‘ರಾಮಚರಿತ ಮಾನಸ’ದ ಕುರಿತು ಟೀಕೆ : ಎಸ್‌ಪಿ ಎಂಎಲ್‌ಸಿ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಪ್ರಕರಣ ದಾಖಲು

Update: 2023-01-24 17:47 GMT

ಲಕ್ನೋ (ಉ.ಪ್ರ.), ಜ. 24: ರಾಮಾಯಣ ಆಧಾರಿತ ಹಿಂದೂ ಧಾರ್ಮಿಕ ಮಹಾಕಾವ್ಯ ಕುರಿತ ನೀಡಿದ ಹೇಳಿಕೆ ಕುರಿತಂತೆ ಸಮಾಜವಾದಿ ಪಕ್ಷದ ಎಂಎಲ್‌ಸಿ ಸ್ವಾಮಿ ಪ್ರಸಾದ್ ಮೌರ್ಯ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಶಿವೇಂದ್ರ ಮಿಶ್ರಾ ಎಂಬವರು ಸಲ್ಲಿಸಿದ ದೂರಿನ ಆಧಾರದಲ್ಲಿ ಲಕ್ನೋದ ಹಝ್ರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. 

ಉತ್ತರಪ್ರದೇಶದ ಹಿಂದುಳಿದ ವರ್ಗದ ನಾಯಕರಾಗಿರುವ ಮೌರ್ಯ ಅವರು 16ನೇ ಶತಮಾನದ ಕವಿ ಹಾಗೂ ಸಂತ ತುಳಸಿದಾಸ್ ರಚಿಸಿದ ‘ರಾಮಚರಿತ ಮಾನಸ’ವನ್ನು ನಿಷೇಧಿಸುವಂತೆ ರವಿವಾರ ಆಗ್ರಹಿಸಿದ್ದರು. ರಾಮಚರಿತ ಮಾನಸದಲ್ಲಿ ದಲಿತರು ಹಾಗೂ ಮಹಿಳೆಯರನ್ನು ಅವಮಾನಿಸಲಾಗಿದೆ ಎಂದು ಅವರು ಆರೋಪಿಸಿದ್ದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಮೌರ್ಯ, ‘‘ರಾಮಚರಿತ ಮಾನಸದ ಬಗ್ಗೆ ನನಗೆ ಏನೂ ಸಮಸ್ಯೆ ಇಲ್ಲ. ಆದರೆ, ಅದರ ಕೆಲವು ಭಾಗಗಳಲ್ಲಿ ನಿರ್ದಿಷ್ಟ ಜಾತಿ ಹಾಗೂ ಪಂಗಡಗಳ ಕುರಿತ ಅವಮಾನಕರ ಹೇಳಿಕೆ ಹಾಗೂ ವ್ಯಂಗ್ಯವನ್ನು ಹೊಂದಿದೆ. ಅದನ್ನು ತೆಗೆದು ಹಾಕಬೇಕು’’ ಎಂದಿದ್ದರು.

Similar News