ಭಯೋತ್ಪಾದನೆಯ ವಿರುದ್ಧದ ಕಾರ್ಯಾಚರಣೆ ಅಣಕವಾಗದಿರಲಿ

Update: 2023-01-26 04:21 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಮಹಾರಾಷ್ಟ್ರದ ಮುಂಬೈಯಲ್ಲಿ ಕೆಲವು ದಿನಗಳ ಹಿಂದೆ ಅಲ್ಲಿನ ಪೊಲೀಸರು ‘ಭಯೋತ್ಪಾದಕ ನಿಗ್ರಹ’ಕ್ಕೆ ಸಂಬಂಧಿಸಿ ಒಂದು ಅಣಕು ಕಾರ್ಯಾಚರಣೆಯನ್ನು ನಡೆಸಿದ್ದರು. ಈ ಕಾರ್ಯಾಚರಣೆಗೆ ಅವರು ಆರಿಸಿದ್ದು, ಅಲ್ಲಿ ಸ್ಥಳೀಯವಾಗಿ ಖ್ಯಾತಿವೆತ್ತ ಚಂದ್ರಾಪುರ ದೇವಾಲಯವನ್ನು. ಭಯೋತ್ಪಾದಕರು ದೇವಾಲಯಕ್ಕೆ ದಾಳಿ ನಡೆಸುವುದಕ್ಕೆ ಆಗಮಿಸುತ್ತಿರುವಾಗ ಭಯೋತ್ಪಾದನಾ ನಿಗ್ರಹ ದಳದ ಸಿಬ್ಬಂದಿಗಳು ಅವರ ಮೇಲೆ ದಾಳಿ ನಡೆಸಿ ಅನಾಹುತಗಳನ್ನು ತಡೆಯುವ ಅಣಕು ಕಾರ್ಯಾಚರಣೆ ನಡೆಯುತ್ತದೆ. ವಿಪರ್ಯಾಸವೆಂದರೆ, ಈ ಅಣಕು ಕಾರ್ಯಾಚರಣೆಯ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬ ‘ನಿರ್ದಿಷ್ಟ ಸಮುದಾಯಕ್ಕೆ ಸಂಬಂಧಿಸಿದ ಘೋಷಣೆ’ಗಳನ್ನು ಕೂಗುತ್ತಾನೆ. ಒಂದೆಡೆ ದೇವಸ್ಥಾನದ ಆವರಣದಲ್ಲಿ ನಡೆದಿರುವ ಕಾರ್ಯಾಚರಣೆ. ಅದರ ಜೊತೆ ಜೊತೆಗೇ ಕಾರ್ಯಾಚರಣೆಯಲ್ಲಿ ಭಯೋತ್ಪಾದಕನ ವೇಷ ಧರಿಸಿದಾತ ಒಂದು ನಿರ್ದಿಷ್ಟ ಸಮುದಾಯದ ಘೋಷಣೆಗಳನ್ನೂ ಕೂಗುತ್ತಾನೆ. ಅಲ್ಲಿ ನೆರೆದಿರುವ ಜನರಿಗೆ ಇದೊಂದು ಅಣಕು ಕಾರ್ಯಾಚರಣೆ ಎನ್ನುವುದು ಗೊತ್ತೇ ಇಲ್ಲದೆ ಇರುವಾಗ ಅವರೆಲ್ಲ ಏನೆಂದು ಭಾವಿಸಬೇಕು? ಈ ಅಣಕು ಕಾರ್ಯಾಚರಣೆ ಸ್ಥಳೀಯರನ್ನು ತೀವ್ರ ಆತಂಕಕ್ಕೆ ತಳ್ಳಿತು. ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಭಯೋತ್ಪಾದಕರು ದೇವಸ್ಥಾನದ ಮೇಲೆ ದಾಳಿ ನಡೆಸಿದ್ದಾರೆ ಎನ್ನುವುದು ವದಂತಿಯ ರೂಪದಲ್ಲಿ ಹರಡಿತು. ವಕೀಲರ ಸಂಘವೊಂದು ಈ ಕೃತ್ಯದ ವಿರುದ್ಧ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿತು. ಪರಿಸ್ಥಿತಿ ಕೈ ಮೀರುತ್ತಿದ್ದಂತೆಯೇ ಪೊಲೀಸ್ ವರಿಷ್ಠರು ಸ್ಪಷ್ಟೀಕರಣ ನೀಡಿದರು. ಪೊಲೀಸ್ ಅಧೀಕ್ಷಕರು, ಇಂತಹ ಘಟನೆ ಮರುಕಳಿಸದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಘೋಷಣೆ ಕೂಗಿದ ಸಿಬ್ಬಂದಿಗೆ ಎಚ್ಚರಿಕೆಯ ನೋಟಿಸ್ ನೀಡುವುದಾಗಿಯೂ ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ನಿಜಕ್ಕೂ ಈ ಅಣಕು ಕಾರ್ಯಾಚರಣೆಯ ಉದ್ದೇಶವೇನು ಎನ್ನುವುದನ್ನು ಇದೀಗ ಅಲ್ಲಿನ ಜನರು ಪ್ರಶ್ನಿಸುತ್ತಿದ್ದಾರೆ.

ಭಯೋತ್ಪಾದನೆಯ ಕುರಿತಂತೆ ಜಾಗೃತಿಯನ್ನು ಬಿತ್ತುವುದು ಕಾರ್ಯಾಚರಣೆಯ ಉದ್ದೇಶವಾಗಿರಬೇಕಾಗಿತ್ತು. ಆದರೆ ಈ ಕಾರ್ಯಾಚರಣೆ ಜನರಲ್ಲಿ ಭಯೋತ್ಪಾದನೆಯ ಕುರಿತಂತೆ ಪೂರ್ವಾಗ್ರಹಗಳನ್ನು ಬಿತ್ತಿತ್ತು ಮಾತ್ರವಲ್ಲ, ಜನರಲ್ಲಿ ಇನ್ನಷ್ಟು ಆತಂಕ, ಅಭದ್ರತೆಯನ್ನು ಸೃಷ್ಟಿಸಿತ್ತು. ಮೊತ್ತ ಮೊದಲಾಗಿ ಇಂತಹ ಕಾರ್ಯಾಚರಣೆಗಳನ್ನು ಧಾರ್ಮಿಕ ಆವರಣಗಳಲ್ಲಿ ನಡೆಸುವುದೇ ತಪ್ಪು. ಇದು ಅನಗತ್ಯವಾಗಿ ಜನರಲ್ಲಿ ತಪ್ಪು ಕಲ್ಪನೆಗಳನ್ನು, ಭೀತಿಯನ್ನು ಬಿತ್ತುತ್ತವೆ. ಈ ಹಿಂದೆ ಶಬರಿ ಮಲೆಯಲ್ಲಿ ಪೊಲೀಸರು ಇಂತಹದೇ ಒಂದು ಸಣ್ಣ ಅಣಕು ಕಾರ್ಯಾಚರಣೆಯನ್ನು ನಡೆಸಿದ್ದರು. ಶಬರಿ ಮಲೆಗೆ ಹೋಗಿದ್ದ ಭಕ್ತರೊಬ್ಬರು ಇದನ್ನು ನಿಜವೆಂದೇ ನಂಬಿ ಊರಿಗೆ ಮರಳಿ, ಪತ್ರಿಕೆಯೊಂದರ ವರದಿಗಾರನಿಗೆ ವಿವರಿಸಿದ್ದರು. ಆತ ಅದನ್ನು ಯಥಾವತ್ ತನ್ನ ಪತ್ರಿಕೆಗೆ ಕಳುಹಿಸಿದ್ದ. ‘ಶಬರಿ ಮಲೆಯಲ್ಲಿ ಉಗ್ರರು’ ಎನ್ನುವ ತಲೆಬರಹದಲ್ಲಿ ಇದು ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿ, ಜನಸಾಮಾನ್ಯರಲ್ಲಿ ಆತಂಕವನ್ನು, ಅಭದ್ರತೆಯನ್ನು, ಅಪನಂಬಿಕೆಗಳನ್ನು ಬಿತ್ತುವಲ್ಲಿ ಯಶಸ್ವಿಯಾಗಿತ್ತು. ಅಣಕು ಕಾರ್ಯಾಚರಣೆಯ ಉದ್ದೇಶವೇ ಇಂತಹದೊಂದು ಅಪನಂಬಿಕೆಯನ್ನು ಬಿತ್ತುವುದಾಗಿತ್ತೆ? ಎಂದು ಜನರು ಪ್ರಶ್ನಿಸುವಂತಾಗಿತ್ತು. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಇಂತಹ ಅಣಕು ಕಾರ್ಯಾಚರಣೆಗಳನ್ನು ಪೊಲೀಸರು ಯಾಕಾಗಿ ಹಮ್ಮಿಕೊಳ್ಳುತ್ತಾರೆ? ಇದರ ಹಿಂದೆ ರಾಜಕೀಯ ಶಕ್ತಿಗಳ ಕುಮ್ಮಕ್ಕಿದೆಯೆ? ಒಂದು ನಿರ್ದಿಷ್ಟ ಸಮುದಾಯದ ತಲೆಗೆ ಭಯೋತ್ಪಾದನೆಯ ಪಟ್ಟಕಟ್ಟಿ, ಜನರನ್ನು ಆತಂಕ, ಅಭದ್ರತೆಯಲ್ಲಿರುವಂತೆ ನೋಡಿಕೊಳ್ಳುವುದು ಇದರ ಉದ್ದೇಶವೆ? ಎಂದು ಜನರು ಪ್ರಶ್ನಿಸುವಂತಾಗಿದೆ. ಪೊಲೀಸರ ಇಂತಹ ಅಣಕು ಕಾರ್ಯಾಚರಣೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಬದಲು ಅವರಿಗೆ ಭಯೋತ್ಪಾದಕರ ಬಗ್ಗೆ ತಪ್ಪು ಮಾಹಿತಿಗಳನ್ನು ನೀಡುತ್ತಿದೆ ಎಂದು ಜನರು ಆರೋಪಿಸುವಂತಾಗಿದೆ.

ಇಂದು ಭಯೋತ್ಪಾದನೆಯ ಕುರಿತಂತೆ ಅರಿವನ್ನು ಮೂಡಿಸಬೇಕಾದುದು ಜನರಿಗಲ್ಲ, ಪೊಲೀಸ್ ಇಲಾಖೆಗೆ ಎನ್ನುವುದು ಮೇಲಿನ ಪ್ರಕರಣದಿಂದ ಬಹಿರಂಗವಾಗಿದೆ. ಪೊಲೀಸರಲ್ಲೇ ಭಯೋತ್ಪಾದನೆಯ ಕುರಿತಂತೆ ಇಂತಹದೊಂದು ತಪ್ಪು ಕಲ್ಪನೆ ನೆಲೆಸಿದೆಯಾದರೆ, ಇವರು ಭಯೋತ್ಪಾದಕರನ್ನು ಅದು ಹೇಗೆ ನಿಯಂತ್ರಿಸಬಲ್ಲರು? ಎನ್ನುವ ಪ್ರಶ್ನೆಯನ್ನು ಜನಸಾಮಾನ್ಯರು ಕೇಳುತ್ತಿದ್ದಾರೆ. ಮಹಾತ್ಮಾಗಾಂಧೀಜಿಯನ್ನು ಕೊಂದ ಗೋಡ್ಸೆ ಸ್ವತಂತ್ರ ಭಾರತದ ಮೊತ್ತ ಮೊದಲ ಭಯೋತ್ಪಾದಕ. ಈ ದೇಶದ ಇಬ್ಬರು