು ಮಾಹಿತಿ ನೀಡಲಾಯಿತು.

ಮೇಳದಲ್ಲಿ ಗೋಷ್ಠಿಗಳಿಗಿಂತ ಹೆಚ್ಚಾಗಿ ಜನರು ಖರೀದಿಯಲ್ಲಿ ತೊಡಗಿದ್ದರು. ಮನೆ ಬಳಕೆ ವಸ್ತುಗಳು, ಅಪರೂಪದ ಧಾನ್ಯಗಳು ಹಾಗೂ ಸಿರಿಧಾನ್ಯಗಳು ಹೆಚ್ಚು ಬಿಕರಿಯಾದವು. ಎನ್‌ಜಿಒ ಹಾಗೂ ಖಾಸಗಿ ಕಂಪೆನಿಗಳು ತಮ್ಮ ಉತ್ಪನ್ನಗಳ ಕುರಿತು ಜನರಿಗೆ ಪ್ರಾತ್ಯಕ್ಷಿಕೆಗಳನ್ನು ನೀಡಿದವು.

ಮೇಳದಲ್ಲಿ ಕೇರಳ, ಮಹಾರಾಷ್ಟ್ರ, ಉತ್ತರಾಖಂಡ, ಆಂಧ್ರಪ್ರದೇಶ, ಮಣಿಪುರ, ರಾಜಸ್ಥಾನ, ಉತ್ತರಾಖಂಡ್, ಸಿಕ್ಕಿಂ, ಮೇಘಾಲಯ ಮುಂತಾದ ರಾಜ್ಯಗಳ ಮಳಿಗೆಗಳಿದ್ದು, ಇಲ್ಲಿ ಆಹಾರ ಪದಾರ್ಥಕ್ಕಿಂತ ಸಾವಯವ ಬೆಳೆ, ಧಾನ್ಯಗಳು ಹಾಗೂ ತರಕಾರಿಗಳನ್ನು ಬೆಳೆಯುವ ವಿಧಾನ, ಬಳಕೆ, ಮಾರಾಟ ವ್ಯವಸ್ಥೆ ಕುರಿತು ಮಾಹಿತಿಗೆ ಒತ್ತು ನೀಡಲಾಗಿದೆ.

ಕ್ಯಾನ್ಸರ್ ನಿವಾರಕ ನೇರಳೆ, ಪೇರಲೆ ಹಣ್ಣುಗಳ ಗ್ರೀನ್ ಟೀ: ನೇರಳೆ ಮತ್ತು ಪೇರಲೆ ಹಣ್ಣುಗಳಿಂದ ತಯಾರಿಸಿದ ಗ್ರೀನ್ ಟೀ ಮತ್ತು ಎಳನೀರಿನಿಂದ ತಯಾರಿಸಿದ ಎಳನೀರು ಪೌಡರ್ ಹೆಚ್ಚು ಗಮನ ಸೆಳೆಯಿತು. ನೇರಳೆ ಮತ್ತು ಪೇರಲೆ ಹಣ್ಣಿನಲ್ಲಿ ಹಲವು ಪೌಷ್ಠಿಕಾಂಶಗಳಿದ್ದು, ಕ್ಯಾನ್ಸರ್ ನಿವಾರಕ ಅಂಶವನ್ನು ಒಳಗೊಂಡಿದೆ. ಅಲ್ಲದೆ ತೂಕ ಇಳಿಸುವ ಗುಣಮಟ್ಟವನ್ನೂ ಹೊಂದಿದೆ ಎಂದು ರಾಜಸ್ಥಾನ ಮೂಲದ ಜೋವಕಿ ಆಗ್ರೋ ಫುಡ್ ಇಂಡಿಯಾ ಸಂಸ್ಥೆ ಗ್ರೀನ್ ಟೀಯನ್ನು ಮಾರುಕಟ್ಟೆಗೆ ಪರಿಯಿಸಿದೆ. ಇನ್ನು ತೆಂಗು ಬೆಳೆಗಾರರಿಗೆ ಅನುಕೂಲವಾಗಲೆಂದು ಫುಡಿಯೋ ಫಿಟ್ ಎನ್ನುವ ಆಹಾರೋತ್ಪನ್ನ ಸಂಸ್ಥೆ ಎಳನೀರು ಪೌಡರ್ ಅನ್ನು ಪರಿಚಯಿಸಿದೆ.

