ಕಾಂಗ್ರೆಸನ್ನು ಆಡಳಿತಕ್ಕೆ ತರಲು ‘ಪ್ರಜಾಧ್ವನಿ ಯಾತ್ರೆ’: ಮಂಜುನಾಥ ಭಂಡಾರಿ

Update: 2023-01-22 04:49 GMT

ಮಂಗಳೂರು, ಜ.21: ಜನಸಾಮಾನ್ಯರ ಧ್ವನಿಯಾಗಿ ಸರಕಾರದ ವೈಫಲ್ಯವನ್ನು ಖಂಡಿಸಲು ಹಾಗೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜನಸ್ನೇಹಿ, ಜನಪರ, ಜನಹಿತಕ್ಕಾಗಿ ಕಾರ್ಯ ನಿರ್ವಹಿಸುವ ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ‘ಪ್ರಜಾಧ್ವನಿ ಯಾತ್ರೆ’ಯನ್ನು ಹಮ್ಮಿಕೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ತಿಳಿಸಿದ್ದಾರೆ.

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಡಳಿತ ನಿರ್ವಹಿಸುತ್ತಿರುವ ಬಿಜೆಪಿ ಸರಕಾರದ ಸಂಪೂರ್ಣ ವಿಫಲವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲೂ ಜನರಿಗೆ ಆಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರ ಧ್ವನಿಗೆ ಶಕ್ತಿ ತುಂಬ ಬೇಕಾಗಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ತಂಭಗಳಾದ ನ್ಯಾಯಾಂಗ, ಕಾರ್ಯಾಂಗ, ಚುನಾವಣಾ ಆಯೋಗದಂತಹ ಪ್ರಾಧಿಕಾರಗಳು ಕೆಲಸ ಮಾಡದಂತೆ ಮಾಡಿದ್ದಾರೆ. ಸರಕಾರದ ಯಾವೊಂದು ಯೋಜನೆಗಳು ಕೂಡ ಬಿಡುಗಡೆಗೊಳ್ಳುತ್ತಿಲ್ಲ ಎಂದವರು ಆರೋಪಿಸಿದರು.

ಅನೇಕ ಯೋಜನೆಗಳ ಬಗ್ಗೆ ಸುಳ್ಳು ಭರವಸೆ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳಿಂದ ಹಿಡಿದು ವಯೋವೃದ್ಧರವರೆಗೆ ಸಂಕಷ್ಟ್ಟವನ್ನು ಎದುರಿಸುತ್ತಿದ್ದಾರೆ. ಇದನ್ನು ಮರೆಮಾಚಿ ರಾಜ್ಯ ಸರಕಾರ ಜನರ ಕಣ್ಣಿಗೆ ಮಣ್ಣೆರಚ್ಚುತ್ತಿದೆ. ಸರಕಾರವು ಕೃಷಿಕರನ್ನು ಬೀದಿಗೆ ತಂದು ನಿಲ್ಲಿಸಿದೆ. ಕೃಷಿಕರಿಗೆ ಪೂರಕವಾಗಿ ಯಾವುದೇ ಯೋಜನೆಗಳನ್ನು ಜಾರಿಗೆ ತರುತ್ತಿಲ್ಲ ಎಂದವರು ಟೀಕಿಸಿದರು.

ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಕೂಡಲೇ ‘ಗೃಹಜ್ಯೋತಿ’ ಹಾಗೂ ‘ಗೃಹಲಕ್ಷ್ಮೀ’ ಎಂಬ ಎರಡು ಯೋಜನೆಗಳ ಜಾರಿಗೊಳಿಸುವುದಾಗಿ ಮಹತ್ವದ ಘೋಷಣೆ ಹೊರಡಿಸಿದ್ದು, ಸ್ವಾಗತಾರ್ಹ ಎಂದು ಮಂಜುನಾಥ ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News