ಬಲೂಚಿಸ್ತಾನದಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಕೆಟ್ಟುಹೋಗಿರುವ ನೀರು ಸಂಸ್ಕರಣಾ ಘಟಕಗಳಿಂದಾಗಿ ಕುಡಿಯುವ ನೀರು ಪೂರೈಕೆಗೆ ಅಡಚಣೆ

Update: 2023-01-24 17:13 GMT

ಕ್ವೆಟ್ಟಾ,ಜ.24: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದ ಪ್ರಮುಖ ಪ್ರದೇಶಗಳು ಕುಡಿಯುವ ನೀರಿನ ತೀವ್ರ ಕೊರತೆಯಿಂದ ಬಾಧಿತವಾಗಿವೆ ಎಂದು ‘ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್’ ದಿನಪತ್ರಿಕೆ ವರದಿ ಮಾಡಿದೆ. ಕಳಪೆ ನಿರ್ವಹಣೆ ಕಾರಣದಿಂದಾಗಿ ನೀರು ಸಂಸ್ಕರಣಾ ಸ್ಥಾವರಗಳು ಕೆಟ್ಟುಹೋಗಿರುವ ಕಾರಣ ಕುಡಿಯುವ ನೀರಿನ ಪೂರೈಕೆಗೆ ಅಡ್ಡಿಯುಂಟಾಗಿದೆಯೆಂದು ವರದಿ ಹೇಳಿದೆ.

ಬಲೂಚಿಸ್ತಾನ ಪ್ರಾಂತದ ಶೇ.25ರಷ್ಟು ನಿವಾಸಿಗಳಿಗೆ ಮಾತ್ರವೇ ಶುದ್ಧ ಕುಡಿಯುವ ನೀರಿನ ಸೌಲಭ್ಯವಿದೆ ಎಂದು ನಾಗರಿಕ ಸೇವಾ ಸಂಘಟನೆಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಕಾರ್ಯನಿರ್ವಹಿಸದೇ ಇರುವ ನೀರು ಸಂಸ್ಕರಣಾ ಘಟಕಗಳನ್ನು ದುರಸ್ತಿಗೊಳಿಸುವಂತೆ ಸ್ಥಳೀಯರು ಸರಕಾರವನ್ನು ಆಗ್ರಹಿಸುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ. ಇದಕ್ಕೂ ಮುನ್ನ ಬಲೂಚಿಸ್ತಾನದ ಮುಖ್ಯಮಂತ್ರಿ ಅಬ್ದುಲ್ ಕ್ವಡೂಸ್ ಬಿಝೆಂಜೊ ಅವರು, ಕೆಟ್ಟುಹೋಗಿರುವ ನೀರು ಸಂಸ್ಕರಣಾ ಘಟಕಗಳನ್ನು ಒಂದು ತಿಂಗಳೊಳಗೆ ಸರಿಪಡಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿದ್ದರು ಎಂದು ಟ್ರಿಬ್ಯೂನ್ ವರದಿ ತಿಳಿಸಿದೆ.

ತೀವ್ರವಾದ ನೀರಿನ ಕೊರತೆಯಿಂದಾಗಿ ಪಾಕಿಸ್ತಾನವು ಪೀಡಿತವಾಗಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು ಸಿಂದ್ ಪ್ರಾಂತದ ಜಯೆ ಸಿಂಧ್ ಕವಾಮಿ ಮಹಾಝ್ ( ಜೆಎಸ್ಕ್ಯೂಎಂ) ಸಂಘಟನೆಯು ಸಿಂಧ್ ಪ್ರಾಂತದಲ್ಲಿ ನೀರಿನ ಕೊರತೆಯನ್ನು ಖಂಡಿಸಿ, ಪ್ರತಿಭಟನಾ ರ್ಯಾಲಿಗಳನ್ನು ಆಯೋಜಿಸಿತ್ತು. ಈ ರ್ಯಾಲಿಯಲ್ಲಿ ಭಾಗವಹಿಸಿದ್ದ ನಾಯಕರು, ಪಂಜಾಬ್ ಪ್ರಾಂತ ಸರಕಾರವು ಸಿಂಧೂ ನದಿಯನ್ನು ಬತ್ತಿಸಲು ಯತ್ನಿಸುತ್ತಿದೆಯೆಂದು ಆರೋಪಿಸಿದ್ದರು. ನದಿನೀರಿನ ಹಂಚಿಕೆ ಕುರಿತಾಗಿ ಪ್ರಾಂತಗಳ ನಡುವೆ ಏರ್ಪಟ್ಟ ಒಡಬಂಡಿಕೆಯನ್ನು ಪಂಜಾಬ್ ಸರಕಾರವು ಅನುಸರಿಸುತ್ತಿಲ್ಲವೆದು ಜೆಎಸ್ಕ್ಯೂಎಂ ಆಪಾದಿಸಿದೆ.

ಸಿಂಧ್ ಪ್ರಾಂತದಲ್ಲಿ ಪಿಪಿಪಿ ಪಕ್ಷದ ಜೊತೆ ನಂಟು ಹೊಂದಿರುವ ಗಣ್ಯರು ನೀರಿನ ಪೂರೈಕೆಯ ಪ್ರಯೋಜನವನ್ನು ಪಡೆಯುತ್ತಾರೆ. ಆದರೆ ಯಾವುದೇ ಪ್ರಭಾವ ಹಾಗೂ ರಾಜಕೀಯ ನಂಟು ಹೊಂದಿರದ ಇತರರು ಬವಣೆಪಡುತ್ತಿದ್ದಾರೆಂದು ‘ ಎಕ್ಸ್ಪ್ರೆಸ್ ಟ್ರಿಬ್ಯೂನ್’ ವರದಿಯಲ್ಲಿ ತಿಳಿಸಿದೆ.

Similar News