ಸಂವಿಧಾನ ಗಣತಂತ್ರ ರಾಷ್ಟ್ರದ ಭದ್ರ ಬುನಾದಿ

Update: 2023-01-26 07:13 GMT

‘‘ನಮ್ಮ ಸಂವಿಧಾನವು ಎಲ್ಲ ಕಾಲದಲ್ಲೂ ಆಡಳಿತ ನಡೆಸಲು ಬಲಿಷ್ಠವಾಗಿದೆ. ಒಂದು ವೇಳೆ ಪರಿಸ್ಥಿತಿ ಕೈ ಮೀರಿ ಹದಗೆಟ್ಟು ಹೋದಲ್ಲಿ, ಅದರರ್ಥ ನಮಗೆ ಕೆಟ್ಟ ಸಂವಿಧಾನ ಇದೆಯೆಂದಲ್ಲ, ಸಂವಿಧಾನ ಕೆಟ್ಟ ಆಡಳಿತ ನಡೆಸುವವರ ಕೈಯಲ್ಲಿದೆ ಎಂದರ್ಥ’’

                                                                                                     -ಡಾ. ಬಿ. ಆರ್. ಅಂಬೇಡ್ಕರ್

1947ರಲ್ಲಿ ಸ್ವಾತಂತ್ರ್ಯ ಬಂದರೂ 1950ರ ಜನವರಿ 26ರಂದು ನಮ್ಮ ದೇಶ ಗಣರಾಜ್ಯವಾಯಿತು. ಇದು ಸುಖಾ ಸುಮ್ಮನೆ ನಡೆದ ಹಾದಿಯಲ್ಲ, ಮೂರ್ನಾಕು ವರ್ಷಗಳ ಕಾಲ ಕಠಿಣ ಪರಿಶ್ರಮದಿಂದ ದೇಶ ಗಣರಾಜ್ಯವಾಗಲು ಸಂವಿಧಾನ ಮೂಲ ಕಾರಣ.

ಎರಡನೇ ಮಹಾಯುದ್ಧ ಕೊನೆಗೊಂಡ ಮೇಲೆ ಭಾರತಕ್ಕೆ ಸ್ವಾತಂತ್ರ್ಯ ನೀಡುವ ಹಾದಿ ಸುಗಮವಾಯಿತು. ಸ್ವಂತಂತ್ರ ಭಾರತದ ಆಡಳಿತ ನಿರ್ವಹಣೆಗೆ ಬಲಿಷ್ಠ ಸಂವಿಧಾನದ ಬೇಡಿಕೆ ದಟ್ಟವಾಯಿತು. ಈ ಕಾರಣಕ್ಕಾಗಿ ಬ್ರಿಟಿಷ್ ಆಡಳಿತ ತ್ರಿ ಸದಸ್ಯ ಆಯೋಗ ರಚನೆ ಮಾಡಿತು. ‘ಕ್ಯಾಬಿನೆಟ್ ಮಿಷನ್’ ಎಂದು ಕರೆಯುವ ಸದರಿ ಆಯೋಗ 1946 ಮಾರ್ಚ್ 16ರಲ್ಲಿ ‘ರಾಜ್ಯಾಂಗ ಸಭೆ’ ಕರೆಯಲು ಶಿಫಾರಸು ಮಾಡಿತು. ರಾಜ್ಯಾಂಗ ರಚನಾ ಸಭೆಗೆ ಭಾರತದ ವಿವಿಧ ಪ್ರಾಂತಗಳಿಂದ 296 ಸದಸ್ಯರು ಆಯ್ಕೆಯಾದರು. ಸ್ವಾತಂತ್ರ್ಯ ಪೂರ್ವದಿಂದಲೂ ಕೇಂದ್ರ ಮಂತ್ರಿಯಾಗಿ ಅಪಾರ ಅನುಭವ ಹೊಂದಿದ ಡಾ. ಬಿ.ಆರ್. ಅಂಬೇಡ್ಕರ್ ಅಂದಿನ ಕಾಂಗ್ರೆಸ್‌ನ ಕುಟಿಲ ನೀತಿಯ ನಡುವೆ ಜೋಗೇಂದ್ರನಾಥ್ ಮಂಡಲ್ ತೆರವುಗೊಳಿಸಿದ ಬಂಗಾಲ ವಿಧಾನ ಸಭಾ ಕ್ಷೇತ್ರದಿಂದ ಗೆದ್ದು ‘ರಾಜ್ಯಾಂಗ ಸಭೆ’ ಪ್ರವೇಶಿಸಿದರು. ಹೀಗೆ ಚುನಾಯಿತ ಪ್ರತಿನಿಧಿಗಳ ಸಂವಿಧಾನ ಸಭೆಯು 1946-ಜುಲ್ಯೆ ತಿಂಗಳಲ್ಲಿ ಸ್ಥಾಪನೆಯಾಯಿತು.

