ಚೀನಾ: ಒಂದೇ ವಾರದಲ್ಲಿ ಕೋವಿಡ್‍ನಿಂದ 13 ಸಾವಿರ ಮಂದಿ ಮೃತ್ಯು

Update: 2023-01-23 02:26 GMT

ಬೀಜಿಂಗ್: ಕೋವಿಡ್-19 ಸಾಂಕ್ರಾಮಿಕ ವ್ಯಾಪಕವಾಗಿ ಹರಡಿರುವ ಚೀನಾದಲ್ಲಿ ಜನವರಿ 13 ರಿಂದ 19ರ ಅವಧಿಯ ಒಂದು ವಾರದಲ್ಲಿ ಕನಿಷ್ಠ 13 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಉನ್ನತ ಅಧಿಕಾರಿಗಳು ಪ್ರಕಟಿಸಿದ್ದಾರೆ.

ಚೀನಾದಲ್ಲಿ ಒಂದು ತಿಂಗಳಲ್ಲಿ 60 ಸಾವಿರ ಮಂದಿ ಸೋಂಕಿತರು ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಪ್ರಕಟಿಸಿದ ಬೆನ್ನಲ್ಲೇ ಒಂದು ವಾರದಲ್ಲೇ 13 ಸಾವಿರ ಮಂದಿ ಸೋಂಕಿಗೆ ಬಲಿಯಾಗಿರುವುದನ್ನು ಅಧಿಕೃತವಾಗಿ ಪ್ರಕಟಿಸಿದೆ. ಆದರೆ ವೈರಸ್ ನಿಯಂತ್ರಣ ನೀತಿಯನ್ನು ಕಳೆದ ತಿಂಗಳು ಸಡಿಲಿಸಿದ ಬೆನ್ನಲ್ಲೇ ಭಾರಿ ಸಂಖ್ಯೆಯ ಸಾವು ನೋವು ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಚೀನಾದ ಲಾಮಾ ಮಂದಿರಗಳಲ್ಲಿ ಮುಂಜಾನೆ ಪ್ರಾರ್ಥನಾಸಭೆಗಳನ್ನು ಆಯೋಜಿಸಲಾಗುತ್ತಿದ್ದರೂ, ಜನ ತೀರಾ ಕಡಿಮೆ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಏತನ್ಮಧ್ಯೆ ಕೋವಿಡ್ ಸೋಂಕಿನಿಂದ ಬಾಧಿತವಾಗಿರುವ ದಕ್ಷಿಣ ಕೊರಿಯಾದಲ್ಲಿ ಭಾನುವಾರ 15 ವಾರಗಳಲ್ಲೇ ಕನಿಷ್ಠ ಅಂದರೆ 16624 ಪ್ರಕರಣಗಳು ವರದಿಯಾಗಿವೆ.

Similar News