ತೈವಾನ್ ನ ಯಥಾಸ್ಥಿತಿ ಬದಲಾವಣೆಯ ಪ್ರಯತ್ನ ಬೇಡ: ಚೀನಾಕ್ಕೆ ಅಮೆರಿಕ ಎಚ್ಚರಿಕೆ

Update: 2023-01-22 15:58 GMT

ವಾಷಿಂಗ್ಟನ್, ಜ.22: ವಲಯದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ಅತ್ಯಗತ್ಯವಾಗಿರುವ ತೈವಾನ್ನ ಯಥಾಸ್ಥಿತಿಯನ್ನು ಬದಲಾಯಿಸುವ ಯಾವುದೇ ಪ್ರಯತ್ನಕ್ಕೆ ಮುಂದಾಗಬಾರದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್(Antony Blinken) ಚೀನಾಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಚೀನಾವು ತೈವಾನ್ ನ ಮೇಲೆ ಮಿಲಿಟರಿ ಮತ್ತು ಆರ್ಥಿಕ ಒತ್ತಡ ಹೇರಲು ಪ್ರಯತ್ನಿಸುತ್ತಿದೆ. ತೈವಾನ್ ನಲ್ಲಿ ಯಥಾಸ್ಥಿತಿ ಮುಂದುವರಿಯುವುದು ತನಗೆ ಅಹಿತಕರ ಎಂದು ಚೀನಾ ಭಾವಿಸಿದಂತಿದೆ. ಆದರೆ ಹಲವು ದಶಕಗಳಿಂದಲೂ ಮುಂದುವರಿದು ಬಂದಿರುವ ಯಥಾಸ್ಥಿತಿ ಈ ಪ್ರದೇಶದ ಶಾಂತಿ ಮತ್ತು ಸ್ಥಿರತೆಗೆ ಅತ್ಯಗತ್ಯವಾಗಿರುವ ಜತೆಗೆ,  ಕಠಿಣ ಪರಿಸ್ಥಿತಿಯನ್ನು ನಿರ್ವಹಿಸಲು ಅಗತ್ಯವಾಗಿದೆ ಎಂದವರು ಹೇಳಿದ್ದಾರೆ.

ಕಳೆದ ಹಲವು ವರ್ಷಗಳಿಂದ ಮಿಲಿಟರಿ ಒತ್ತಡ, ಆರ್ಥಿಕ ಒತ್ತಡ, ಅಂತರಾಷ್ಟ್ರೀಯ ವೇದಿಕೆಯಲ್ಲಿ ತೈವಾನ್ ಅನ್ನು ಪ್ರತ್ಯೇಕಗೊಳಿಸುವ ಪ್ರಯತ್ನಗಳ ಮೂಲಕ ಚೀನಾದ ನಿರಂತರ ಒತ್ತಡವನ್ನು ನಾವು ನೋಡಿದ್ದೇವೆ. ತೈವಾನ್ ಜಲಸಂಧಿಯಾದ್ಯಂತ  ಯಥಾಸ್ಥಿತಿ ಉಳಿದುಕೊಳ್ಳುವುದು ಅಮೆರಿಕಕ್ಕೂ ಮಹತ್ವದ್ದಾಗಿದೆ ಎಂದು ಬ್ಲಿಂಕೆನ್ ಹೇಳಿದ್ದಾರೆ.

