ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ

ಕಂಬಳ ಜಗತ್ತಿಗೆ ಆಕರ್ಷಣೆಯ ಕ್ರೀಡೆಯಾಗುತ್ತಿದೆ: ವಿನಯ ಕುಮಾರ್ ಸೊರಕೆ

Update: 2023-01-29 17:03 GMT

ಪುತ್ತೂರು: ಕಂಬಳವು ಒಂದು ಜನಪದ ವೀರಕ್ರೀಡೆಯಾಗಿದ್ದು, ಕಠಿಣ ಪ್ರಾಣಿಗೆ ಬುದ್ದಿಕಲಿಸುವ ಹಾಗೂ ಮಾಲಕ ಸ್ವಾಭಿಮಾನ ಉಳಿಸುವ ವಿಶೇಷ ಕ್ರೀಡೆಯಾಗಿದೆ. ಪ್ರಸ್ತುತ ಕಂಬಳವು ಜಗತ್ತಿಗೆ ಆಕರ್ಷಣೆಯಾಗುವ ಕ್ರೀಡೆಯಾಗಿ ಹೊರ ಹೊಮ್ಮಿದೆ ಎಂದು ಮಾಜಿ ನಗರಾಭಿವೃದ್ಧಿ ಸಚಿವರಾದ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಗೌರವ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಹೇಳಿದರು. 

ಅವರು ಶನಿವಾರ ರಾತ್ರಿ ಪುತ್ತೂರು ಕಂಬಳ ಸಮಿತಿಯ ವತಿಯಿಂದ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಬಾಗದಲ್ಲಿರುವ ದೇವರಮಾರು ಗದ್ದೆಯಲ್ಲಿ ನಡೆದ 30ನೇ ವರ್ಷದ ಹೊನಲು ಬೆಳಕಿನ `ಕೋಟಿ ಚೆನ್ನಯ' ಹೋಡುಕರೆ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.  

ಕಂಬಳಕ್ಕೆ ಆಪತ್ತು ಒದಗುವ ಪರಿಸ್ಥಿತಿಯ ನಡುವೆಯೂ ಮಾಲಕರು ತಮ್ಮ ಕೋಣಗಳನ್ನು ಪ್ರೀತಿಯಿಂದ ಸಾಕುತ್ತಿದ್ದಾರೆ. ಜಾತಿ, ಧರ್ಮ, ಭಾಷೆಗಳ ಬೇಧವಿಲ್ಲದೆ ಎಲ್ಲರೂ ಒಂದೇ ಕುಟುಂಬವಾಗಿ ಈ ವೀರ ಕ್ರೀಡೆಯಲ್ಲಿ ಭಾಗವಹಿಸುತ್ತಾರೆ. ಕೃಷಿಗೆ ಸಂಬಂಧಿಸಿದ ಈ ಕ್ರೀಡೆಗೆ ಸರ್ಕಾರದ ಹೆಚ್ಚಿನ ಸಹಕಾರ ನೀಡಬೇಕಾಗಿದೆ. ರೈತರ ಸ್ವಾಭಿಮಾನದ ಈ ಕ್ರೀಡೆಯು ನಿರಂತರವಾಗಿ ಮುಂದುವರಿಯಬೇಕಾಗಿದೆ ಎಂದರು.  

ಕಂಬಳ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ, ಐಕಳಬಾವ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ರಾಜ್ಯ ವಿಪಕ್ಷ ಉಪ ನಾಯಕ ಯು.ಟಿ. ಖಾದರ್, ಮಾಜಿ ಸಚಿವ ಬಿ. ರಮಾನಾಥ ರೈ, ಸಮಾಜ ಕಲ್ಯಾಣ ಇಲಾಖೆಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಹಿರಿಯ ದೈವರಾಧಕ ತಮ್ಮಣ್ಣ ಶೆಟ್ಟಿ, ಕಾನತ್ತೂರು ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಮಾಧವ ನಾಯರ್  ಮಾತನಾಡಿ ಶುಭ ಹಾರೈಸಿದರು. 

ಚಲನಚಿತ್ರ ನಟರಾದ ಅನೂಪ್ ಭಂಡಾರಿ, ಸಂಗೀತ ಶೃಂಗೇರಿ, ಸಾನಿಯ ಅಯ್ಯರ್ ಉಗ್ರಂ ಮಂಜು, ದೀಪಕ್ ರೈ ಪಾಣಾಜೆ, ಪ್ರಕಾಶ್ ತುಮಿನಾಡು, ವಜ್ರದೀರ್ ಜೈನ್, ಸುರೇಶ್, ದಾಯ್ಜಿ ವಲ್ಡ್‍ನ ವಾಲ್ಟರ್ ನಂದಳಿಕೆ ವಿಶೇಷ ಆಕರ್ಷಣೆಯಾಗಿ ಭಾಗವಹಿಸಿದ್ದರು. 

