ಬಡಗುಬೆಟ್ಟು: ಜಿಲ್ಲೆಯ ಮಾದರಿ ಮಲತ್ಯಾಜ್ಯ ನಿರ್ವಹಣಾ ಘಟಕಕ್ಕೆ ಚಾಲನೆ

Update: 2023-01-28 14:32 GMT

ಉಡುಪಿ: ತಾಲೂಕಿನ 80 ಬಡಗಬೆಟ್ಟು ಗ್ರಾಮಪಂಚಾಯತ್ ಉಳಿದ ಗ್ರಾಪಂಗಳಿಗಿಂತ ವಿಭಿನ್ನವಾಗಿ ಯೋಚಿಸಿ ಹೊಸತೊಂದು ರೀತಿಯ ಯೋಜನೆಯನ್ನು ಜಾರಿಗೆ ತಂದಿದೆ. ಅದೇ ಮಲ ತ್ಯಾಜ್ಯ ಸಂಸ್ಕರಣಾ ಘಟಕದ ಸ್ಥಾಪನೆ.

ಗ್ರಾಮದ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಇದೊಂದು ಪ್ರಮುಖವಾದ ಯೋಜನೆಯಾಗಿದ್ದು, ಹಳ್ಳಿಗಳಲ್ಲಿ ಶೌಚಾಲಯದ ಗುಂಡಿ ತುಂಬಿದಾಗ ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಬಹಳ ಮುಖ್ಯ ವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 80 ಬಡಗಬೆಟ್ಟು ಗ್ರಾಪಂನಲ್ಲಿ ಜಿಲ್ಲೆಯ ಪ್ರಥಮ ಮಲ ತ್ಯಾಜ್ಯ ಸಂಸ್ಕರಣಾ ಘಟಕವನ್ನು ನಿರ್ಮಿಸಲಾಗಿದೆ.

ಈ ಘಟಕದ ಸ್ಥಾಪನೆಗೆ ಒಟ್ಟು 63.36 ಲಕ್ಷ ರೂ. ಖರ್ಚಾಗಿದೆ. ಹಾಗೂ ಘಟಕದ ಸಾಮರ್ಥ್ಯ 3ಕೆಎಲ್‌ಡಿ.(ಪ್ರತೀ ದಿನಕ್ಕೆ 3 ಸಾವಿರ ಲೀಟರ್ ಮಲತ್ಯಾಜ್ಯವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿರುವ ಘಟಕ).

ಘಟಕದ ಉದ್ದೇಶ: ಮಲತ್ಯಾಜ್ಯವನ್ನು ಮನೆ, ಅಪಾರ್ಟ್‌ಮೆಂಟ್ ವ್ಯಾಣಿಜ್ಯ ಉದ್ದಿಮೆಗಳಿಂದ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಹಾಗೂ ಹೀಗೆ ಉತ್ಪತ್ತಿಯಾದ ಜೈವಿಕ ಗೊಬ್ಬರವನ್ನು ಸ್ಥಳೀಯ ರೈತರಿಗೆ ರಿಯಾಯಿತಿ ದರದಲ್ಲಿ ನೀಡುವುದು.

ಘಟಕದ ವ್ಯಾಪ್ತಿಗೆ ಒಳಗೊಳ್ಳುವ ಗ್ರಾಮಪಂಚಾಯತ್‌ಗಳು: 80 ಬಡಗಬೆಟ್ಟು, ಅಲೆವೂರು, ಆತ್ರಾಡಿ, ಕೊಡಿಬೆಟ್ಟು, ಮಣಿಪುರ, ಕೆಮ್ಮಣ್ಣು, ಕಲ್ಯಾಣಪುರ, ಅಂಬಲಪಾಡಿ, ಕಡೆಕಾರು, ಉದ್ಯಾವರ, ಕೋಟೆ, ಬೆಳ್ಳೆ, ಕಟಪಾಡಿ.

ಈ ಗ್ರಾಮಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಬರುವ ಮನೆಗಳು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ. ಇದಲ್ಲದೆ ಬೇರೆ ಗ್ರಾಮ ಪಂಚಾಯತ್ ನವರು ಸಹ ಇದರ ಉಪಯೋಗ ಪಡೆಯಬಹುದು. ಪ್ರಸ್ತುತ  ಘಟಕಕ್ಕೆ ತಾಲೂಕುಪಂಚಾಯತ್‌ನ ಅನುದಾನ ಕ್ರೋಡೀಕರಿಸಿ 23 ಲಕ್ಷದಲ್ಲಿ ಒಂದು ಮಲ ತ್ಯಾಜ್ಯ ಸಂಗ್ರಹಿಸಿ ಸಾಗಾಟ ಮಾಡುವ ವಾಹನವನ್ನು ಒದಗಿಸಲಾಗಿದೆ.

ಇದಕ್ಕೆ ನಗರಸಭೆ ನಿಗದಿಗೊಳಿಸಿದ ದರ ಅಂದರೆ ಪ್ರತೀ ಟ್ರಿಪ್‌ಗೆ 3000 ರೂ. ಹಾಗೂ ಕಿ.ಮೀ ಗೆ ರೂ.35 ನಿಗದಿಗೊಳಿಸಲಾಗಿದೆ. ಇದರ ಇನ್ನೊಂದು ವಿಶೇಷತೆಯೆಂದರೆ ಸಂಜೀವಿನಿ ಸಂಘದ ಮೂಲಕ ನಿರ್ವಹಣೆ ಮಾಡುವು ದಾಗಿದ್ದು, ಜನವರಿ 1ರಿಂದ ಇದು ಕಾರ್ಯಾರಂಭ ಮಾಡಿದೆ.  ಇಲ್ಲಿಯವರೆಗೆ 30 ಟ್ರಿಪ್‌ನಷ್ಟು ಮಲ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಲಾಗಿದೆ.

ಇದಕ್ಕಾಗಿ ನಿಗದಿಯಾದ ಮೊತ್ತವನ್ನು ಗ್ರಾಮಪಂಚಾಯತ್‌ಗೆ ಮುಂಚಿತವಾಗಿ ಪಾವತಿಸಿ ಬುಕ್ ಮಾಡಬಹುದು. ಹೆಚ್ಚಿನ ಮಾಹಿತಿ ಹಾಗೂ ಬುಕ್ಕಿಂಗ್ ಗಾಗಿ ದೂರವಾಣಿ ಸಂಖ್ಯೆ: 0820-2010020, 9880044435ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Similar News