ಗಾಂಜಾ ಪ್ರಕರಣ: ವೈದ್ಯಕೀಯ ವಿದ್ಯಾರ್ಥಿಗಳ ಅಮಾನತು ಆದೇಶ ಹಿಂಪಡೆಯಲು FAMCI ಆಗ್ರಹ

Update: 2023-01-29 10:35 GMT

ಮಂಗಳೂರು, ಜ.29: ಇತ್ತೀಚೆಗೆ ಬೆಳಕಿಗೆ ಬಂದಿರುವ ವೈದ್ಯರು ಮತ್ತು ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳ ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣದಲ್ಲಿ ಆರೋಪಿಗಳಾಗಿರುವ ವಿದ್ಯಾರ್ಥಿಗಳನ್ನು ಅಮಾನತುಗೊಳಿಸುವ ಬಗ್ಗೆ ಸಂಬಂಧಪಟ್ಟ ವೈದ್ಯಕೀಯ ಕಾಲೇಜುಗಳು ಕೈಗೊಂಡಿರುವ ನಿರ್ಧಾರವನ್ನು ಹಿಂಪಡೆಯುವಂತೆ ಫೆಡರೇಶನ್ ಆಫ್ ಅಸೋಸಿಯೇಷನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ ಇಂಡಿಯಾ (Federation of Association of Medical Consultants of India) (FAMCI) ಸಂಬಂಧಪಟ್ಟ ವೈದ್ಯಕೀಯ ಸಂಸ್ಥೆಗಳನ್ನು ಒತ್ತಾಯಿಸಿದೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ FAMCI ಅಧ್ಯಕ್ಷ ಡಾ.ಲಲಿತ್ ಕಪೂರ್ ಮತ್ತು ಕಾರ್ಯದರ್ಶಿ ಡಾ.ಕಿಶೋರ್ ಅಡ್ಯಂತಾಯ, ಆರೋಗ್ಯ ವ್ಯವಸ್ಥೆ ಮತ್ತು ಆ ವ್ಯವಸ್ಥೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರನ್ನು ಬೆಂಬಲಿಸುವಲ್ಲಿ ಸಮಾಜವು ದೊಡ್ಡ ಪಾಲನ್ನು ಹೊಂದಿದೆ. ಪ್ರಕರಣದ ಆರೋಪಿಗಳು ಯುವ ಸಮೂಹ ಮತ್ತು ಭವಿಷ್ಯದಲ್ಲಿ ದೇಶ ಸೇವೆ ಸಲ್ಲಿಸುವ ವೈದ್ಯರಾಗಿದ್ದು, ಅವರ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಅವರನ್ನು ಸಮಾಲೋಚನೆ ಮತ್ತು ಪುನರ್ವಸತಿ ಕೇಂದ್ರಗಳಿಗೆ ಸೇರಿಸುವಂತೆ ಆಗ್ರಹಿಸಿದ್ದಾರೆ.

FAMCI ದೇಶಾದ್ಯಂತ ಸುಮಾರು 15,000 ಕನ್ಸಲ್ಟೆಂಟ್ ಮತ್ತು ಸೂಪರ್ ಸ್ಪೆಷಲಿಸ್ಟ್ ವೈದ್ಯರ ಸಂಘಟನೆಯಾಗಿದೆ. ಮಾದಕ ವಸ್ತುಗಳ ಮಾರಾಟ, ವಿತರಣೆ ಮತ್ತು ಕಳ್ಳ ಸಾಗಣೆ ಆರೋಪದ ಮೇಲೆ ಮಹಿಳಾ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 2 ಡಜನ್ ವಿದ್ಯಾರ್ಥಿಗಳು ಮತ್ತು ವೈದ್ಯರ ಇತ್ತೀಚಿನ ಬಂಧನವನ್ನು ನಾವು ಉಲ್ಲೇಖಿರುವ FAMCI ಸಾಧ್ಯವಿರುವ ಎಲ್ಲ ವಿಧಾನಗಳ ಮೂಲಕ ಮಾದಕ ವಸ್ತು ವ್ಯವಹಾರ ಮತ್ತು ಕಳ್ಳ ಸಾಗಣೆಯನ್ನು ಕಟ್ಟುನಿಟ್ಟಾಗಿ ನಿಗ್ರಹಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವೈದ್ಯರು ಮತ್ತು ವಿದ್ಯಾರ್ಥಿಗಳು ಮಾದಕ ವಸ್ತ್ತುಗಳನ್ನು ಸೇವಿಸಿರುವ ಆರೋಪ ಹೊತ್ತಿದ್ದಾರೆ. ಪೂರೈಕೆ, ಮಾರಾಟ ಮತ್ತು ಕಳ್ಳಸಾಗಣೆಯಲ್ಲಿ ತೊಡಗಿರುವ ವಿಚಾರಕ್ಕೆ ಸಂಬಂಧಿಸಿ ಆದ್ಯತೆಯ ಆಧಾರದ ಮೇಲೆ ಕಾರ್ಯಾಚರಣೆ ಮುಂದುವರಿಸಬೇಕು. 1985ರ ನಾರ್ಕೋಟಿಕ್ ಡ್ರಗ್ಸ್ ಆ್ಯಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ ಆ್ಯಕ್ಟ್ (ಎನ್‌ಡಿಪಿಎಸ್ )ನ ಸೆಕ್ಷನ್ 64 ಎ ಪ್ರಕಾರ ಮಾದಕ ವಸ್ತುಗಳ ವ್ಯಸನಿಗಳು ಚಿಕಿತ್ಸೆಗೆಗಾಗಿ ಪುನರ್ವಸತಿ ಕೇಂದ್ರಗಳಿಗೆ ಹೋಗಲು ಸ್ವಯಂಪ್ರೇರಿತರಾಗಿ ಸಿದ್ಧರಿದ್ದರೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಬೇಕಾದ ಅಗತ್ಯವಿಲ್ಲ. ಬಂಧನದಿಂದ ಈ ಕಾಯ್ದೆ ವಿನಾಯತಿ ನೀಡುತ್ತದೆ ಎಂದು FAMCI ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

Similar News