7 ಪಕ್ಷ ಬದಲಿಸಿರುವ ಸಿದ್ದರಾಮಯ್ಯರಿಂದ ನನ್ನ ಮೇಲೆ ಪಕ್ಷಾಂತರದ ಆರೋಪ ವಿಪರ್ಯಾಸ: ಪ್ರಮೋದ್ ಮಧ್ವರಾಜ್

Update: 2023-01-27 09:26 GMT

ಉಡುಪಿ: ತನ್ನ ರಾಜಕೀಯ ಬದುಕಿನಲ್ಲಿ ಈವರೆಗೆ ಏಳು ಪಕ್ಷಗಳನ್ನು ಬದಲಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು ಪಕ್ಷಾಂತರಿ ಎಂದು ಕರೆದು ವಾಗ್ದಾಳಿ ನಡೆಸಿರುವುದು ವಿಪರ್ಯಾಸ ಎಂದು ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದು ಎಂಟು ತಿಂಗಳ ಹಿಂದೆ ಬಿಜೆಪಿ ಪಕ್ಷ ಸೇರಿರುವ ಪ್ರಮೋದ್ ಮಧ್ವರಾಜ್ ತಿರುಗೇಟು ನೀಡಿದ್ದಾರೆ.

ಅಮ್ಮುಂಜೆಯಲ್ಲಿರುವ ತಮ್ಮ ಮನೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪ್ರಮೋದ್ ಕಳೆದ ರವಿವಾರ ಉಡುಪಿಯಲ್ಲಿ ನಡೆದ ಕಾಂಗ್ರೆಸ್ ನ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತನ್ನ ಬಗ್ಗೆ ಮಾಡಿದ ತೀವ್ರ ವಾಗ್ದಾಳಿಗೆ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಈವರೆಗೆ ಏಳು ಬಾರಿ ಪಕ್ಷವನ್ನು ಬದಲಿಸಿರುವ ದೊಡ್ಡ ಪಕ್ಷಾಂತರಿ. ನಾನು ಹುಟ್ಟಿನಿಂದ ಕಾಂಗ್ರೆಸ್ ಆಗಿದ್ದು ಈಗ ಎಂಟು ತಿಂಗಳ ಹಿಂದೆ ಬಿಜೆಪಿ ಸೇರಿದ್ದೇನೆ ಎಂದರು.

ಸಿದ್ದರಾಮಯ್ಯ 1978ರಲ್ಲಿ ರೈತಸಂಘದಿಂದ ತಾಲೂಕು ಬೋರ್ಡ್ ಚುನಾವಣೆ ಎದುರಿಸಿದ್ದರು. 1983ರಲ್ಲಿ ಭಾರತೀಯ ಲೋಕದಳದಿಂದ ಚಾಮುಂಡೇಶ್ವರಿಯಲ್ಲಿ ಚುನಾವಣೆ ಎದುರಿಸಿದ್ದರು. ಸಮಾಜವಾದಿ ಪಕ್ಷ, ಜನತಾ ಪಕ್ಷ, ಜನತಾದಳ, ಜಾತ್ಯಾತೀತ ಜನತಾದಳದಿಂದ ಸ್ಪರ್ಧಿಸಿದ್ದರು. ಅಲ್ಲಿ ಅಹಿಂದ ಸಂಘಟನೆ ಕಟ್ಟಿಕೊಂಡ ಸಿದ್ದರಾಮಯ್ಯ ಅಶಿಸ್ತಿನ ವಾತಾವರಣ ಸೃಷ್ಟಿ ಮಾಡಿ ಪಕ್ಷದಿಂದ ವಜಾ ಗೊಂಡಿದ್ದರು ಎಂದರು.

ಹಾಗಿದ್ದರೆ ಬೇರೆ ಪಕ್ಷದಲ್ಲಿ ಅಧಿಕಾರ ವಹಿಸಿದವರು ಕಾಂಗ್ರೆಸ್ ಗೆ ಬರಬೇಡಿ ಎಂದು ಘೋಷಿಸಿ ಎಂದು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಗೆ ಪ್ರಮೋದ್ ಮಧ್ವರಾಜ್ ಸವಾಲು ಹಾಕಿದ ಅವರು, ದೇಶದಲ್ಲಿ ಪಕ್ಷಾಂತರ ಇತ್ತೀಚಿನ ವಿದ್ಯಾಮಾನವಲ್ಲ. ಸನ್ನಿವೇಶಕ್ಕೆ ಅನುಗುಣವಾಗಿ ದೇಶದಲ್ಲಿ ಪಕ್ಷಾಂತರ ಸಾಮಾನ್ಯ ಎಂದರು.

ನನ್ನನ್ನು ಅಸಾಮಿ, ಗಿರಾಗಿ ಅಂತ ಏಕವಚನದಲ್ಲಿ ಕರೆದಿದ್ದಾರೆ. ನಾನು ಸಿದ್ದರಾಮಯ್ಯ ಕ್ಯಾಬಿನೆಟ್ ನಲ್ಲಿ ಮಂತ್ರಿಯಾಗಿದ್ದೆ. ನನ್ನನ್ನೇ ಹೀಗೆ ಕರೆದವರು ಜನಸಾಮಾನ್ಯರ ಬಗ್ಗೆ  ಹೇಗೆ ಮಾತನಾಡಬಹುದು? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ವಿರುದ್ಧ ಕೆಟ್ಟ ಮಾತನಾಡಲು ಎಲ್ಲರಿಗೂ ಬರುತ್ತದೆ. ತಂದೆ, ತಾಯಿ ನನಗೆ ಸಂಸ್ಕಾರ ಸೌಜನ್ಯತೆ ಕಲಿಸಿದ್ದಾರೆ. ಆದ್ದರಿಂದ ಆ ಮಟ್ಟಕ್ಕಿಳಿಯಲಾರೆ ಎಂದರು.

