​ನಟ ಅರವಿಂದ ಬೋಳಾರ್‌ಗೆ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ

Update: 2023-01-29 18:38 GMT

ಮಂಗಳೂರು : ಭಾರತ್ ಸೋಶಿಯಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ (ರಿ) ವತಿಯಿಂದ 150 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮತ್ತು ಚಿತ್ರನಟ ಅರವಿಂದ ಬೋಳಾರ್‌ಗೆ ‘ವರ್ಷದ ವ್ಯಕ್ತಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ನಗರದ ಸಹೋದಯ ಸಭಾಂಗಣದಲ್ಲಿ ನಡೆಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅರವಿಂದ ಬೋಳಾರ್ ಸಂಘ ಸಂಸ್ಥೆಗಳು ನೀಡುವ ವಿದ್ಯಾರ್ಥಿವೇತನವು ತಮ್ಮ ಬಳಗದವರಿಗೆ, ಜಾತಿಯವರಿಗೆ ಮೀಸಲಾಗಿರುತ್ತದೆ. ಆದರೆ ಭಾರತ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಜಾತಿ, ಧರ್ಮ ನೋಡದೆ ಅರ್ಹರಾದ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ಎಲ್ಲಾ ಧರ್ಮೀಯರೂ ಜೊತೆಗೂಡಿ ಬದುಕಿದರೆ ಮಾತ್ರ ಜೀವನ ಸಾರ್ಥಕ. ನಾವೆಲ್ಲರೂ ಒಂದೇ ಎಂಬ ಪಾಠವನ್ನು ಇಂದಿನ ವಿದ್ಯಾರ್ಥಿಗಳು ಕಲಿಯಬೇಕು. ಹಿರಿಯರನ್ನು ಗೌರವಿಸುವ ಕಿರಿಯರನ್ನು ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ದೇಶಕ್ಕಾಗಿ ಏನನ್ನಾದರೂ ಸಾಧಿಸುವ ಗುರಿ ಹೊಂದಬೇಕು ಎಂದು ಅರವಿಂದ ಬೋಳಾರ್ ಹೇಳಿದರು.
ಕುದ್ರೋಳಿಯ ನಾರಾಯಣಗುರು ಪಿಯು ಕಾಲೇಜಿನ ಪ್ರಾಂಶುಪಾಲೆ ರೇಣುಕಾ ಅರುಣ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ವಿವಿಯ ಹರೀಶ್ ಕುಮಾರ್ ಕುತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ನ ಅಧ್ಯಕ್ಷ ಎನ್. ಅಮೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಮಿಲಾಗ್ರಿಸ್ ಪಿಯು ಕಾಲೇಜಿನ ಪ್ರಾಂಶುಪಾಲ ಮೆಲ್ವಿನ್ ವಾಸ್, ಸಂಸ್ಥೆಯ ಉಪಾಧ್ಯಕ್ಷ ಅಶ್ರಫ್ ಎಂ.ಸಿ, ಪ್ರಧಾನ ಕಾರ್ಯದರ್ಶಿ ಆಕಿಫ್ ಇಂಜಿನಿಯರ್, ಸದಸ್ಯರಾದ ಅಬ್ದುಲ್ಲಾ, ನಿಯಾಝ್ ಪೆರ್ಲ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕ ಸುಲೈಮಾನ್ ಪಕ್ಕಲಡ್ಕ ವಂದಿಸಿದರು. ಅಶೀರುದ್ದೀನ್ ಆಲಿಯಾ ಸಾರ್ತಬೈಲ್ ಸಹಕರಿಸಿದರು. ಡಾ. ಅರುಣ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.

Similar News