ಮಂಗಳೂರು: ಸಕಲ ಸರಕಾರಿ ಗೌರವದೊಂದಿಗೆ ಯೋಧ ಮುರಳೀಧರ್ ಅಂತ್ಯಕ್ರಿಯೆ

Update: 2023-01-25 13:05 GMT

ಮಂಗಳೂರು: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಯೋಧ ಮುರಳೀಧರ್ ರೈಯ ಅಂತ್ಯಸಂಸ್ಕಾರವು ಬುಧವಾರ ಶಕ್ತಿನಗರದಲ್ಲಿ ಸಕಲ ಸರಕಾರಿ ಗೌರವದೊಂದಿಗೆ ನೆರವೇರಿತು.

ನಗರದ ಖಾಸಗಿ ಆಸ್ಪತ್ರೆಯಲ್ಲಿದ್ದ ಪಾರ್ಥಿವ ಶರೀರವನ್ನು ಶಕ್ತಿನಗರದ ಮುಗ್ರೋಡಿ ಸಂಜಯನಗರದ ಅವರ ಮನೆಯಿಂದ ಮೆರವಣಿಗೆ ಮೂಲಕ ಆಂಜನೇಯ ಸಭಾಭವನ ಮೈದಾನಕ್ಕೆ ತಂದು ಸಾರ್ವಜನಿಕ ವೀಕ್ಷಣೆಗಾಗಿ ಅವಕಾಶ ಕಲ್ಪಿಸಲಾಯಿತು. ಬಳಿಕ ಸರಕಾರಿ ಗೌರವ ಸಲ್ಲಿಸಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಈ ಸಂದರ್ಭ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಮದನ್ ಮೋಹನ್, ಶಾಸಕ ವೇದವ್ಯಾಸ ಕಾಮತ್, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಪಾಲಿಕೆಯ ಸದಸ್ಯರಾದ ಶಕೀಲಾ ಕಾವಾ, ಸುಧೀರ್ ಶೆಟ್ಟಿ, ವನಿತಾ ಪ್ರಸಾದ್ ಉಪಸ್ಥಿತರಿದ್ದರು.

ಸಶಸ್ತ್ರ ಸೀಮಾಬಲ್‌ನಲ್ಲಿ ಹವಾಲ್ದಾರ್ ಆಗಿದ್ದ ಮುರಳೀಧರ್ ರೈ ರವಿವಾರ ಹೃದಯಾಘಾತದಿಂದ ಮೃತಪಟ್ಟಿದ್ದರು. ಮಂಗಳವಾರ ಮೃತದೇಹವನ್ನು ಮಂಗಳೂರಿಗೆ ತರಲಾಗಿತ್ತು.

Similar News