ಪಕ್ಷಾಂತರಕ್ಕೆ ಅವಕಾಶ ನೀಡಿ ಮತಾಂತರ ವಿರೋಧ ಕಾನೂನು ಸಲ್ಲ: ಅಲ್ಲಮಪ್ರಭು ಬೆಟ್ಟದೂರು

Update: 2023-01-22 14:13 GMT

ಕೊಪ್ಪಳ, ಜ. 22: ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಅಮೃತ ಮೂಹೋತ್ಸವದ ಸಂದರ್ಭದಲ್ಲಿ ಆಡಳುವ ಸರಕಾರಗಳು ಪಕ್ಷಾಂತರಕ್ಕೆ ಅವಕಾಶ ನೀಡಿ ಮತಾಂತರ ವಿರೋಧಿ ಕಾನೂನು ರೂಪಿಸಿರುವುದು ಯಾವ ನ್ಯಾಯ ಎಂದು ಪ್ರಗತಿಪರ ಚಿಂತಕ ಅಲ್ಲಮಪ್ರಭು ಬೆಟ್ಟದೂರು ಪ್ರಶ್ನಿಸಿದ್ದಾರೆ.

ರವಿವಾರ ಕೊಪ್ಪಳದ ಸಾಹಿತ್ಯ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಶರಣಪ್ಪ ಲೇಬಗೇರಿ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಿಕ್ಕಿ 75ವರ್ಷ ಗತಿಸಿದರು ಪಶುವಿನ ಮನೋಭಾವದಿಂದ ಹೊರಬರದೆ ಸಾಂಪ್ರಾದಾಯಿಕ ಜಡತ್ವದಲ್ಲಿ ಸಮಾಜ ನಳಲುಗುತ್ತಿದೆ ಎಂದು ಟೀಕಿಸಿದರು.

ಸಮಾಜಕ್ಕೆ ವೈಚಾರಿಕ ಮನೋಭಾವ ನೀಡಿದ ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ತಿಳಿಸಬೇಕಿದೆ. ಆ ಹೋರಾಟದ ಬದುಕಿನಲ್ಲಿ ಮುಂಚೋಣಿಯಲ್ಲಿ ಶರಣಪ್ಪ ಲೇಬಗೇರಿ ಅವರ ಪಾತ್ರ ಪ್ರಮುಖ. ಅವರ ಸಾವು ಹೋರಾಟಗಾರರಿಗೆ ನಷ್ಟವಾಗಿದೆ ಎಂದು ಅವರು ಕಂಬನಿ ಮಿಡಿದರು.

ಬರಹಗಾರ ಎಚ್.ಎಸ್.ಪಾಟೀಲ್ ಮಾತನಾಡಿ, ಕೃಷಿ ಕಾರ್ಮಿಕನಾಗಿದ್ದ ಶರಣಪ್ಪ ಲೇಬಗೇರಿ ಕ್ರಿಯಾಶೀಲರಾಗಿ ಹಲವು ಹೋರಾಟಗಳನ್ನು ರೂಪಿಸುತ್ತ ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ಮಹಾನ್ ಶಕ್ತಿ. ಸಂಘಟನ ಚತುರನ ಅಗಲಿಕೆ ದಸಂಸಗೆ ತುಂಬಲಾರದ ನಷ್ಟವಾಗಿದೆ. ಕುಟುಂಬಸ್ಥರ ಬೆನ್ನೆಲುಬಾಗಿ ಪ್ರಗತಿಪರರು ನಿಲ್ಲುತ್ತೇವೆಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ದಸಂಸ ರಾಜ್ಯ ಸಂಘಟನಾ ಸಂಚಾಲಕ ಜೀವನಹಳ್ಳಿ ಆರ್.ವೆಂಕಟೇಶ್ ಮಾತನಾಡಿ, ಹಲವು ವರ್ಷಗಳಿಂದ ಶರಣಪ್ಪ ಲೇಬಗೇರಿ ಸರಳ ಸಜ್ಜನಿಕೆ ಹಾಗೂ ಸಂಘಟನಾತ್ಮಕ ಶಕ್ತಿಯಿಂದ ಈ ಭಾಗದಲ್ಲಿ ಶಕ್ತಿ ತುಂಬಿದ್ದರು. ಈ ಹಿಂದೆ ವಿಜಯಪುರದ ಸುರೇಶ್ ಮಣ್ಣೂರು ಈಗ ಕೊಪ್ಪಳದ ಶರಣಪ್ಪ ಲೇಬಗೇರಿ ಅವರನ್ನು ಕಳೆದುಕೊಂಡಿರುವುದು ಸಂಘಟನೆಗೆ ಭರಿಸಲಾಗದ ನಷ್ಟವಾಗಿದೆ. ಭವಿಷ್ಯದಲ್ಲಿ ಕ್ರಿಯಾಶೀಲ ಹೋರಾಟಗಳ ಮೂಲಕ ಅವರಿಗೆ ನಮನ ಸಲ್ಲಿಸಬೇಕು ಎಂದು ತಿಳಿಸಿದರು.

ಈ ವೇಳೆ ಸಾವಿತ್ರಿ ಮುಜುಂದಾರ್, ಚಂದ್ರಶೇಖರ್ ಸಿ., ರಾಹು ತಳಿಕೇರಿ, ಎಫ್.ವೈ.ದೊಡ್ಡಮನಿ, ಆನಂದ ಭಂಡಾರಿ, ಕೆಂಪಣ್ಣ ಸಾಗ್ಯ, ಪರಶುರಾಮ್ ಅರೋಲಿ, ಶಿವಗ್ಯಾನಿ ಕಪಗಲ್, ಶರಣಪ್ಪ ಲೇಬಗೇರಿ ಅವರ ಪತ್ನಿ ಹುಲಿಗೆಮ್ಮ, ನಾಗರಾಜ್ ತರಿಕೇರಿ, ಪ್ರಭುಲಿಂಗ ಮೇಗಳಮನಿ, ರಾಜಶೇಖರ್ ಕೋಟೆ ಸೇರಿದಂತೆ ಇನ್ನಿತರರು ಹಾಜರಿದ್ದರು.

Similar News