ಅಭ್ಯರ್ಥಿಗಳ ಕ್ರಿಮಿನಲ್ ದಾಖಲೆ ಪ್ರಕಟಿಸದ ಬಿಜೆಪಿಗೆ ದಂಡ: ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನೋಟಿಸ್

Update: 2023-01-29 17:55 GMT

ಹೊಸದಿಲ್ಲಿ, ಜ. 29: 2020ರ ಬಿಹಾರ್(Bihar) ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಅಪರಾಧಗಳ ಪೂರ್ವಾಪರಗಳನ್ನು ಪ್ರಕಟಿಸದೇ ಇರುವುದಕ್ಕಾಗಿ ಬಿಜೆಪಿಗೆ ದಂಡ ವಿಧಿಸಿ ನೀಡಿದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್(Supreme Court) ಶುಕ್ರವಾರ ಚುನಾವಣಾ ಆಯೋಗಕ್ಕೆ ನೋಟಿಸು ನೀಡಿದೆ.

ಅಭ್ಯರ್ಥಿಗಳ ಕ್ರಿಮಿನಲ್ ಪೂರ್ವಾಪರಗಳನ್ನು ಪ್ರಕಟಿಸುವ ನಿರ್ದೇಶನಗಳನ್ನು ಅನುಸರಿಸದೇ ಇರುವುದಕ್ಕಾಗಿ ಚುನಾವಣಾ ಆಯೋಗ ಪಕ್ಷಕ್ಕೆ 1 ಲಕ್ಷ ರೂಪಾಯಿ ದಂಡ ವಿಧಿಸಿ 2021 ಆಗಸ್ಟ್ನಲ್ಲಿ ನೀಡಿದ ಆದೇಶದ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್(B.L. Santosh) ಸಲ್ಲಿಸಿದ ಮರು ಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ(Dinesh Maheshwari) ಹಾಗೂ ಬಿ.ಆರ್. ಗವಾಯಿ(B.R. Gawai) ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸಿತು.

ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಆ್ಯಮಿಕಸ್ ಕ್ಯೂರಿಯಾಗಿದ್ದ ನ್ಯಾಯವಾದಿ ಕೆ.ವಿ. ವಿಶ್ವನಾಥನ್(K.V. Viswanathan), ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾರಣಗಳನ್ನು ನೀಡುವಾಗ ಬಿಜೆಪಿಯು ಅವರ ವಿರುದ್ಧದ ಅಪರಾಧಗಳು ಗಂಭೀರತೆಯನ್ನು ಕಡಿಮೆ ಮಾಡಿದೆ ಎಂದರು. ಪಕ್ಷದ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದ ಕೆಲವು ಅಭ್ಯರ್ಥಿಗಳ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 386 (ಸುಲಿಗೆ) ಮತ್ತು ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ)ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಈ ಅಪರಾಧಗಳನ್ನು ಸುಪ್ರೀಂ ಕೋರ್ಟ್ನಲ್ಲಿ ಕ್ಷುಲ್ಲಕ ಸ್ವರೂಪದ ಪ್ರಕರಣಗಳೆಂದು ಬಂಬಿಸಲಾಗಿದೆ ಎಂದು ವಿಶ್ವನಾಥನ್ ಹೇಳಿದರು. ಬಿಜೆಪಿ ಅಲ್ಲದೆ,. ಸಿಪಿಐ (ಮಾಕ್ಸಿಸ್ಟ್) ಹಾಗೂ ಎನ್ಸಿಪಿಗೆ ತಲಾ 5 ಲಕ್ಷ ರೂ. ದಂಡ, ಕಾಂಗ್ರೆಸ್, ಜನತಾ ದಳ (ಸಂಯುಕ್ತ), ರಾಷ್ಟ್ರೀಯ ಜನತಾ ದಳ, ಸಿಪಿಐ ಹಾಗೂ ಲೋಕ ಜನಶಕ್ತಿ ಪಕ್ಷಕ್ಕೆ ತಲಾ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು. ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್ ಹಾಗೂ ಬಿ.ಆರ್. ಗವಾಯಿ ಅವರನನ್ನೊಳಗೊಂಡ ಪೀಠ 2021ರಲ್ಲಿ ನೀಡಿದ ಈ ಕುರಿತ ತೀರ್ಪು ಮತದಾರರ ಮಾಹಿತಿ ಹಕ್ಕನ್ನು ಹೆಚ್ಚು ಪರಿಣಾಮಕಾರಿ ಹಾಗೂ ಅರ್ಥಪೂರ್ಣಗೊಳಿಸಿದೆ.

Similar News