ಪ್ರಧಾನಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ನಿಷೇಧಿಸುವ ಕೇಂದ್ರದ ನಿರ್ಧಾರ ಪ್ರಶ್ನಿಸಿದ ಅರ್ಜಿ ಆಲಿಸಲು ಸುಪ್ರೀಂ ಸಮ್ಮತಿ

Update: 2023-01-30 16:39 GMT

ಹೊಸದಿಲ್ಲಿ, ಜ. 30: 2002ರ ಗುಜರಾತ್ ಗಲಭೆಯಲ್ಲಿ (Gujarat riots) ಪ್ರಧಾನಿ ನರೇಂದ್ರ ಮೋದಿ (Modi)  ವಹಿಸಿದ್ದಾರೆನ್ನಲಾದ ಪಾತ್ರದ ಬಗ್ಗೆ ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರಗಳನ್ನು ಮಾಧ್ಯಮಗಳು ಪ್ರಸಾರಿಸುವುದನ್ನು ತಡೆಯಲು ಕೇಂದ್ರ ಸರಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಎರಡು ಅರ್ಜಿಗಳ ವಿಚಾರಣೆಯನ್ನು ಫೆಬ್ರವರಿ 6ರಂದು ನಡೆಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.

ಒಂದು ಅರ್ಜಿಯನ್ನು ವಕೀಲ ಎಮ್.ಎಲ್. ಶರ್ಮ ಸಲ್ಲಿಸಿದರೆ, ಇನ್ನೊಂದು ಅರ್ಜಿಯನ್ನು ಪತ್ರಕರ್ತ ಎನ್. ರಾಮ್, ವಕೀಲ ಪ್ರಶಾಂತ್ ಭೂಷಣ್ ಮತ್ತು ಇತರರು ಜಂಟಿಯಾಗಿ ಸಲ್ಲಿಸಿದ್ದಾರೆ. ಬಿಬಿಸಿಯ ಎರಡು ಭಾಗಗಳ ಸಾಕ್ಷ್ಯಚಿತ್ರದ ಮೊದಲ ಭಾಗ ‘ಇಂಡಿಯಾ: ದ ಮೋದಿ ಕ್ವೆಶ್ಚನ್’ನ್ನು ಜನವರಿ 17ರಂದು ಬಿಡುಗಡೆಗೊಳಿಸಲಾಗಿತ್ತು.

‘ಗಲಭೆಗಳು ನಡೆದಾಗ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಮೋದಿ ರಾಜ್ಯದಲ್ಲಿ ಶಿಕ್ಷೆಯ ಭಯವಿರದ ವಾತಾವರಣವೊಂದನ್ನು ಸೃಷ್ಟಿಸಿದ್ದರು. ಅದರಿಂದಾಗಿಯೇ ಮುಸ್ಲಿಮರ ವಿರುದ್ಧ ಹಿಂಸಾಚಾರ ನಡೆಯಿತು’ ಎಂಬುದಾಗಿ ಬ್ರಿಟಿಶ್ ಸರಕಾರ ಕಳಹಿಸಿದ್ದ ತಂಡವೊಂದು ಆರೋಪಿಸಿದೆ ಎಂಬುದಾಗಿ ಸಾಕ್ಷಚಿತ್ರದ ಮೊದಲ ಭಾಗ ಹೇಳಿದೆ.

ಹಿಂಸಾಚಾರದ ಬಗ್ಗೆ ಬ್ರಿಟನ್ ಸರಕಾರ ಸಿದ್ಧಪಡಿಸಿದ್ದ ವರದಿಯೊಂದನ್ನೂ ಈ ಸಾಕ್ಷಚಿತ್ರವು ಬಹಿರಂಗಪಡಿಸಿದೆ. ‘‘ಗುಜರಾತ್ ಗಲಭೆಯು ಜನಾಂಗೀಯ ಹತ್ಯೆಯ ಸಕಲ ಗುಣಲಕ್ಷಣಗಳನ್ನೂ ಹೊಂದಿತ್ತು” ಎಂಬುದಾಗಿ ಆ ವರದಿ ಹೇಳುತ್ತದೆ.

ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿಲ್ಲ. ಆದರೆ ಅದನ್ನು ವಿವಿಧ ಯೂಟ್ಯೂಬ್ ಚಾನೆಲ್‌ ಗಳಲ್ಲಿ ಹಾಕಲಾಗಿತ್ತು ಹಾಗೂ ಟ್ವಿಟರ್ ಮೂಲಕ ವ್ಯಾಪಕವಾಗಿ ಪ್ರಸಾರಿಸಲಾಗಿತ್ತು. ಜನವರಿ 20ರಂದು ಭಾರತ ಸರಕಾರವು ಮಾಹಿತಿ ತಂತ್ರಜ್ಞಾನ ನಿಯಮಗಳು, 2021ರ ಅಡಿಯಲ್ಲಿ ಲಭ್ಯವಾಗುವ ತುರ್ತು ಅಧಿಕಾರಗಳನ್ನು ಬಳಸಿಕೊಂಡು, ಸಾಕ್ಷ್ಯಚಿತ್ರವನ್ನು ತೆಗೆದುಹಾಕುವಂತೆ ಯೂಟ್ಯೂಬ್ ಮತ್ತು ಟ್ವಿಟರ್‌ ಗೆ ನಿರ್ದೇಶನಗಳನ್ನು ನೀಡಿತ್ತು.

ಸಾಕ್ಷ್ಯಚಿತ್ರದ 2ನೇ ಭಾಗವನ್ನು ಜನವರಿ 24ರಂದು ಬಿಬಿಸಿ ಪ್ರಸಾರ ಮಾಡಿದೆ. ಸೋಮವಾರ, ವಕೀಲ ಎಮ್.ಎಲ್. ಶರ್ಮ ತನ್ನ ಅರ್ಜಿಯನ್ನು ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಮುಂದೆ ಮಂಡಿಸಿದ್ದು, ಅದರ ತುರ್ತು ವಿಚಾರಣೆ ನಡೆಸುವಂತೆ ಕೋರಿದರು. 
ಸಾಕ್ಷ್ಯಚಿತ್ರವನ್ನು ತಡೆಯುವ ಕೇಂದ್ರ ಸರಕಾರದ ಆದೇಶವು ‘‘ದುರುದ್ದೇಶಪೂರಿತ, ಸ್ವೇಚ್ಛಾಚಾರದ ