ಲಾಹೋರ್: ಮಾದಕವಸ್ತು ಸೇವಿಸಲು ನಿರಾಕರಿಸಿದ ವಿದ್ಯಾರ್ಥಿನಿಗೆ ಚಿತ್ರಹಿಂಸೆ

4 ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲು

Update: 2023-01-22 15:40 GMT

ಇಸ್ಲಮಾಬಾದ್, ಜ.22: ಪಾಕಿಸ್ತಾನದ ಲಾಹೋರ್ ನ `ಅಮೆರಿಕನ್ ಇಂಟರ್ನ್ಯಾಷನಲ್ ಸ್ಕೂಲ್'ನಲ್ಲಿ  ಮಾದಕವಸ್ತು ಸೇವಿಸಲು ನಿರಾಕರಿಸಿದ ವಿದ್ಯಾರ್ಥಿನಿಗೆ ಆಕೆಯ 4 ಸಹವಿದ್ಯಾರ್ಥಿನಿಯರು ಚಿತ್ರಹಿಂಸೆ ನೀಡಿರುವುದಾಗಿ ಸಂತ್ರಸ್ತ ವಿದ್ಯಾರ್ಥಿನಿಯ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ 4  ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು `ದಿ ಡಾನ್'  ಪತ್ರಿಕೆ ವರದಿ ಮಾಡಿದೆ.

ಪ್ರಮುಖ ಆರೋಪಿ ಮಾದಕವಸ್ತು ವ್ಯಸನಿ ಎಂದು ಶಂಕಿಸಲಾಗಿದೆ. ಆಕೆ ನೀಡಿದ ಮಾದಕವಸ್ತು ಸೇವಿಸಲು ನಿರಾಕರಿಸಿದ ವಿದ್ಯಾರ್ಥಿನಿಗೆ 4 ವಿದ್ಯಾರ್ಥಿನಿಯರು ಒಟ್ಟು ಸೇರಿ ಚಿತ್ರಹಿಂಸೆ ನೀಡಿದ್ದಾರೆ. ಕೊಠಡಿಯೊಂದರಲ್ಲಿ ನೆಲಕ್ಕೆ ಬಿದ್ದಿರುವ  ವಿದ್ಯಾರ್ಥಿನಿಯನ್ನು ಸುತ್ತುವರಿದ ಆರೋಪಿ ವಿದ್ಯಾರ್ಥಿನಿಯರು ಆಕೆಯ ಕೂದಲು ಹಿಡಿದೆಳೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಆರೋಪಿಗಳಲ್ಲಿ ಓರ್ವ ವಿದ್ಯಾರ್ಥಿನಿ ಬಾಕ್ಸರ್ ಆಗಿದ್ದು ಸಂತ್ರಸ್ತ ವಿದ್ಯಾರ್ಥಿನಿಯ ಮುಖಕ್ಕೆ ಹಲವು ಬಾರಿ ಪಂಚ್ ಮಾಡಿದ್ದಾಳೆ. ಮತ್ತೊಬ್ಬಳು ಆಕೆಯನ್ನು ಕಾಲಿನಿಂದ ಒದ್ದಿದ್ದು ಮುಖ ಹಾಗೂ ದೇಹದ ಇತರ ಭಾಗಗಳಿಗೆ ಗಾಯವಾಗಿದೆ. ಆರೋಪಿಗಳು ಸಂತ್ರಸ್ತೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಲಾಕೆಟ್ ಅನ್ನು ಕಿತ್ತುಕೊಂಡಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ನ್ಯಾಯಾಲಯ ಮೂವರು ಆರೋಪಿಗಳಿಗೆ ಬಂಧನಪೂರ್ವ ಜಾಮೀನು ಮಂಜೂರುಗೊಳಿಸಿರುವುದಾಗಿ ವರದಿಯಾಗಿದೆ.

Similar News