ಉದ್ಯೋಗ - ಕುಟುಂಬ ಸಂಘರ್ಷ ಹೆಚ್ಚಿಸಿದ ಮನೆಯಿಂದಲೇ ಕೆಲಸ ಮಾಡುವ ಪದ್ಧತಿ

Update: 2023-01-23 11:47 GMT

ಮನೆಯಿಂದಲೇ ಕೆಲಸ ಮಾಡುವ ಮೂಲಕ ಉದ್ಯೋಗ ಮತ್ತು ಬದುಕಿನ ನಡುವೆ ಸಮತೋಲನ ಕಳೆದುಕೊಂಡಿರುವ ವ್ಯಕ್ತಿ ತಾನೊಬ್ಬನೇ ಎಂದು ನೀವು ಭಾವಿಸಿದ್ದರೆ ಅದಕ್ಕಾಗಿ ಚಿಂತಿಸಬೇಡಿ. ಈ ವಿಷಯದಲ್ಲಿ ನೀವು ಒಬ್ಬಂಟಿಗರಲ್ಲ.‘ಎಂಪ್ಲಾಯೀಸ್ ರಿಲೇಷನ್ಸ್’ ಜರ್ನಲ್ ನಲ್ಲಿ ಪ್ರಕಟಗೊಂಡಿರುವ ಐಐಟಿ-ಮದ್ರಾಸ್ ಮತ್ತು ಐಐಟಿ-ಅಮೃತಸರ ಕೈಗೊಂಡ ಅಧ್ಯಯನ ವರದಿಯು ಕೋವಿಡ್ ಸಾಂಕ್ರಾಮಿಕದ ಕಳೆದ ಎರಡು ವರ್ಷಗಳಲ್ಲಿ ವರ್ಕ್ ಫ್ರಮ್ ಹೋಮ್ ಅಥವಾ ಮನೆಯಿಂದಲೇ ಕೆಲಸವನ್ನು ನಿರ್ವಹಿಸುವ ಪದ್ಧತಿಯು ವಾಸ್ತವದಲ್ಲಿ ಉದ್ಯೋಗಿಗಳ ಉದ್ಯೋಗ ಮತ್ತು ಬದುಕಿನ ನಡುವಿನ ಸಮತೋಲನವನ್ನು ಕೆಡಿಸಿದೆ ಎನ್ನುವುದನ್ನು ಬೆಟ್ಟು ಮಾಡಿದೆ.

ವರ್ಕ್ ಫ್ರಮ್ ಹೋಮ್ ಪದ್ಧತಿಯಿಂದಾಗಿ ಕಂಪನಿಗಳು ಹಣವನ್ನು ಉಳಿಸಬಹುದು, ಆದರೆ ಮನೆಯಿಂದಲೇ ಕೆಲಸವನ್ನು ನಿರ್ವಹಿಸುತ್ತಿರುವ ಹಲವರು ಇದರಿಂದ ಹೆಚ್ಚು ಸಂತುಷ್ಟರಾಗಿಲ್ಲ ಎನ್ನುವುದು ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಮನೆಯಿಂದಲೇ ಕೆಲಸ ಮಾಡುವುದು ಹೇಗೆ ಉದ್ಯೋಗ ಮತ್ತು ಮನೆಯ ನಡುವಿನ ಗಡಿಗಳನ್ನು ಅಸ್ಪಷ್ಟಗೊಳಿಸಿದೆ ಮತ್ತು ಹೇಗೆ ಉದ್ಯೋಗಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರಿದೆ ಎನ್ನುವುದನ್ನು ವಿಶ್ಲೇಷಿಸಲು ಇವೆರಡು ಐಐಟಿಗಳು ಪ್ರಯತ್ನಿಸಿದ್ದವು.

ತಜ್ಞರು ಏನು ಹೇಳುತ್ತಾರೆ?

ಐಐಟಿ-ಮದ್ರಾಸ್ ನ ಮ್ಯಾನೇಜ್ಮೆಂಟ್ ಸ್ಟಡೀಸ್ ವಿಭಾಗದ ರೂಪಶ್ರೀ ಬರಲ್ ಹೇಳುವಂತೆ,ಉದ್ಯೋಗ ಮತ್ತು ಮನೆಯ ನಡುವಿನ ಗಡಿಯು ಮಸುಕಾಗಿದೆ, ಕೆಲಸವು ಕುಟುಂಬ ಜೀವನದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಿದೆ ಮತ್ತು ಕುಟುಂಬ ಜೀವನವೂ ಕೆಲಸದ ಮೇಲೆ ಇದೇ ಪರಿಣಾಮವನ್ನುಂಟು ಮಾಡಿದೆ, ಇದನ್ನೇ ‘ಉದ್ಯೋಗ-ಕುಟುಂಬ ಸಂಘರ್ಷ’ ಎನ್ನಲಾಗುತ್ತದೆ.