ಮೊದಲ ರಾಜ್ಯಾಂಗ ಸಭೆಯು 1946 ಡಿಸೆಂಬರ್ 09 ದಿಲ್ಲಿಯ ‘ಸಂವಿಧಾನ ಭವನ’ದಲ್ಲಿ ಪ್ರಾರಂಭವಾಯಿತು. ಡಿಸಂಬರ್-11ರಂದು ಡಾ. ರಾಜೇಂದ್ರ ಪ್ರಸಾದ್ ರಾಜ್ಯಾಂಗ ರಚನಾ ಸಭೆಯ ಅಧ್ಯಕ್ಷರಾದರು. ಡಿಸೆಂಬರ್-17ರಂದು ಡಾ. ಬಿ.ಆರ್. ಅಂಬೇಡ್ಕರ್‌ಗೆ ಅನಿರೀಕ್ಷಿತವಾಗಿ ರಾಜ್ಯಾಂಗ ರಚನೆ ಕುರಿತು ಮಾತನಾಡುವ ಅವಕಾಶ ದೊರೆಯಿತು. ಬಲಿಷ್ಠ ರಾಷ್ಟ್ರ ಕಟ್ಟಲು ಬಲಿಷ್ಠ ಸಂವಿಧಾನ ರಚನೆಯ ಅಗತ್ಯತೆಯನ್ನು ಅತ್ಯಂತ ನಿಖರ ಮತ್ತು ನಿರರ್ಗಳವಾಗಿ ಸಭೆಯ ಮುಂದಿಡುತ್ತಾ, ದೇಶದ ಸಾಮಾಜಿಕ ಚಳವಳಿಯ ಗುರಿಗಳು, ಉದಾತ್ತ ಹೋರಾಟಗಾರರ ಚಿಂತನೆಗಳು, ಸಂದೇಶಗಳು, ವಿದೇಶಿ ಸಂವಿಧಾನದ ವಿಚಾರಗಳು, ದೇಶದ ರಾಜ್ಯ, ಕೇಂದ್ರಗಳ ಸಮಗ್ರ ಆಡಳಿತ ವ್ಯವಸ್ಥೆ ರೂಪಿಸಲು, ಸಮತೆ-ಮಮತೆಯಿಂದ ದೇಶದಲ್ಲಿ ಜನ ಬಾಳುವಂತೆ ಅತ್ಯುತ್ತಮವಾದ ಸಂವಿಧಾನ ರಚನೆಯ ಹಿನ್ನೋಟ ಮತ್ತು ಮುನ್ನೋಟಗಳನ್ನು ಸಭೆಯಲ್ಲಿ ಮಂಡಿಸಿದರು. ಅಂದಿನ ಸದಸ್ಯರಾದ ಶ್ರೀ ಎನ್.ವಿ.ಗಾಡ್ಗೀಲ್ ಅವರ ಮಾತಿನ ಪ್ರಕಾರ ಡಾ. ಬಿ. ಆರ್. ಅಂಬೇಡ್ಕರ್‌ರ ಭಾಷಣ ಅತ್ಯಂತ ಉತ್ತಮ ರಾಜನೀತಿಜ್ಞನಂತೆ ಇತ್ತು ಎಂಬುದು ಉಲ್ಲೇಖಾರ್ಹ.

ಮುಂದೆ, 1947 ಜನವರಿ 24ರಂದು ಸಂಸತ್ತು ಸಂವಿಧಾನ ರಚನೆಗೆ ‘ಸಲಹಾ ಸಮಿತಿ’ ನೇಮಿಸಿತು. ಈ ಸಂದರ್ಭದಲ್ಲಿ ವಿವಿಧ ಉಪವಾಕ್ಯಗಳ ಚರ್ಚೆಯಲ್ಲಿ ಭಾಗವಹಿಸಿ ಡಾ. ಅಂಬೇಡ್ಕರ್ ಸಮರ್ಪಕ ಉತ್ತರ ನೀಡಿದರು. 1947 ಆಗಸ್ಟ್ 15ರಂದು ಭಾರತ ಸ್ವತಂತ್ರಗೊಂಡು ಪಂಡಿತ್ ಜವಾಹರ ಲಾಲ್ ನೆಹರೂ ಪ್ರಧಾನ ಮಂತ್ರಿ, ಡಾ. ಬಿ.ಆರ್. ಅಂಬೇಡ್ಕರ್ ಕಾನೂನು ಮಂತ್ರಿಯಾಗುತ್ತಾರೆ. ಅಗಸ್ಟ್ 29ರಂದು ಸಂಸತ್ತು ಡಾ. ಅಂಬೇಡ್ಕರ್‌ರನ್ನು ಸರ್ವಾನುಮತದಿಂದ ಸಂವಿಧಾನ ಕರಡು ರಚನಾ ಸಮಿತಿಯ ಮುಖ್ಯಸ್ಥರನ್ನಾಗಿ ಆಯ್ಕೆಮಾಡುತ್ತದೆ. 

ಡಾ. ಅಂಬೇಡ್ಕರ್ 1909ರ ಮಾರ್ಲೋಮಿಂಟೋ ಸುಧಾರಣೆಗಳು, 1919 ಮತ್ತು 1935ರ ಭಾರತ ಸರಕಾರದ ಅಧಿನಿಯಮಗಳನ್ನು ಸಂಪೂರ್ಣ ಅಧ್ಯಯನ ಮಾಡಿ ಭಾರತ ದೇಶಕ್ಕೆ ಸ್ವಾತಂತ್ರ್ಯದ ಜೊತೆ ಸಮಾನತೆ, ಸೋದರತೆ, ಪ್ರಜೆಗಳಲ್ಲಿ ದೇಶಾಭಿಮಾನ, ಆತ್ಮಸ್ಥೈರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಒಳಗೊಂಡ ‘ವಿವಿಧತೆಯಲ್ಲಿ ಏಕತೆ’ ಸಾರುವ ಪ್ರಜೆಗಳೇ ಪರಮಾಧಿಕಾರ ನೀಡುವ ‘ಪ್ರಜಾಪ್ರಭುತ್ವ’ ರಾಷ್ಟ್ರ ನಿರ್ಮಾಣದ, ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಸಂಬಂಧದಲ್ಲಿ ಬಲಿಷ್ಠ ದೇಶವನ್ನಾಗಿ ಭಾರತವನ್ನು ರೂಪಿಸಲು ಸಂವಿಧಾನದಲ್ಲಿ ಭದ್ರ ಬುನಾದಿಯನ್ನು ಹಾಕುತ್ತಾರೆ. ಹೀಗೆ ರೂಪಿತವಾದ ಸಂವಿಧಾನ ಸಮಿತಿಯಲ್ಲಿ 7 ಜನ ಸದಸ್ಯರ ಪೈಕಿ ಒಬ್ಬರು ಮೃತರಾದರೆ, ಇಬ್ಬರಿಗೆ ಆನಾರೋಗ್ಯ ಕಾಡುತ್ತದೆ. ಇನ್ನೊಬ್ಬರು ಒಂದು ಸಂವಿಧಾನ ಸಭೆಗೂ ಬರುವುದಿಲ್ಲ, ಮತ್ತೊಬ್ಬರು ವಿದೇಶದಲ್ಲಿ ಉಳಿದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸುವಲ್ಲಿ ಯಶಸ್ವಿಯಾಗುತ್ತಾರೆ.

ನಮ್ಮ ಸಂವಿಧಾನದ ಪ್ರಸ್ತಾವನೆ ಅತ್ಯಂತ ಬಲಿಷ್ಠ ಪೀಠಿಕೆಯಾಗಿದೆ. ದೇಶದ ಬೆನ್ನೆಲುಬಾದ ಮಹತ್ತರ ಸಂವಿಧಾನವು 2 ವರ್ಷ, 11 ತಿಂಗಳು, 17 ದಿನಗಳಲ್ಲಿ ರಚಿತವಾಗಿದೆ. 395 ಅನುಚ್ಛೇದಗಳು, 12 ಪರಿಚ್ಛೇದಗಳು, 22 ಭಾಗಗಳು, 6 ಪರಿಶಿಷ್ಟಗಳನ್ನು ಒಳಗೊಂಡ ಸಂವಿಧಾನದ ಈ ಮಹಾಗ್ರಂಥವನ್ನು ಡಾ. ಬಾಬಾ ಸಾಹೇಬ್ ಬಿ.ಆರ್. ಅಂಬೇಡ್ಕರ್‌ರವರು 08 ಫೆಬ್ರವರಿ 1949ರಂದು ಸಂವಿಧಾನ ರಚನಾ ಸಮಿತಿಗೆ ಸಲ್ಲಿಸುತ್ತಾರೆ. ಸಂವಿಧಾನ ಗ್ರಂಥದ ಬಗ್ಗೆ ದೇಶದ ಎಲ್ಲ ಚಿಂತಕರು, ಸಂವಿಧಾನ ವಿಮರ್ಶಕರು, ಪ್ರಜೆಗಳು, ಅಂಬೇಡ್ಕರ್‌ರನ್ನು ವಿರೋಧಿಸಿದವರು, ಎಲ್ಲರೂ ಅಗತ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡು ಸಭೆ-ಸಮಾರಂಭಗಳಲ್ಲಿ ಚರ್ಚೆ, ಸಂವಾದ ನಡೆಸಿ ಸಲಹೆ-ಸೂಚನೆ ಮೇರೆಗೆ ಸುಮಾರು 8 ತಿಂಗಳುಗಳ ಕಾಲ ವ್ಯಯವಾಗುತ್ತದೆ. ಆನಂತರ ಕೆಲವು ತಿದ್ದುಪಡಿಗಳು ಸಹ ಆಗುತ್ತದೆ. 11 ಅಧಿವೇಶನಗಳು ನಡೆಯುತ್ತವೆ. ಮುಂದೆ ಡಾ. ಬಿ.ಆರ್. ಅಂಬೇಡ್ಕರ್‌ರವರು 1949 ನವೆಂಬರ್-26 ರಂದು ಸಂವಿಧಾನ ಮಹಾಗ್ರಂಥವನ್ನು ಅಂಗೀಕರಿಸಲು ಸಂಸತ್ತಿಗೆ ಸಮರ್ಪಿಸುತ್ತಾರೆ. 

