ಜೊಕೊವಿಕ್, ಕರೋಲಿನಾ ಪ್ಲಿಸ್ಕೋವಾ ಕ್ವಾ. ಫೈನಲ್‌ಗೆ

ಆಸ್ಟ್ರೇಲಿಯನ್ ಓಪನ್

Update: 2023-01-23 18:44 GMT

ಮೆಲ್ಬೋರ್ನ್, ಜ.23: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ನೊವಾಕ್ ಜೊಕೊವಿಕ್ ಹಾಗೂ ಕರೋಲಿನಾ ಪ್ಲಿಸ್ಕೋವಾ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಸೋಮವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಳೀಯ ಆಟಗಾರ ಅಲೆಕ್ಸ್ ಡಿ ಮಿನೌರ್‌ರನ್ನು 6-2, 6-1, 6-2 ನೇರ ಸೆಟ್‌ಗಳ ಅಂತರದಿಂದ ಮಣಿಸಿರುವ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅಂತಿಮ-8ರ ಘಟ್ಟ ತಲುಪಿದ್ದಾರೆ.

ಈ ಗೆಲುವಿನ ಮೂಲಕ ಜೊಕೊವಿಕ್ 10ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಜೊಕೊವಿಕ್ ಆಸ್ಟ್ರೇಲಿಯ ನೆಲದಲ್ಲಿ ಸತತ 38ನೇ ಗೆಲುವು ದಾಖಲಿಸಿದರು. 2018ರ ನಂತರ ಜೊಕೊವಿಕ್ ಮೆಲ್ಬೋರ್ನ್ ಪಾರ್ಕ್‌ನಲ್ಲಿ 4ನೆೀ ಸುತ್ತಿನ ಪಂದ್ಯವನ್ನು ಸೋತಿಲ್ಲ.

ಜೊಕೊವಿಕ್ ಆಸ್ಟ್ರೇಲಿಯನ್ ಓಪನ್‌ನಲ್ಲಿ 13ನೇ ಬಾರಿ ಹಾಗೂ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ 54ನೇ ಬಾರಿ ಕ್ವಾರ್ಟರ್ ಫೈನಲ್ ಸುತ್ತು ಪ್ರವೇಶಿಸಿದ್ದಾರೆ.

► ಪ್ಲಿಸ್ಕೋವಾ ಕ್ವಾರ್ಟರ್ ಫೈನಲ್‌ಗೆ: ವಿಶ್ವದ ಮಾಜಿ ನಂ.1 ಆಟಗಾರ್ತಿ ಕರೋಲಿನಾ ಪ್ಲಿಸ್ಕೋವಾ ಚೀನಾದ ಝಾಂಗ್ ಶುಐ ಅವರನ್ನು ನೇರ ಸೆಟ್‌ಗಳ ಅಂತರದಿಂದ ಸೋಲಿಸಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಸೋಮವಾರ ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ ಝೆಕ್ ಆಟಗಾರ್ತಿ ಪ್ಲಿಸ್ಕೋವಾ 23ನೇ ಶ್ರೇಯಾಂಕದ ಝಾಂಗ್ ಅವರನ್ನು 6-0, 6-4 ಅಂತರದಿಂದ ಮಣಿಸಿದರು. ಗಾಯದ ಸಮಸ್ಯೆಯಿಂದಾಗಿ ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ಟೂರ್ನಿಯಿಂದ ಹೊರಗುಳಿದಿದ್ದ ಪ್ಲಿಸ್ಕೋವಾ 11ನೇ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

30ರ ಹರೆಯದ ಪ್ಲಿಸ್ಕೋವಾ 16 ಡಬ್ಲುಟಿಎ ಟೂರ್ ಪ್ರಶಸ್ತಿಗಳನ್ನು ಜಯಿಸಿದ್ದು, 2019ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿ ಫೈನಲ್ ತಲುಪಿದ್ದರು. ಇಗಾ ಸ್ವಿಯಾಟೆಕ್ ಈಗಾಗಲೇ ಟೂರ್ನಿಯಿಂದ ನಿರ್ಗಮಿಸಿರುವ ಹಿನ್ನೆಲೆಯಲ್ಲಿ ಪ್ಲಿಸ್ಕೋವಾಗೆ ಪ್ರಶಸ್ತಿ ಗೆಲ್ಲುವ ಉತ್ತಮ ಅವಕಾಶವಿದೆ. ಪ್ಲಿಸ್ಕೋವಾ ಸೆಮಿ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಮುಂದಿನ ಸುತ್ತಿನಲ್ಲಿ ಪೋಲ್ಯಾಂಡ್‌ನ ವಿಶ್ವದ ನಂ.45ನೇ ಆಟಗಾರ್ತಿ ಮಗ್ದಾ ಲಿನೆಟ್‌ರನ್ನು ಎದುರಿಸಲಿದ್ದಾರೆ.

ಸಬಲೆಂಕಾ ಅಂತಿಮ-8ರ ಸುತ್ತಿಗೆ: ಸೋಮವಾರ ಸ್ವಿಸ್‌ನ ಬೆಲಿಂಡಾ ಬೆನ್ಸಿಕ್‌ರನ್ನು 7-5, 6-2 ಸೆಟ್‌ಗಳ ಅಂತರದಿಂದ ಮಣಿಸಿದ ಅರ್ಯನಾ ಸಬಲೆಂಕಾ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

24ರ ಹರೆಯದ ಬೆಲಾರುಸ್ ಆಟಗಾರ್ತಿ ಅಂತಿಮ-8ರ ಸುತ್ತಿನಲ್ಲಿ ಕ್ರೊಯೇಶಿಯದ ಡೊನ್ನಾ ವಿಕಿಕ್ ಅಥವಾ ಝೆಕ್‌ನ ಯುವ ಆಟಗಾರ್ತಿ ಲಿಂಡಾ ಫ್ರುವಿಟ್ರೊವಾರನ್ನು ಎದುರಿಸಲಿದ್ದಾರೆ.

ಸಬಲೆಂಕಾ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ 4ನೇ ಬಾರಿ ಸೆಮಿ ಫೈನಲ್ ತಲುಪುವ ವಿಶ್ವಾಸದಲ್ಲಿದ್ದಾರೆ. ಹಾಟ್ ಫೇವರಿಟ್ ಇಗಾ ಸ್ವಿಯಾಟೆಕ್ ರವಿವಾರ 4ನೇ ಸುತ್ತಿನಲ್ಲಿ ಸೋಲನುಭವಿಸಿ ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಹೀಗಾಗಿ ಸಬಲೆಂಕಾಗೆ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸುವ ಅವಕಾಶವಿದೆ.

Similar News