ಲಾಲ್‍ಬಾಗ್ ಫಲಪುಷ್ಪ ಪ್ರದರ್ಶನ: ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ

Update: 2023-01-28 17:25 GMT

ಬೆಂಗಳೂರು, ಜ.28: ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ 10 ದಿನಗಳ ಬೆಂಗಳೂರು ದರ್ಶನದ ಫಲಪುಷ್ಪ ಪ್ರದರ್ಶನದಲ್ಲಿ ಗಾಜಿನ ಮನೆಯ ಪ್ರದರ್ಶಿಕೆಗಳು, ತೋಟಗಳ ಸ್ಪರ್ಧೆ, ಇಕೆಬಾನ, ಪುಷ್ಪ ಭಾರತಿ, ಪುಷ್ಪರಂಗೋಲಿ ತರಕಾರಿ ಕೆತ್ತನೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಶಾಸಕ ಉದಯ್ ಬಿ.ಗರುಡಾಚಾರ್ ಬಹುಮಾನ ವಿತರಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ರಂಗುರಂಗಿನ ಹೂಗಳ ಜೊತೆಗೆ ಬೆಂಗಳೂರು ನಗರದ 1,500 ವರ್ಷಗಳ ಭವ್ಯ ಇತಿಹಾಸದ ಅವಲೋಕನ ಮತ್ತು ಸ್ಮರಣೆ ಮೂಲಕ ಗತವೈಭವವನ್ನು ಜನತೆಗೆ ಪರಿಚಯಿಸುವ ಕೆಲಸವನ್ನು ತೋಟಗಾರಿಕೆ ಇಲಾಖೆ ಮಾಡಿದ್ದು, ಅವರ ಶ್ರಮ ಸಾರ್ಥಕ್ಯಗೊಂಡಿದೆ ಎಂದರು.

ಇಕೆಬಾನ ಮತ್ತು ಪೂರಕ ಕಲೆಗಳು ಸೇರಿ ಒಟ್ಟು 320 ಬಹುಮಾನ, ಗಾರ್ಡನ್ ಸ್ಪರ್ಧೆಗೆ 250 ಬಹುಮಾನ ನೀಡಲಾಯಿತು. ಜೊತೆಗೆ ಐತಿಹಾಸಿಕ ಸ್ಮಾರಕಗಳ ಚಿತ್ರಕಲೆ ಸ್ಪರ್ಧೆಯಲ್ಲಿ 16 ವಿಧ್ಯಾರ್ಥಿಗಳಿಗೆ ವಿಶೇಷ ಬಹುಮಾನ, ಹಾಗೂ ಶಾಲಾಮಕ್ಕಳಿಗೆ ಜರುಗಿದ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಮಿಥಿಕ್ ಸೊಸೈಟಿ ಗೌರವ ಕಾರ್ಯದರ್ಶಿ ವಿ.ನಾಗರಾಜ್, ತೋಟಗಾರಿಕೆ ಇಲಾಖೆ ನಿರ್ದೇಶಕ ಕೆ.ನಾಗೇಂದ್ರ ಪ್ರಸಾದ್, ತೋಟಗಾರಿಕೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್, ತೋಟಗಾರಿಕೆ ಉಪ ಕಾರ್ಯದರ್ಶಿ ಜಿ.ಕುಸುಮ ಉಪಸ್ಥಿತರಿದ್ದರು. 

Similar News