ಸ್ಮರಣ ಸಂಚಿಕೆ ಬಿಡುಗಡೆ:
ಈ ಸಂದರ್ಭದಲ್ಲಿ ಕೋಟಿ ಚೆನ್ನಯ ಕಂಬಳದ 30ನೇ ವರ್ಷದ ನೆನಪಿನಲ್ಲಿ ತಯಾರಿಸಲಾದ ಸ್ಮರಣ ಸಂಚಿಕೆಯನ್ನು ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಬಿಡುಗಡೆಗೊಳಿಸಿದರು. ಕಂಬಳ ಕೂಟಕ್ಕೆ ಮೂರನೇ ತೀರ್ಪುಗಾರರಾಗಿ ಸೆನ್ಸಾರ್ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಿದ ಡಾ. ರಾಜೇಂದ್ರ ಕುಮಾರ್ ಅವರನ್ನು ವೇದಿಕೆಯಲ್ಲಿ ಕಂಬಳ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 

ವೇದಿಕೆಯ ಮುಂಬಾಗದಲ್ಲಿ ಕೋಣದ ಮಾಲಕರನ್ನು ಮತ್ತು ಕೋಣ ಓಡಿಸುವವರನ್ನು ಸನ್ಮಾನಿಸಲಾಯಿತು. 

ಕೋಣ, ಮಾಲಕರು, ಸಂಘಟಕರು, ಓಡಿಸುವವರಿಗೆ ಸನ್ಮಾನ:
ಕಂಬಳದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವೇದಕೆಯ ಮುಂಬಾಗದಲ್ಲಿ ಮಿಂಚಿನ ಓಟದ ಖ್ಯಾತಿಯ ಕೊಳಚೂರು ಕೊಂಡೊಟ್ಟುವಿನ `ಚೆನ್ನ' ಕೋಣವನ್ನು ಹಾಗೂ ಚೆನ್ನ ಕೋಣದ ಯಜಮಾನ ಕೊಳಚೂರು ಕೊಂಡೊಟ್ಟು ಸುಕುಮಾರ ಶೆಟ್ಟಿಯವರ ಪುತ್ರ ಸೃಜಿತ್ ಅವರನ್ನು ಸನ್ಮಾನಿಸಲಾಯಿತು. ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿ ಕಿಲ್ಲೆ ಮೈದಾನದ ಸಾರ್ವಜನಿಕ ಮಹಾಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿಯಾಗಿರುವ ಕೋಟಿ ಚೆನ್ನಯ ಕಂಬಳ ಸಮಿತಿ ಸಂಚಾಲಕ ಎನ್.ಸುಧಾಕರ್ ಶೆಟ್ಟಿ, ಕಂಬಳ ಕ್ಷೇತ್ರದಲ್ಲಿ ಕಂಬಳದ ಕೋಣವನ್ನು ಪಲಗಿಸುವಲ್ಲಿ ಮತ್ತು ಓಟದಲ್ಲಿ ಸಾಧನೆ ಮಾಡಿದ ಅಪ್ಪು ಯಾನೆ ವಲೇರಿಯನ್ ಡೇಸಾ ಅಲ್ಲಿಪಾದೆ, ಮೋಟಾರ್ ಬೈಕ್, ವಾಹನ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಆಕಾಶ್ ಐತಾಳ್, ಕಂಬಳದ ಓಟದಲ್ಲಿ ಸಾಧನೆಗೈದ ಸತೀಶ್ ದೇವಾಡಿಗ ಅಳದಂಗಡಿ, ಬ್ಯಾಂಕ್ ಆಫ್ ಬರೋಡದ ಜನರಲ್ ಮ್ಯಾನೇಜರ್ ರವೀಂದ್ರ ರೈ ಅವರನ್ನು ಸನ್ಮಾನಿಸಲಾಯಿತು. ಇದರ ಜೊತೆ ವೇದಿಕೆ ಕೆಳಗಡೆ ಕಂಬಳ ಓಟಗಾರ ಕ್ರೀಡಾರತ್ನ ಪ್ರಶಸ್ತಿ ಪುರಸ್ಕøತ ಶ್ರೀಧರ್ ಮಾರೋಡಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. 

ಅಖಿಲ ಭಾರತ ಇಂಟಕ್ ಕಾರ್ಯದರ್ಶಿ ರಾಕೇಶ್ ಮಲ್ಲಿ, ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಉಪ್ಪಿನಂಗಡಿ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜರಾಮ್, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹ್ಮದ್‍ಆಲಿ, ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಉದ್ಯಮಿ ಉಮೇಶ್ ನಾಡಾಜೆ, ಇಂಟರ್ ನ್ಯಾಷನಲ್ ಆಟ್ರ್ಸ್ ಆ್ಯಂಡ್ ಸ್ಪೋಟ್ರ್ಸ್ ಕ್ಲಬ್ ಸೌದಿ ಅರೇಬಿಯಾದ  ಜಿ. ಮಹಮ್ಮದ್ ಕುಕ್ಕುವಳ್ಳಿ, ಮೆಸ್ಕಾಂ ಎಕ್ಸಿಗ್ಯೂಟಿವ್ ಇಂಜಿನಿಯರ್ ರಾಮಚಂದ್ರ, ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು. 

ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಂಬಳ ಸಮಿತಿ ತೀರ್ಪುಗಾರ ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

Similar News