×
Ad

ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ

Update: 2023-01-27 00:09 IST

ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ, ಮಂಗಳೂರಿನ ಸಿರಿ ತೋಟಗಾರಿಕೆ ಸಂಘ ಮತ್ತು ಇತರೆ ಅಭಿವೃದ್ಧಿ ಇಲಾಖೆಗಳ ಸಹಭಾಗಿತ್ವದಲ್ಲಿ ನಗರದ ಕದ್ರಿ ಪಾಕ್೯ನಲ್ಲಿ ಆಯೋಜಿಸಿರುವ ಫಲ ಪುಷ್ಪ ಪ್ರದರ್ಶನ 2023ಕ್ಕೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್  ಗುರುವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವಾಸ್ ಕಾಮತ್, ಮಂಗಳೂರು ಮೇಯರ್ ಜಯಾನಂದ ಅಂಚನ್, ಮೂಡಾ ಅಧ್ಯಕ್ಷ ರವಿಶಂಕರ್  ಮಿಜಾರು, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಆರ್. ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

ಲಿಂಬೆ, ಗುಲಾಬಿ ಹೂವಿನ ಬಿಂದಿಗೆ, ಜಿರಾಫೆ, ಮಿಡತೆ ವಿಶೇಷ ಆಕರ್ಷಣೆ: ಈ ಬಾರಿಯ ಪುಷ್ಪ ಪ್ರದರ್ಶನದಲ್ಲಿ  ಲಿಂಬೆ ಹುಳಿಯನ್ನು ಪೋಣಿಸಿ,ಗುಲಾಬಿ ಹೂವಿನ ಜೊತೆ ಸೆರಿಸಿದ ಪುಷ್ಪ ಬಿಂದಿಗೆ,ಸೇವಂತಿಗೆ ಗೊಂಡೆ ಹೂ ಗುಲಾಬಿ ಯಿಂದ ನಿರ್ಮಿಸಿದ ಜಿರಾಫೆ, ಮಿಡತೆ, ಪತಂಗ ವಿಶೇಷ ಆಕರ್ಷಣೆಯಾಗಿದೆ. ಹೀರೆಕಾಯಿ, ಪಡುವಲಕಾಯಿ, ಮುಳ್ಳು ಸೌತೆ, ಚೀನಿ ಕಾಯಿ, ಸೋರೆ ಕಾಯಿ, ಬಸಳೆ ಚಪ್ಪರ ವಿಶೇಷ ಆಕರ್ಷಣೆ ಯಾಗಿದೆ.

ತೋಟಗಾರಿಕೆ ಇಲಾಖಾ ವತಿಯಿಂದ ಬೆಳೆಸಲಾಗಿರುವ ವಿವಿಧ ಜಾತಿಯ ಆಕರ್ಷಣೀಯವಾದ ಸುಮಾರು 10,000 ಸೂರ್ಯಕಾಂತಿ (ಹಳದಿ, ಕೆಸರಿ) ಇತರೆ ಹೂವಿನ ಗಿಡಗಳ ಪ್ರದರ್ಶನ.

ವಿವಿಧ ರೀತಿಯ ಗಿಡಗಳನ್ನು ಕುಂಡಗಳಲ್ಲಿ ಪ್ರದರ್ಶನ, ತರಕಾರಿ ಕೆತ್ತನೆ, ವಿವಿಧ ಮಾದರಿಯ ಪುಷ್ಪ ಜೋಡಣೆ ಮಾಡಿ ಪ್ರದರ್ಶನ ಗಮನ ಸೆಳೆಯುತ್ತಿದೆ.

ಕ್ಷೇತ್ರ/ನರ್ಸರಿಗಳಲ್ಲಿ ಬೆಳೆಸಿರುವ ವಿವಿಧ ಜಾತಿಯ ಗಿಡಗಳನ್ನು ಮತ್ತು ತರಕಾರಿ ಸಸಿಗಳ ಮಾರಾಟಕ್ಕೆ ಮಳಿಗೆಗಳಿವೆ.

ತಾಲೂಕುಗಳಿಂದ ರೈತರು ಬೆಳೆಸಿರುವ ವಿವಿಧ ಜಾತಿಯ ಹಣ್ಣು ಮತ್ತು ತರಕಾರಿಗಳನ್ನು ಪ್ರದರ್ಶನ, ಕೃಷಿ ಕರು ಬೆಳೆದಿರುವ ಬೋನ್ಸಾಯಿ, ಅಂಥೋರಿಯಂ, ಆರ್ಕಿಡ್ ಗಿಡಗಳು ಇನ್ನಿತರೇ ಆಕರ್ಷಣೀಯವಾದ ಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 125 ಮಳಿಗೆಗಳನ್ನು ತೆರೆಯಲಾಗಿದ್ದು, ವಿವಿಧ ನರ್ಸರಿ, ಬೀಜ ಮಾರಾಟಗಾರರು, ವಿವಿಧ ಗೊಬ್ಬರಗಳ ಮಾರಾಟಗಾರರು, ಯಂತ್ರಗಳ ಮಾರಾಟಗಾರರು ಮಳಿಗೆಗಳು ಸಾವಯವ ಉತ್ಪನ್ನಗಳು, ತೋಟಗಾರಿಕೆ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಹಾಗೂ ಉದ್ದಿಮೆದಾರರಿಂದ ಸಾರ್ವಜನಿಕರು ಖರೀದಿಸಲು ಹಾಗೂ ವೀಕ್ಷಿಸಲು ಜ.29ರವರೆಗೆ ಅವಕಾಶವಿರುತ್ತದೆ.

ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ವಯಸ್ಕರಿಗೆ 20, ಮಕ್ಕಳಿಗೆ 10ರೂ.ಗಳನ್ನು ನಿಗದಿ ಪಡಿಸಲಾಗಿದೆ, ಎಲ್ಲಾ ಶಾಲಾ ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ ಮತ್ತು ಭಿನ್ನ ಸಾರ್ಮಥ್ಯದ ಮಕ್ಕಳಿಗೆ ಉಚಿತ ಪ್ರವೇಶವಿದೆ.

Similar News