ಗಮನ ಸೆಳೆಯುವ ಮಿಲ್ಲೆಟ್ ಕೇಕ್, ಅಡಕೆ ಟೀ: ಯಲಹಂಕದ ಕಂಪೆನಿಯೊಂದು ಅಗಸೆ ಬೀಜವನ್ನು ಬೆರೆಸಿ ರಾಗಿ ಕೇಕ್, ರಾಗಿ ಚೆರ್ರಿ, ಮಿಲ್ಲೆಟ್ ಬೆರ್ರಿ ಕೇಕ್ ಸಹಿತ 8 ಬಗೆಯ ಕೇಕ್‌ಗಳನ್ನು ಮಾರಾಟಕ್ಕಿಟ್ಟಿದೆ. ಇದು ಮೊಟ್ಟೆ ರಹಿತ ಕೇಕ್ ಆಗಿದ್ದು, ಪ್ರತಿ 100 ಗ್ರಾಂ ಕೇಕ್‌ಗೆ 60ರಿಂದ 70 ರೂ. ದರವನ್ನು ನಿಗದಿಸಿದೆ.

ದಾವಣಗೆರೆ, ಉಡುಪಿ ಮೂಲದ ಕಂಪನಿಗಳು ಸಂಶೋಧಿಸಿರುವ ಅಡಕೆ ಟೀ ಎಲ್ಲರ ಗಮನ ಸೆಳೆಯಿತು. ಮಧುಮೇಹ, ಜೀರ್ಣಕ್ರಿಯೆ, ಚರ್ಮದ ಸುಕ್ಕನ್ನು ನಿಯಂತ್ರಿಸಲು ಇದು ನೆರವಾಗಲಿದ್ದು, ನಿಂಬೆ, ಶುಂಠಿ, ಶುದ್ಧ ಅಡಕೆ, ತುಳಸಿ, ಪುದೀನ ಸೇರಿದಂತೆ ಐದು ಪ್ಲೇವರ್ವುಳ್ಳ ಟೀ ಇದಾಗಿದೆ ಎನ್ನುತ್ತಾರೆ ಪ್ರತಿನಿಧಿ ಮಂಜುನಾಥ್.

ಸಿರಿಧಾನ್ಯ ಶುದ್ಧೀಕರಣ ಮಾಡುವ ಹಾಗೂ ಅರೆಯುವ ಯಂತ್ರಗಳನ್ನು ಶ್ರೀರಂಗಪಟ್ಟಣದ ಭವಾನಿ ಇಂಡಸ್ಟ್ರೀಸ್ ಪೂರೈಸುತ್ತಿದ್ದು, 3 ಎಚ್.ಪಿ.ಸಾಮರ್ಥವುಳ್ಳ ಮಾದರಿಯ ಯಂತ್ರಗಳನ್ನು ಮಾರುಕಟ್ಟೆಗೆ ತಂದಿದೆ. ಈ ಯಂತ್ರಗಳನ್ನು ಸಿರಿಧಾನ್ಯ ಕೃಷಿಕರು ರೈತ ಸಿರಿ ಯೋಜನೆಯಡಿ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ ಮಾಲಕ ಟಿ.ಮನೋಹರ್.

ಸೆಲ್ಫಿ ಸಂಭ್ರಮ

ಮೇಳದ ಹೃದಯ ಭಾಗ ಹಾಗೂ ಹಿಂದ್ವಾರದಲ್ಲಿ ರಾಗಿ, ಜೋಳ, ಸಾಮೆ, ನವಣೆ ಸಹಿತ ಸಿರಿಧಾನ್ಯಗಳನ್ನು ಅಲಂಕಾರಿಕವಾಗಿ ರಾಶಿ ಹಾಕಿ ಸುಗ್ಗಿಯ ಟಚ್ ನೀಡಲಾಗಿದ್ದು, ಸೆಲ್ಫಿ ಪ್ರಿಯರಿಗಾಗಿ ಸುಗ್ಗಿಮನೆಯನ್ನು ನಿರ್ಮಿಸಲಾಗಿದೆ. ಹಲವು ಯುವಕರು ಈ ಸ್ಥಳಗಳಲ್ಲಿ ನಿಂತು ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟರು.

350ಕ್ಕೂ ಹೆಚ್ಚು ಮಳಿಗೆಗಳು

ಮೇಳದಲ್ಲಿ 100ಕ್ಕೂ ಹೆಚ್ಚು ಕಂಪೆನಿಗಳು ಸೇರಿದಂತೆ 350ಕ್ಕೂ ಹೆಚ್ಚು ಮಳಿಗೆಗಳಿದ್ದು, ಸಿರಿಧಾನ್ಯ, ಸಾವಯವ ಕೃಷಿ ಪದ್ಧತಿ, ನೈಸರ್ಗಿಕ ಕೃಷಿ ಪರಿಸರ ಸ್ನೇಹಿ ಉತ್ಪನ್ನಗಳು, ದೇಸಿ ಬೀಜ ಸಂರಕ್ಷಣೆ ಮತ್ತು ಜಾಗತಿಕ ಮಹತ್ವವುಳ್ಳ ವಸ್ತುಗಳ ಮಾರಾಟ ನಡೆಯಿತು. ಮಂಡ್ಯ, ಮೈಸೂರು ರಾಮನಗರ ಹಾವೇರಿ, ವಿಜಯಪುರ, ಕೋಲಾರ, ತುಮಕೂರು, ಕೊಪ್ಪಳ, ಚಿಕ್ಕಬಳ್ಳಾಪುರ, ದಾವಣಗೆರೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ರೈತರು ಸಿರಿಧಾನ್ಯ ಮೇಳದಲ್ಲಿ ಪಾಲ್ಗೊಂಡು ಸಿರಿಧಾನ್ಯಗಳ ಬಗ್ಗೆ ಮಾಹಿತಿ ಪಡೆದ ಸನ್ನಿವೇಶಗಳು ಕಂಡಬಂದವು. ವಿಶೇಷವಾಗಿ ಬೆಂಗಳೂರಿನ ಕೃಷಿ ಮತ್ತು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಕೂಡ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.

