ಜ.23ರಂದು ಕಾಂಗ್ರೆಸ್ ನಿಂದ ಬೆಂಗಳೂರಿನ 300ಕ್ಕೂ ಹೆಚ್ಚು ಕಡೆಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ

Update: 2023-01-22 11:08 GMT

ಬೆಂಗಳೂರು: 'ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸಲು ಕಾಂಗ್ರೆಸ್ ಜ.23, ಸೋಮವಾರ ಬೆಳಗ್ಗೆ 10 ಗಂಟೆಯಿಂದ 12 ಗಂಟೆವರೆಗೂ ನಗರದ 300ಕ್ಕೂ ಹೆಚ್ಚು ಕಡೆಗಳಲ್ಲಿ 'ಭ್ರಷ್ಟಾಚಾರ ತೊಲಗಿಸಿ, ಬೆಂಗಳೂರು ಉಳಿಸಿ' ಎಂಬ ಮೌನ ಪ್ರತಿಭಟನೆ ಮಾಡಲಾಗುವುದು' ಎಂದು ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ ಅವರು ತಿಳಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಕಾರ್ಯದರ್ಶಿ ಅಭಿಶೇಕ್ ದತ್ ಅವರ ಜತೆ ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹ್ಯಾರಿಸ್ ಅವರು, ಗಂಟೆವರೆಗೆ 51 ಮೆಟ್ರೋ ನಿಲ್ದಾಣಗಳಲ್ಲಿ, 26 ಫ್ಲೈ ಓವರ್, 200 ಟ್ರಾಫಿಕ್ ಸಿಗ್ನಲ್ ಗಳಲ್ಲಿ ನಾವು ಮೌನ ಪ್ರತಿಭಟನೆ ಮಾಡುತ್ತಿದ್ದೇವೆ. ನಾವು ಗಲಾಟೆ ಮಾಡಿ, ಸಂಚಾರಕ್ಕೆ ಅಡ್ಡಿ ಮಾಡಿ ಹೋರಾಟ ಮಾಡುವುದಿಲ್ಲ. ನಮ್ಮ ಕಾರ್ಯಕರ್ತರು ಪ್ಲೆಕಾರ್ಡ್ ಹಿಡಿದು ಹೋರಾಟ ಮಾಡುತ್ತಾರೆ’ ಎಂದು ವಿವರಿಸಿದರು. 

‘ರಾಜ್ಯದಲ್ಲಿ ಭ್ರಷ್ಟಾಚಾರ ಯಾವ ಮಟ್ಟಿಗೆ ಹರಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಬೆಂಗಳೂರು ಉಳಿಸುತ್ತಾ ರಾಜ್ಯವನ್ನು ಉಳಿಸಿ ಎಂಬ ಸಂದೇಶ ನೀಡುತ್ತೇವೆ. ನಾಳೆ ಈ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಮಾಡಿ ನಂತರ ರಾಜ್ಯಕ್ಕೆ ವಿಸ್ತರಿಸುತ್ತೇವೆ' ಎಂದು ತಿಳಿಸಿದರು. 

'ರಾಜ್ಯದಲ್ಲಿ 40% ಕಮಿಷನ್ ಹಾಗೂ ಲಂಚಾವತಾರ ಹೆಚ್ಚಾಗಿದ್ದು, ಇದಕ್ಕೆ ಕೊನೆ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ. ಈ ವಿಚಾರವಾಗಿ ಸರ್ಕಾರ ಯಾವುದೇ ಉತ್ತರ ನೀಡುತ್ತಿಲ್ಲ. ಮಂತ್ರಿಗಳು ಉತ್ತರ ನೀಡುತ್ತಿಲ್ಲ. ಭ್ರಷ್ಟಾಚಾರ ಆರೋಪ ಕೇಳಿಬಂದ ಮಂತ್ರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಭ್ರಷ್ಟಾಚಾರ ಆರೋಪ ಬಂದಾಗ ಅಂತಹವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಆದರೆ ಈ ಸರ್ಕಾರದಲ್ಲಿ ಎಷ್ಟೇ ಭ್ರಷ್ಟಾಚಾರದ ಆರೋಪ ಬಂದರೂ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ, ಇಡೀ ಸರ್ಕಾರವೇ ಇದರಲ್ಲಿ ಭಾಗಿಯಾಗಿದೆಯೇ ಎಂಬ ಅನುಮಾನ ಮೂಡುತ್ತದೆ' ಎಂದು ಹೇಳಿದರು.  