ಉದ್ಯೋಗಿಗಳು ಪರಿಸ್ಥಿತಿಯನ್ನು ‘ಅಸಹನೀಯ’ ಎಂದು ಭಾವಿಸಿದ್ದಾರೆ. ವಿಫಲ ಪೋಷಕರು ಮತ್ತು ವಿಫಲ ವೃತ್ತಿಪರರಾಗಿದ್ದೇವೆ ಎಂದೂ ಅವರು ಭಾವಿಸುತ್ತಿದ್ದಾರೆ. ಆದರೆ ಇಲ್ಲಿಯೂ ಲಿಂಗವು ಪ್ರಮುಖ ಪಾತ್ರವನ್ನು ವಹಿಸಿದೆ. ಉದ್ಯೋಗದ ಅಭದ್ರತೆಯು ಪುರುಷರಿಗೆ ತೀವ್ರ ಒತ್ತಡವನ್ನುಂಟು ಮಾಡಿದ್ದರೆ, ಮಹಿಳೆಯರಲ್ಲಿ ಉದ್ಯೋಗ-ಕುಟುಂಬ ಸಂಘರ್ಷವು ತೊಳಲಾಟದ ಕೇಂದ್ರ ಬಿಂದುವಾಗಿದೆ.

ಭಾರತದಂತಹ ದೇಶದಲ್ಲಿ ನಿರಂತರ ಸಾಂಪ್ರದಾಯಿಕ ಲಿಂಗ ಸಿದ್ಧಾಂತವು ಸಾಂಕ್ರಾಮಿಕವು ಉತ್ತುಂಗದಲ್ಲಿದ್ದಾಗ ಒತ್ತಡವನ್ನು, ವಿಶೇಷವಾಗಿ ಮಹಿಳೆಯರಲ್ಲಿ, ಹೆಚ್ಚಿಸಿತ್ತು. ಮಹಿಳೆಯರು ಕುಟುಂಬ, ಮಕ್ಕಳು ಮತ್ತು ತಮ್ಮ ವೃತ್ತಿಯ ಕಾಳಜಿಯನ್ನು ಒಂದೇ ಸಮಯದಲ್ಲಿ ಮತ್ತು ಒಂದೇ ಸ್ಥಳದಲ್ಲಿ ನೋಡಿಕೊಳ್ಳುತ್ತಾರೆ ಎಂದು ನಿರೀಕ್ಷಿಸಿದ್ದು ಇದಕ್ಕೆ ಕಾರಣ ಎಂದು ಬರಲ್ ಹೇಳಿದರು.

ಉದ್ಯೋಗ ಮತ್ತು ಕುಟುಂಬದ ನಡುವಿನ ಗಡಿಗಳು ಮಸುಕಾಗಿದ್ದು ಹಾಗೂ ಉದ್ಯೋಗ-ಕುಟುಂಬ ಸಂಘರ್ಷವು ಮಹಿಳೆಯರ ಮೇಲಿನ ಹೆಚ್ಚಿನ ಪರಿಣಾಮವನ್ನು ಬೀರಿದ್ದು ಮಾತ್ರವಲ್ಲ, ಸಾಂಪ್ರದಾಯಿಕ ಲಿಂಗ ಪಾತ್ರ ಸಿದ್ಧಾಂತದ ಕುರಿತು ಪ್ರಶ್ನೆಗಳನ್ನೂ ಎತ್ತಿದೆ ಎಂದರು.

ಪರಿಹಾರವೇನು?

ಉದ್ಯೋಗಿಗಳು ಕೆಲಸ ಮತ್ತು ಬದುಕಿನ ನಡುವಿನ ಈ ಅಸಮತೋಲನವನ್ನು ನಿಭಾಯಿಸಲು ಪ್ರಯತ್ನಿಸಬೇಕು ಎಂದು ಅಧ್ಯಯನ ವರದಿಯು ಸಲಹೆ ನೀಡಿದೆ.

ಮುಂದಾಗಿಯೇ ಯೋಜಿಸುವ ಮತ್ತು ಸಮಸ್ಯೆಗಳು ಎದುರಾದಂತೆಲ್ಲ ಅವುಗಳನ್ನು ಬಗೆಹರಿಸಿಕೊಳ್ಳುವ ಮೂಲಕ ಕೆಲಸವು ಕುಟುಂಬ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರುವುದನ್ನು ತಡೆಯಲು ಇದು ಅತ್ಯಗತ್ಯವಾಗಿದೆ. ಅಲ್ಲದೆ ಅಗತ್ಯವಾದಾಗೆಲ್ಲ ನಿಮ್ಮ ವೈಯಕ್ತಿಕ ಅಥವಾ ವೃತ್ತಿಪರ ಬೆಂಬಲ ವ್ಯವಸ್ಥೆಯ ನೆರವನ್ನೂ ಪಡೆದುಕೊಳ್ಳಬೇಕು. ಇದು ಯಾವುದೇ ಉದ್ಯೋಗ-ಕುಟುಂಬ ಸಂಘರ್ಷವನ್ನು ತಡೆಯಲು ನೆರವಾಗುತ್ತದೆ ಎಂದು ಅಧ್ಯಯನ ವರದಿಯು ಹೇಳಿದೆ.

ತಮ್ಮ ಉದ್ಯೋಗಿಗಳನ್ನು ಬೆಂಬಲಿಸುವ,ಸಾಮೂಹಿಕ ವಜಾಗಳನ್ನು ತಪ್ಪಿಸುವ ಮತ್ತು ಉದ್ಯೋಗ ಹಾಗೂ ಕುಟುಂಬದ ನಡುವೆ ಗಡಿಗಳನ್ನು ಅನುಷ್ಠಾನಿಸುವ ಮೂಲಕ ಸಂಸ್ಥೆಗಳು ಈ ಬಿಕ್ಕಟ್ಟಿನ ಸ್ಥಿತಿಯಲ್ಲಿ ನೆರವಾಗಬಹುದು ಎಂದೂ ವರದಿಯು ಅಭಿಪ್ರಾಯಿಸಿದೆ.

 ಕೃಪೆ: thequint.com

Similar News