ಉಡುಪಿ ಚಿಕ್ಕಮಗಳೂರು, ಉ.ಕನ್ನಡ ಮೈತ್ರಿ ಸೀಟ್ ಆಗಿತ್ತು. ಸಿದ್ದರಾಮಯ್ಯ ಮೈಸೂರು ಕ್ಷೇತ್ರವನ್ನು ಉಳಿಸಲು ಸ್ವಾರ್ಥ ಸಾಧನೆ ಮಾಡಿ ಉಡುಪಿಯನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟರು ಎಂದು ಆರೋಪಿಸಿದರು.

ಜೆಡಿಎಸ್ ನಲ್ಲಿ ಟಿಕೆಟ್ ಪಡೆಯೋ ಮೊದಲು ಸಿದ್ದರಾಮಯ್ಯ ದಿನೇಶ್ ಗುಂಡೂರಾವ್ ಪರವಾನಿಗೆ ಪಡೆದಿದ್ದೇನೆ. ಸಿದ್ದರಾಮಯ್ಯ ಅವರ ಸುಳ್ಳಿನ ಬಗ್ಗೆ ಆಕ್ಷೇಪ ಇದೆ ಖಂಡಿಸುತ್ತೇನೆ. ಜೆಡಿಎಸ್ ನಿಂದ ಹಣ ಪಡೆದಿದ್ದಾನೆ ಎಂದು ಆರೋಪಿಸಿದ್ದಾರೆ. ಜೆಡಿಎಸ್ ನಿಂದ ಬಂದ ಫಂಡನ್ನು ಉಡುಪಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಪಡೆದಿದೆ ಎಲ್ಲಾ ಹಂಚಿಕೆ ಮಾಡಿದ್ದೇನೆ. ನಾನು ನಯಾಪೈಸೆ ಇಟ್ಟುಕೊಂಡಿಲ್ಲ ಎಂದರು.

ಡಿಕೆ ಶಿವಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ ಪ್ರಮೋದ್ ಅವರ ವಿರುದ್ಧ  ಗಂಭೀರ ಆರೋಪ ಮಾಡಿದರು.

ನನ್ನ ತಂದೆ ಸ್ವಂತ ಹಣದಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದಾರೆ. ಸಂಪೂರ್ಣ ನೆಲಕ್ಕಚ್ಚಿದ ಕಾಂಗ್ರೆಸ್ ನ್ನು ನಾನು ಪುನರುಜ್ಜೀವನ ಮಾಡಿದ್ದೆ. ತಾಯಿ ಪ್ರಾಮಾಣಿಕ ಸೇವೆಯಿಂದ ಸಚಿವೆಯಾಗಿದ್ದಾರೆ ಎಂದರು.

ನಾನೇನೂ ಯಾರದೇ ಲಂಚದ ಹಣದಿಂದ ಇನ್ನೊಬ್ರ ಕಿಸೆಯಿಂದ ಕಿತ್ಕೊಂಡು ಪಕ್ಷ ಕಟ್ಟಿಲ್ಲ.ಸ್ವಜನ ಪಕ್ಷ, ಲಂಚ ಪಡೆಯಲು ಪಕ್ಷವನ್ನು ಉಪಯೋಗಿಸಿಲ್ಲ ಎಂದು ಖಾರವಾಗಿ ನುಡಿದರು.

ಎಸ್. ಎಂ ಕೃಷ್ಣ ಮೊನ್ನೆ ಪದ್ಮಭೂಷಣ ಪಡೆದಿದ್ದಾರೆ. ಅವರಿಗೆ ನನ್ನ ಅಭಿನಂದನೆ ಇದೆ.ಡಿಕೆ ಶಿವಕುಮಾರ್ ಕೃಷ್ಣ ರನ್ನು ಯಾಕೆ ಟೀಕಿಸಿಲ್ಲ?. ಕೃಷ್ಣ ಮೊಮ್ಮಗನಿಗೆ ಮಗಳನ್ನು ಕೊಟ್ಟಾಗ ಪಕ್ಷಾಂತರ ನೆನಪಾಗಿಲ್ವಾ? ಎಂದು ಪ್ರಶ್ನಿಸಿದರು.

2023ರ ಚುನಾವಣೆಯಲ್ಲಿ ಬಿಜೆಪಿ ಐದಕ್ಕೈದು ಸ್ಥಾನ ಗೆಲ್ಲುತ್ತದೆ. ಬಿಜೆಪಿಯನ್ನು  ಸೋಲಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಪ್ರಮೋದ್ ಜೊತೆ ಒಬ್ಬನೂ ಸೇರಿಲ್ಲ ಎಂದಿದ್ದಾರೆ. ಸಂಘರ್ಷದ ಸಂದರ್ಭದಲ್ಲಿ ಸೇರ್ಪಡೆ ಮಾಡಿಲ್ಲ. ಚುನಾವಣೆ ಹತ್ತಿರವಾಗುವವರೆಗೆ ಕಾಯಿರಿ. ಈಗಲೇ ಕಾರ್ಯಕರ್ತರಿಗೆ ಅಭಿನಂದನೆ ಕೊಡಬೇಡಿ ಎಂದು ಪ್ರಮೋದ್ ಮಧ್ವರಾಜ್  ನುಡಿದರು.

Similar News