'ವಿರೋಧ ಪಕ್ಷವಾಗಿ ಇದನ್ನೆಲ್ಲ ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ವಿರೋಧ ಪಕ್ಷವಾಗಿ ನಗರ, ರಾಜ್ಯ ಹಾಗೂ ಜನರನ್ನು ರಕ್ಷಣೆ ಮಾಡಿ ಅವರ ಕೆಲಸ ಮಾಡಿಸಿಕೊಡುವುದು ನಮ್ಮ ಜವಾಬ್ದಾರಿ. ರಾಜ್ಯದಲ್ಲಿನ ಭ್ರಷ್ಟಾಚಾರ ವಿಚಾರವಾಗಿ ಮಾಧ್ಯಮಗಳು ಕೂಡ ಸಾಕಷ್ಟು ಆರೋಪ ಮಾಡಿವೆ. ಗುತ್ತಿಗೆದಾರರ ಸಂಘದ ಅದ್ಯಕ್ಷರು ಪ್ರಧಾನಿಗೆ ಕಾಗದ ಬರೆದರೂ ಪ್ರಧಾನಮಂತ್ರಿಗಳು ಉತ್ತರ ನೀಡಲಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು. 

'ಪಿಎಸ್ಐ, ಪಿಡ್ಬ್ಲ್ಯೂ ಡಿ ಜೆಇಇ, ಕೆಪಿಟಿಸಿಎಲ್ ಸೇರಿದಂತೆ ಭ್ರಷ್ಟಾಚಾರದ ಪರ್ವತವನ್ನೇ ನಿರ್ಮಿಸಿದ್ದಾರೆ. ಆದರೂ ಸತ್ಯಹರಿಶ್ಚಂದ್ರರ ಮೊಮ್ಮಕ್ಕಳಂತೆ ಮಾತನಾಡುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಧಾನಿಗಳು ರಾಜ್ಯಕ್ಕೆ  ಪದೇ ಪದೆ ಬರುತ್ತಿದ್ದಾರೆ. ರಾಜ್ಯಕ್ಕೆ ಬರುವ ಮೋದಿ ಅವರು ಈ ಭ್ರಷ್ಟಾಚಾರದ ವಿಚಾರವಾಗಿ ಏನಾದರೂ ಮಾತನಾಡುತ್ತಿದ್ದಾರಾ? ಸುಳ್ಳನೇ ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ' ಎಂದು ಕಿಡಿಕಾರಿದರು. 

'ಬಿಜೆಪಿ ಸರ್ಕಾರದ ಅವಧಿ ಕೇವಲ 100 ದಿನಗಳೂ ಇಲ್ಲ. ಆದರೂ ತನ್ನ ಪ್ರಣಾಳಿಕೆಯ ಶೇ.90ರಷ್ಟು ಭರವಸೆ ಈಡಡೇರಿಸಿಲಿಲ್ಲ. ಆದರೂ ಹೊಸ ಪ್ರಣಾಳಿಕೆ ಬಿಡುಗಡೆ ಮಾಡಲು ತಯಾರಿ ಮಾಡುತ್ತಿದ್ದಾರೆ. ಜನರಿಗೆ ಯಾವುದೇ ಅನುಕೂಲ ಮಾಡಿಕೊಡದೆ ಸರ್ಕಾರ ತನ್ನ ಆಡಳಿತ ಮುಗಿಸುತ್ತಿದೆ. ಇದನ್ನೆಲ್ಲ ಅರ್ಥ ಮಾಡಿಕೊಂಡು ಬೆಂಗಳೂರಿನ ಎಲ್ಲ ನಾಯಕರು ಕಾರ್ಯಕರ್ತರು ರಸ್ತೆಯಲ್ಲಿ ಪ್ರತಿಭಟನೆ ಮಾಡುತ್ತೇವೆ. ಬೆಂಗಳೂರಿನ ಎಲ್ಲೆಡೆ ಈ ಪ್ರತಿಭಟನೆ ಮಾಡುತ್ತೇವೆ' ಎಂದು ತಿಳಿಸಿದರು. 

ನಾಳೆ ಟ್ರಿನಿಟಿ ಸರ್ಕಲ್ ಬಳಿ ಕೆಪಿಸಿಸಿ ಅಧ್ಯಕ್ಷರು, ಸಿಎಲ್ ಪಿ ನಾಯಕರಾದ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಅಭಿಶೇಕ್ ದತ್ ಅವರು ಭಾಗವಹಿಸಲಿದ್ದಾರೆ. ಬೆಂಗಳೂರಿನ ಎಲ್ಲ 28 ಕ್ಷೇತ್ರಗಳಲ್ಲಿ ಶಆಸಕರು, ಪರಾಜಿತ ಅಭ್ಯರ್ಥಿಗಳು 300ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರತಿಭಟನೆ ಮಾಡುತ್ತೇವೆ' ಎಂದು ತಿಳಿಸಿದರು. 

Similar News