ವಿಶ್ವದಲ್ಲೇ ಅತ್ಯುತ್ತಮವಾದ ಸಂವಿಧಾನವನ್ನು ಭಾರತ ಹೊಂದಿದೆ. ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ, ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್, ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ, ಮಿ.ಪ್ರಾಂಕ್ ಅಂತೋಣಿ, ಕೃಷ್ಣಚಂದ್ರ ಶರ್ಮಾ, ಟಿ.ಟಿ ಕೃಷ್ಣಮಾಚಾರಿ, ಶ್ರೀ ಗಾಡ್ಗೀಲ್ ಮುಂತಾದ ಗಣ್ಯರು ಸಂವಿಧಾನವನ್ನು ಮುಕ್ತ ಕಂಠದಿಂದ ಪ್ರಶಂಸಿಸಿ ಡಾ. ಬಿ.ಆರ್. ಅಂಬೇಡ್ಕರ್ ದೇಶಕ್ಕೆ ಸಂವಿಧಾನವನ್ನು ಬರೆದುಕೊಟ್ಟ ಪರಿಶ್ರಮವನ್ನು ಸಂಸತ್ತಿನಲ್ಲಿ ಚರ್ಚಿಸಿ ಗೌರವಿಸಿದ್ದಾರೆ. ಹೀಗೆ, 1950-ಜನವರಿ 26ರಂದು ದೇಶದ ಸಮಗ್ರ ಗಣತಂತ್ರ ವ್ಯವಸ್ಥೆಗೆ ಸಂವಿಧಾನವನ್ನು ಅಂಗೀಕರಿಸಿದ ಮೇಲೆ ಭಾರತವು ಗಣರಾಜ್ಯವಾಯಿತು.

 ಇದೇ ಸಂದರ್ಭದಲ್ಲಿ ಸಂವಿಧಾನ ಕುರಿತು ಮಾತಾನಾಡಿದ ಡಾ. ಬಿ. ಆರ್. ಅಂಬೇಡ್ಕರ್ ‘‘ನಮ್ಮ ಸಂವಿಧಾನವು ಎಲ್ಲ ಕಾಲದಲ್ಲೂ ಆಡಳಿತ ನಡೆಸಲು ಬಲಿಷ್ಠವಾಗಿದೆ. ಒಂದು ವೇಳೆ ಪರಿಸ್ಥಿತಿ ಕೈ ಮೀರಿ ಹದಗೆಟ್ಟು ಹೋದಲ್ಲಿ, ಅದರರ್ಥ ನಮಗೆ ಕೆಟ್ಟ ಸಂವಿಧಾನ ಇದೆಯೆಂದಲ್ಲ, ಸಂವಿಧಾನ ಕೆಟ್ಟ ಆಡಳಿತ ನಡೆಸುವವರ ಕೈಯಲ್ಲಿದೆ ಎಂದರ್ಥ’’ ಎಂದು ಹೇಳಿದ್ದಾರೆ. ಇಂದಿನ ರಾಜಕಾರಣಿಗಳು ದೇಶದ ಸಮಗ್ರತೆ ಮರೆತು ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಇಂತಹವರು ಸಂವಿಧಾನದ ಮಹತ್ವ ಅರಿತುಕೊಳ್ಳಬೇಕು. ಆಗ ಮಾತ್ರ ಗಣತಂತ್ರ ವ್ಯವಸ್ಥೆಗೆ ಗೌರವ ನೀಡಿದಂತಾಗುತ್ತದೆ.

Similar News