ಉಳ್ಳಾಲ| ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು: ಓರ್ವ ಮೃತ್ಯು, ಮೂವರು ಗಂಭೀರ

Update: 2023-01-30 06:05 GMT

ಉಳ್ಳಾಲ: ಕಾರ್ ವೊಂದು ಡಿವೈಡರ್ ಗೆ ಏರಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೋರ್ವ ಗಂಭೀರ ಗಾಯಗೊಂಡು ವಿದ್ಯಾರ್ಥಿನಿಯರಿಬ್ಬರು ಸಣ್ಣಪುಟ್ಟ ಗಾಯಗೊಂಡ ಘಟನೆ ರಾ.ಹೆ. 66 ರ ಕೊಲ್ಯ-ಅಡ್ಕ ಮಧ್ಯೆ ರವಿವಾರ ತಡರಾತ್ರಿ ನಡೆದಿರುವುದಾಗಿ ವರದಿಯಾಗಿದೆ.

ಕಾಸರಗೋಡು ಜಿಲ್ಲೆ ಕುಂಜತ್ತೂರು  ನಿವಾಸಿ ಅಬ್ದುಲ್ ರಿಫಾಯಿ (24)  ಮೃತಪಟ್ಟವರು. ರಿಫಾಯಿಯ ಚಿಕ್ಕಪ್ಪನ ಮಗ, ಉಪ್ಪಳ ಹಿದಾಯತ್ ನಗರ ನಿವಾಸಿ ಬಶರ್  ಅಹಮ್ಮದ್(22) ಚಿಂತಾ ಜನಕ ಸ್ಥಿತಿಯಲ್ಲಿ ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ತಿಳಿದುಬಂದಿದೆ.

ಕೇರಳ ಕಣ್ಣೂರು ನಿವಾಸಿ ಫಾತಿಮಾ ಹಾಗೂ ರೇವತಿ ಎಂಬವರಿಗೆ ಗಾಯಗಳಾಗಿದ್ದು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರಿದ್ದ ಕಾರು ಮಂಗಳೂರಿಂದ ಕಾಸರಗೋಡು ಕಡೆ ತೆರಳುತ್ತಿದ್ದ ವೇಳೆ ಕೊಲ್ಯ- ಅಡ್ಕ ಬಳಿ  ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.

ಮೃತ ಅಬ್ದುಲ್ ರಿಫಾಯಿ ಅವಿವಾಹಿತರಾಗಿದ್ದು, ಗಲ್ಫ್ ನಲ್ಲಿ ಉದ್ಯೋಗಿಯಾಗಿದ್ದು, ಶನಿವಾರದಂದು ಮನೆಗೆ ಮರಳಿದ್ದರು. ಬಶರ್ ಅಹಮ್ಮದ್, ಫಾತಿಮಾ ಮತ್ತು ರೇವತಿ ಮೂವರು ನಗರದ ಕಾಲೇಜೊಂದರಲ್ಲಿ ಬಿಸಿಎ ವಿದ್ಯಾರ್ಥಿಗಳಾಗಿದ್ದರು ಎಂದು ತಿಳಿದು ಬಂದಿದೆ. ಅಪಘಾತ ನಡೆದ ಸ್ಥಳಕ್ಕೆ ಸಂಚಾರಿ ಪೊಲೀಸರು ತಡವಾಗಿ ಆಗಮಿಸಿದ್ದರು ಎಂದು ಆರೋಪಿಸಿ ಸಾರ್ವಜನಿಕರು ಪೊಲೀಸರನ್ನು ಕೆಲ ಕಾಲ ತರಾಟೆಗೆ ತೆಗೆದುಕೊಂಡಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Similar News