ಪ್ರಧಾನಿಗಳನ್ನು ಕೊಂದ ಭಯೋತ್ಪಾದಕರು ಯಾವ ಸಮುದಾಯಕ್ಕೆ ಸೇರಿದವರು ಎನ್ನುವುದರ ಬಗ್ಗೆ ಪೊಲೀಸ್ ವರಿಷ್ಠರು ತಮ್ಮ ಕಿರಿಯ ಸಿಬ್ಬಂದಿಗೆ ವಿವರಿಸಬೇಕಾಗಿದೆ. ಮಾಲೆಗಾಂವ್ ಸ್ಫೋಟ, ಮಕ್ಕಾ ಮಸೀದಿ ಸ್ಫೋಟ, ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟಗಳಲ್ಲಿ ಉಗ್ರರೆಂದು ಗುರುತಿಸಿದವರು ಯಾವ ಸಮುದಾಯಕ್ಕೆ ಸೇರಿದವರು ಎನ್ನುವುದರ ಬಗ್ಗೆಯೂ ಪೊಲೀಸರಲ್ಲಿ ಅರಿವು ಮೂಡಿಸಬೇಕು. ಒಂದು ನಿರ್ದಿಷ್ಟ ಸಮುದಾಯ ಕೃತ್ಯವೆಸಗಿದಾಗ ಅದು ಭಯೋತ್ಪಾದನೆ, ಇಲ್ಲವಾದರೆ ಅದು ದೇಶಪ್ರೇಮ ಎನ್ನುವ ಮನಸ್ಥಿತಿಯೊಂದನ್ನು ಗೋಡ್ಸೆ ವಾದಿಗಳು ಈ ದೇಶದಲ್ಲಿ ಬಿತ್ತುತ್ತಿದ್ದಾರೆ.

ಮಾಲೆಗಾಂವ್ ಸ್ಫೋಟದಲ್ಲಿ ವಿಚಾರಣೆ ಎದುರಿಸುತ್ತಿರುವ ಪ್ರಜ್ಞಾ ಸಿಂಗ್ ಠಾಕೂರ್ ಎಂಬ ಶಂಕಿತ ಭಯೋತ್ಪಾದಕಿಯನ್ನು ಆ ಮನಸ್ಥಿತಿಗಳೇ ಇಂದು ‘ದೇಶಪ್ರೇಮಿ’ಯಾಗಿ ಬಿಂಬಿಸುತ್ತಿವೆ. ಒಂದೆಡೆ ಭಯೋತ್ಪಾದನೆಯ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ವಿಶ್ವಕ್ಕೆ ಕರೆನೀಡುತ್ತಾ, ಮಗದೊಂದೆಡೆ ಭಯೋತ್ಪಾದನೆಯ ಆರೋಪ ಹೊತ್ತ ವ್ಯಕ್ತಿಗಳಿಗೆ ಪಕ್ಷದಿಂದ ಟಿಕೆಟ್ ನೀಡಿ ಅವರನ್ನು ಸಂಸತ್ ಪ್ರವೇಶಿಸಲು ಅವಕಾಶ ನೀಡುವುದು ಭಯೋತ್ಪಾದನೆಯ ವಿರುದ್ಧದ ಅಣಕು ಕಾರ್ಯಾಚರಣೆಯಲ್ಲವೆ? ಭಯೋತ್ಪಾದನೆಯ ವಿರುದ್ಧ ಭಾರತ ತಳೆದಿರುವ ದೋರಣೆಗಳನ್ನು ಸರಕಾರದ ಇಂತಹ ನಿರ್ಧಾರಗಳು ಅಣಕಿಸುತ್ತವೆ. ಇಂತಹ ದ್ವಂದ್ವ ನೀತಿಯಿಂದ ಭಯೋತ್ಪಾದನೆಯನ್ನು ಎದುರಿಸಲು ಸಾಧ್ಯವಿಲ್ಲ ಎನ್ನುವ ಅರಿವು ಸರಕಾರಕ್ಕೂ, ಪೊಲೀಸ್ ಇಲಾಖೆಗೂ ಇರಬೇಕಾಗಿದೆ. ಭಯೋತ್ಪಾದಕರ ವಿರುದ್ಧ ಹೋರಾಡುತ್ತಾ ಹುತಾತ್ಮರಾಗಿರುವ ಕರ್ಕರೆ ಮತ್ತು ಅವರ ತಂಡದ ವಿರುದ್ಧ ಭಯೋತ್ಪಾದನೆಯ ಆರೋಪ ಹೊತ್ತಾಕೆ ಹೇಳಿಕೆಯನ್ನು ನೀಡುತ್ತಾಳೆ ಮತ್ತು ಆಕೆ ಚುನಾವಣೆಯಲ್ಲಿ ಗೆದ್ದು ಸಂಸತ್ ಸದಸ್ಯೆಯಾಗಿ ಆಯ್ಕೆಯಾಗಿ, ಸಾರ್ವಜನಿಕ ಸಮಾವೇಶದಲ್ಲಿ ಕತ್ತಿ, ಚೂರಿಗಳನ್ನು ಇಟ್ಟುಕೊಳ್ಳಲು ಯುವಕರಿಗೆ ಕರೆ ನೀಡುತ್ತಾಳೆ.

ಇಂತಹವರನ್ನು ಮಡಿಲಲ್ಲಿಟ್ಟುಕೊಂಡು ವಿಶ್ವಕ್ಕೆ ಭಯೋತ್ಪಾದನೆಯ ವಿರುದ್ಧ ಬೋಧನೆ ಮಾಡಿದರೆ ಅದನ್ನು ವಿಶ್ವ ಗಂಭೀರವಾಗಿ ಸ್ವೀಕರಿಸುವುದಾದರೂ ಹೇಗೆ? ಭಾರತ ತನ್ನ ಇಂತಹ ಧೋರಣೆಗಳ ಮೂಲಕವೇ ಇಂದು ವಿಶ್ವದಲ್ಲಿ ಧ್ವನಿ ಕಳೆದುಕೊಳ್ಳುತ್ತಿದೆ. ಇದೇ ಕಾರಣಕ್ಕಿರಬೇಕು, ದೇಶದಲ್ಲಿ ಪೊಲೀಸರು ಭಯೋತ್ಪಾದಕರ ವಿರುದ್ಧ ನಡೆಸುತ್ತಿರುವುದು ಅಣಕು ಕಾರ್ಯಾಚರಣೆಯೋ, ನಿಜದ ಕಾರ್ಯಾಚರಣೆಯೋ ಎನ್ನುವ ವಿಷಯದಲ್ಲೂ ಜನರಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಈ ಗೊಂದಲ ಪರಿಹಾರವಾಗಬೇಕಾದರೆ, ಭಯೋತ್ಪಾದಕರ ಕುರಿತಂತೆ ಪೊಲೀಸ್ ಇಲಾಖೆ, ತನಿಖಾ ಸಂಸ್ಥೆ ಗಳು ಎಲ್ಲಾ ಪೂರ್ವಾಗ್ರಹಗಳನ್ನು ಬದಿಗಿಟ್ಟು, ಭಯೋತ್ಪಾದಕರು ಯಾವುದೇ ಸಮುದಾಯಕ್ಕೆ, ಸಿದ್ಧಾಂತಕ್ಕೆ ಸೇರಿದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ನಿಷ್ಠುರತೆಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ದೇಶ ಭಯೋತ್ಪಾದಕರಿಂದ ಮುಕ್ತವಾಗಬಹುದು. ಇಲ್ಲದೇ ಇದ್ದರೆ ಭಯೋತ್ಪಾದಕರ ವಿರುದ್ಧ ಪೊಲೀಸರು ನಡೆಸುವ ನಿಜ ಕಾರ್ಯಾಚರಣೆಗಳೂ ಅಣಕು ಕಾರ್ಯಾಚರಣೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೀಡಾಗಬಹುದು.

Similar News