ಕಿಡ್ನಿ ವೈಫಲ್ಯದ ವ್ಯಕ್ತಿಯ ಜೀವ ರಕ್ಷಿಸಿದ ಸಿರಿಧಾನ್ಯ!

ಮೂತ್ರಪಿಂಡ(ಕಿಡ್ನಿ) ವೈಫಲ್ಯದಿಂದ ಬಳಲುತ್ತಿದ್ದ ಬೆತ್ತನಗೆರೆ ಗ್ರಾಮದ ಸಿದ್ದಮಾರಯ್ಯ ದಂಪತಿಗಳು ಸಿರಿಧಾನ್ಯದಿಂದ ತಯಾರಿಸಿದ ಡಯಾಬಿಟಿಕ್ ಮಿಲೆಟ್ಸ್ ಬಳಕೆಯಿಂದ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಸಿರಿಧಾನ್ಯ ತನ್ನ ಜೀವವನ್ನು ರಕ್ಷಿಸಿದೆ ಎನ್ನುವ ದಂಪತಿಗಳು ಬಿಡದಿ ಸಮೀಪದ ಹೆಜ್ಜಾಲದಲ್ಲಿ ಸಿರಿಧಾನ್ಯ ಉತ್ಪನ್ನಗಳ ವ್ಯವಹಾರ, ತಯಾರಿಕೆಗೆ ಸಂಬಂಧಿಸಿದಂತೆ ಸಂಜೀವಿನಿ ಸಿರಿಧಾನ್ಯ ತಯಾರಿಕಾ ಕೇಂದ್ರವನ್ನು ಪ್ರಾರಂಭಿಸುವ ಮೂಲಕ ಸಿರಿಧಾನ್ಯಗಳ ಮಹತ್ವ ಸಾರಿದ್ದಾರೆ.

ಪೌಡರ್, ಕ್ರೀಂ, ಲಿಪ್‌ಸ್ಟಿಕ್ ಕರಕುಶಲಗಳು

ಸಾವಯವ ಸಿರಿಧಾನ್ಯಗಳಿಗೆಂದೇ ಕೇಂದ್ರೀಕರಿಸಿರುವ ಮೇಳದಲ್ಲಿ ಲಟ್ಟಣಿಕೆ, ಮಡಿಕೆ, ಆಟಿಕೆ ಹಾಗೂ ಗೃಹೋಪಯೋಗಿ ಕರಕುಶಲ ಪರಿಕರಗಳು ಕಂಡು ಬಂದವು. ಇದಿಷ್ಟೇ ಅಲ್ಲದೆ, ಮಹಿಳೆಯರ ಬಳಕೆಯ ತರಹೇವಾರಿ ಪೌಡರ್, ಕ್ರೀಂ, ಶಾಂಪು, ಸೋಪು, ಲಿಪ್‌ಸ್ಟಿಕ್ ಸೇರಿದಂತೆ ಇತರೆ ವಸ್ತುಗಳು ಕಾಣಿಸಿಕೊಂಡದ್ದು ತುಸು ಹೆಚ್ಚೇ ಅನುಚಿತ ಅನ್ನಿಸಿತು.

"ಮೂರು ಎಕರೆ ಜಮೀನಿನಲ್ಲಿ ಪೇರಳೆ, ಕಬ್ಬು, ಮಾವು, ತೆಂಗು ಬೆಳೆಯುತ್ತಿರುವೆ. ಜೀವಾಮೃತ ಸಹಿತ ಜೈವಿಕ ಪದ್ಧತಿಯಡಿ ಕೃಷಿ ಮಾಡುತ್ತಿದ್ದು, ನಿರೀಕ್ಷಿತ ಆದಾಯ ಸಿಗುತ್ತಿದೆ. ನನ್ನೊಂದಿಗೆ ಕುಟುಂಬ ಸದಸ್ಯರೆಲ್ಲರೂ ಕೆಲಸದಲ್ಲಿ ತೊಡಗಿರುವ ಕಾರಣ ಸಾವಯವ ಕೃಷಿ ಕೈಹಿಡಿದಿದೆ."

ರವಿಕುಮಾರ್ ತುಮಕೂರು, ಸಾವಯವ ಕೃಷಿಕ

Similar News