ವಿಶ್ವದಲ್ಲಿ ಪ್ರತೀ ದಿನ ಸಂಚರಿಸುವ ಕಂಟೈನರ್ ಹಡಗುಗಳಲ್ಲಿ 50%ದಷ್ಟು ತೈವಾನ್ ಜಲಸಂಧಿಯ ಮೂಲಕ ಸಾಗುತ್ತದೆ. ವಿಶ್ವದಲ್ಲಿ ಉತ್ಪಾದನೆಯಾಗುವ ಕಂಪ್ಯೂಟರ್ ಚಿಪ್ಗಳಲ್ಲಿ ತೈವಾನ್ನ ಉದ್ಯಮದ ಪಾತ್ರ ಮಹತ್ವದ್ದಾಗಿದೆ. ಇವುಗಳಿಗೆ ಅಡ್ಡಿಯಾದರೆ ಸಂಪೂರ್ಣ ಜಾಗತಿಕ ಆರ್ಥಿಕತೆಗೆ ಪೆಟ್ಟು ಬೀಳುತ್ತದೆ. ತೈವಾನ್ ಜಲಸಂಧಿಯಾದ್ಯಂತ ಶಾಂತಿ ಮತ್ತು ಸ್ಥಿರತೆ ನೆಲೆಸಬೇಕು ಎಂಬುದು ಬಹುತೇಕ ದೇಶಗಳ ಆಶಯವಾಗಿದೆ. ಈ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ವಿವಾದ, ಸಮಸ್ಯೆಗೆ ಬಲಪ್ರಯೋಗ ಅಥವಾ ಒತ್ತಡದ ಮೂಲಕ ಪರಿಹಾರ ಸಾಧ್ಯವಿಲ್ಲ. ಮಾತುಕತೆಯೇ ಇದಕ್ಕೆ ಶಾಶ್ವತ ಪರಿಹಾರದ ಮಾರ್ಗವಾಗಿದೆ ಎಂದು ಬ್ಲಿಂಕೆನ್ ಹೇಳಿದ್ದಾರೆ.

ಕೋವಿಡ್ ನಂತರದ ದಿನಗಳಲ್ಲಿ ಜಗತ್ತಿನಲ್ಲಿ ಸ್ಪರ್ಧೆ, ಪೈಪೋಟಿ ಹೆಚ್ಚಿದೆ. ಆದರೆ ಪೈಪೋಟಿ ಆರೋಗ್ಯಕರವಾಗಿರಬೇಕು ಮತ್ತು ನ್ಯಾಯೋಚಿತವಾಗಿರಬೇಕು. ಚೀನಾವು ಹಲವು ಕ್ಷೇತ್ರಗಳಲ್ಲಿ, ಹಲವು ವಿಧದಲ್ಲಿ ಪ್ರಮುಖ ಪ್ರತಿಸ್ಪರ್ಧಿಯಾಗಿದೆ. ಅಮೆರಿಕ ಮತ್ತು ಚೀನಾದ ದೃಷ್ಟಿಕೋನದಲ್ಲಿ ವ್ಯತ್ಯಾಸವಿದೆ. ಆದರೆ ಸ್ಪರ್ಧೆ ಮತ್ತು ಸಂಘರ್ಷದಲ್ಲಿ ವ್ಯತ್ಯಾಸವಿದೆ. ನಿಕಟ ಸ್ಪರ್ಧೆಗೆ ಎಂದಿಗೂ ನಮ್ಮ ಸ್ವಾಗತವಿದೆ. ಆದರೆ ಸ್ಪರ್ಧೆಯ ಹೆಸರಲ್ಲಿ ಸಂಘರ್ಷಕ್ಕೆ ನಮ್ಮ ವಿರೋಧವಿದೆ.

ಸ್ಪರ್ಧೆ ಸಂಘರ್ಷಕ್ಕೆ ತಿರುಗುವುದನ್ನು ನಾವು ತಪ್ಪಿಸಬೇಕಿದೆ ಎಂದವರು ಹೇಳಿದ್ದಾರೆ. ಚೀನಾದ `ಒಂದು ದೇಶ ಎರಡು ವ್ಯವಸ್ಥೆ'ಯ ಉಪಕ್ರಮವು ಹಾಂಕಾಂಗ್ ಜನರ ಮೇಲೆ ವ್ಯಾಪಕ ಪರಿಣಾಮಕ್ಕೆ ಕಾರಣವಾಗಿದೆ. ಈ ಸಮಸ್ಯೆ ತೈವಾನ್ ಜನತೆಗೆ ಆಗಬಾರದು ಎಂಬುದು ನಮ್ಮ ಆಶಯವಾಗಿದೆ ಎಂದು ಬ್ಲಿಂಕೆನ್ ಹೇಳಿದ್ದಾರೆ. ಬ್ಲಿಂಕೆನ್ ಮುಂದಿನ ತಿಂಗಳು ಚೀನಾಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ.

ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆ ಇರುವ ತೈವಾನ್ ತನ್ನ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸುತ್ತಿರುವ ಚೀನಾ, ಅದನ್ನು ಬಲಪ್ರಯೋಗಿಸಿಯಾದರೂ ತನ್ನ ಆಡಳಿತದ ವ್ಯವಸ್ಥೆಯಡಿ ಸೇರಿಸುವುದಾಗಿ ಘೋಷಿಸಿದೆ.

Similar News