ಗೋಹತ್ಯೆ ಶಂಕೆಯಲ್ಲಿ ವ್ಯಕ್ತಿಯ ಗುಂಡಿಕ್ಕಿ ಕೊಲೆ ಪ್ರಕರಣ: 12 ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

Update: 2023-01-23 17:22 GMT

ಲಕ್ನೊ (ಉತ್ತರಪ್ರದೇಶ), ಜ. 23:  ಗೋ ಹತ್ಯೆ ಶಂಕೆಯಲ್ಲಿ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆಗೈದ ಆರೋಪಕ್ಕೆ ಸಂಬಂಧಿಸಿ ಉತ್ತರಪ್ರದೇಶ ಪೊಲೀಸರು 12 ಅಧಿಕಾರಿಗಳ ವಿರುದ್ಧ ರವಿವಾರ ಪ್ರಕರಣ ದಾಖಲಿಸಿದ್ದಾರೆ.   

ದೇವಬಂದ್‌ನಲ್ಲಿ 2021 ಸೆಪ್ಟಂಬರ್ 5ರಂದು ಗೋವು ಕಳ್ಳ ಸಾಗಾಟಗಾರರು ಹಾಗೂ ಪೊಲೀಸರ ನಡುವೆ ನಡೆದ ಗುಂಡಿನ ಕಾಳಗದಲ್ಲಿ 42 ಹರೆಯದ ಝೀಶನ್ ಹೈದರ್ ಹತ್ಯೆಯಾಗಿದ್ದರು. ಗೋ ಹತ್ಯೆ ಪ್ರಕರಣದಲ್ಲಿ ಹೈದರ್‌ನನ್ನು ಪೊಲೀಸರು ತಪ್ಪಾಗಿ ಸಿಲುಕಿಸಿದ್ದಾರೆ ಎಂದು ಹೈದರ್‌ನ ಕುಟುಂಬ ಆರೋಪಿಸಿತ್ತು.

ಹೈದರ್ ಅವರ ಪತ್ನಿ ಅಫ್ರೋಝ್ ಶಹರಣಪುರದ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಅವರನ್ನು 2021 ನವೆಂಬರ್‌ನಲ್ಲಿ ಸಂಪರ್ಕಿಸಿ ಅರ್ಜಿ ಸಲ್ಲಿಸಿದ ಬಳಿಕ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.  

ಪೊಲೀಸರು ತನಿಖೆಗೆ ಕರೆದಾಗ ಪತಿ ತನ್ನೊಂದಿಗೆ ಮನೆಯಲ್ಲಿದ್ದರು ಎಂದು ಅಪ್ರೋಝ್ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅನಂತರ ಹೈದರ್‌ನ   ಕಾಲಿಗೆ ಗುಂಡು ತಗುಲಿ ಗಾಯವಾಗಿದೆ ಎಂದು ತನ್ನ ಕುಟುಂಬಕ್ಕೆ ತಿಳಿಸಲಾಗಿತ್ತು  ಎಂದು ಅವರು ಆರೋಪಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆ ತಂದಾಗ ಮೃತಪಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ.

ನಮಗೆ ಗೋಹತ್ಯೆಯ ಬಗ್ಗೆ ಸುಳಿವು ಸಿಕ್ಕಿತ್ತು. ನಾವು ದಾಳಿ ನಡೆಸಿದೆವು. ನಾಡ ಪಿಸ್ತೂಲ್‌ಗಳೊಂದಿಗೆ ಹೈದರ್ ಮತ್ತು ಇತರರು ಇರುವ ಸ್ಥಳವನ್ನು ಪತ್ತೆ ಮಾಡಿದೆವು ಹಾಗೂ ದಾಳಿ ನಡೆಸಿದೆವು ಎಂದು ಪೊಲೀಸರು ಪ್ರತಿಪಾದಿಸಿದ್ದರು.

‘‘ಅವರು (ಅಕ್ರಮ ಗೋ ಸಾಗಾಟಗಾರರು) ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದರು. ಅವರಲ್ಲಿದ್ದ ಒಂದು ಪಿಸ್ತೂಲಿನಿಂದ ಹಾರಿದ ಗುಂಡು ಹೈದರ್‌ಗೆ ತಗುಲಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆತ ಮೃತಪಟ್ಟ’’ ಎಂದು ಪೊಲೀಸರು ತಿಳಿಸಿದ್ದರು.

ಗುಂಡಿನ ಕಾಳಗದ ಬಳಿಕ ಸುಮಾರು 300 ಕಿ.ಗ್ರಾಂ. ಮಾಂಸ ಹಾಗೂ ಕೆಲವು ಸಲಕರಣೆಗಳು ಪತ್ತೆಯಾದವು. ಆರು ಮಂದಿಯ ವಿರುದ್ಧ ಪ್ರಕರಣ ಕೂಡ ದಾಖಲಿಸಲಾಗಿದೆ ಎಂದು ಪೊಲೀಸರು ಪ್ರತಿಪಾದಿಸಿದ್ದರು. 

ಆದರೆ, ಹೈದರ್‌ನ ಕುಟುಂಬ ಘಟನೆಯ ಕುರಿತ ಪೊಲೀಸ್ ಆವೃತ್ತಿಯನ್ನು ನಿರಾಕರಿಸಿತ್ತು. ‘‘ನನ್ನ ಪತ್ನಿಗೆ 40 ಬಿಘಾ ಭೂಮಿ ಹಾಗೂ ಎರಡು ಪರವಾನಿಗೆ ಇರುವ ಗನ್‌ಗಳು ಇವೆ. ಅವರು ಯಾಕೆ ಅಕ್ರಮ ಪಿಸ್ತೂಲ್ ಇರಿಸಿಕೊಳ್ಳಬೇಕು’’ ಎಂದು ಅವರು ಪ್ರಶ್ನಿಸಿದ್ದರು.

ನ್ಯಾಯಾಲಯ ತನ್ನ ಆದೇಶದಲ್ಲಿ ಸಬ್ ಇನ್ಸ್‌ಪೆಕ್ಟರ್ ಓಮ್‌ವೀರ್, ಯಶ್‌ಪಾಲ್ ಸಿಂಗ್, ಅಸ್ಗರ್ ಅಲಿ ಹಾಗೂ ಹೆಡ್ ಕಾನ್ಸ್‌ಟೆಬಲ್‌ಗಳಾದ  ಸುಖ್‌ಪಾಲ್ ಸಿಂಗ್, ಕುನ್ವಾರ್ ಭರತ್, ಪ್ರಮೋದ್ ಕುಮಾರ್, ವಿಪಿನ್ ಹಾಗೂ ಕಾನ್ಸ್‌ಟೆಬಲ್‌ಗಳಾದ ರಾಜವೀರ್ ಸಿಂಗ್, ದೇವೇಂದ್ರ ನೀತು ಯಾದವ್, ಅಂಕಿತ್ ಕುಮಾರ್ ಹಾಗೂ ಬ್ರಜೇಶ್ ಕುಮಾರ್ ಅವರ ವಿರುದ್ಧ ಹತ್ಯೆ ಪ್ರಕರಣ ದಾಖಲಿಸುವಂತೆ ಉತ್ತರ ಪ್ರದೇಶ ಪೊಲೀಸರಿಗೆ ನಿರ್ದೇಶಿಸಿತು.
ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ಮುಂದಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಅಧೀಕ್ಷಕ ಸುರಾಜ್ ರಾಯ್ ಅವರು ತಿಳಿಸಿದ್ದಾರೆ.

Similar News