ಸಾಮಾಜಿಕ ಮಾಧ್ಯಮದಲ್ಲಿ ವಿಷಯ ಪರಿಷ್ಕರಣೆಗೆ ಕೇಂದ್ರದಿಂದ 3 ಸಮಿತಿಗಳ ರಚನೆ

Update: 2023-01-28 17:30 GMT

ಹೊಸದಿಲ್ಲಿ, ಜ. 28: ಸಾಮಾಜಿಕ ಮಾಧ್ಯಮಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿ ಮೂರು ದೂರು ಮೇಲ್ಮನವಿ ಸಮಿತಿಗಳನ್ನು ರಚಿಸಿರುವುದಾಗಿ ಕೇಂದ್ರ ಸರಕಾರ(Central Govt) ಶುಕ್ರವಾರ ತಿಳಿಸಿದೆ. ವಿಷಯ ಪರಿಷ್ಕರಣೆಯ ಬಗ್ಗೆ ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಈ ಸಮಿತಿಗಳು ನಿಯಂತ್ರಣ ಹೊಂದಲಿವೆ.

ವಿಷಯವೊಂದನ್ನು ತೆಗೆದುಹಾಕುವುದೇ ಅಥವಾ ಪರಿಷ್ಕರಿಸುವುದೇ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮ ಕಂಪೆನಿಯೊಂದು ತೆಗೆದುಕೊಳ್ಳುವ ನಿರ್ಧಾರದಿಂದ ಬಳಕೆದಾರರಿಗೆ ತೃಪ್ತಿಯಾಗದಿದ್ದರೆ, ಅವರು ಇನ್ನು ಸರಕಾರ ನೇಮಿಸಿರುವ ಸಮಿತಿಗಳಿಗೆ ಮೇಲ್ಮನವಿ ಸಲ್ಲಿಸಬಹುದು.ಸಮಿತಿಗಳನ್ನು ರಚಿಸುವ ನಿರ್ಧಾರವನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅಕ್ಟೋಬರ್ ನಲ್ಲೇ ತೆಗೆದುಕೊಂಡಿತ್ತು.

ಇಂಥ ಮೂರು ಸಮಿತಿಗಳನ್ನು ಶುಕ್ರವಾರ ಸಚಿವಾಲಯ ಪ್ರಕಟಿಸಿದೆ. ಪ್ರತಿಯೊಂದು ಸಮಿತಿಯು ಓರ್ವ ಅಧ್ಯಕ್ಷ ಮತ್ತು ಇಬ್ಬರು ಪೂರ್ಣಕಾಲಿಕ ಸದಸ್ಯರನ್ನು ಹೊಂದಿರುತ್ತದೆ. ಅಧ್ಯಕ್ಷರು ಸರಕಾರಿ ಅಧಿಕಾರಿಗಳೇ ಆಗಿರುತ್ತಾರೆ ಹಾಗೂ ಸದಸ್ಯರು ನಿವೃತ್ತ ಸರಕಾರಿ ಅಧಿಕಾರಿಗಳು ಮತ್ತು ವಿವಿಧ ಉದ್ದಿಮೆಗಳ ಹಿರಿಯ ಅಧಿಕಾರಿಗಳಾಗಿರುತ್ತಾರೆ.

ಪ್ರತಿ ಸಮಿತಿಯ ಇಬ್ಬರು ಪೂರ್ಣಾವಧಿ ಸದಸ್ಯರನ್ನು ಮೂರು ವರ್ಷಗಳ ಅವಧಿಗೆ ನೇಮಿಸಲಾಗಿದೆ ಎಂದು ಸಚಿವಾಲಯದ ಅಧಿಸೂಚನೆ ತಿಳಿಸಿದೆ. 

Similar News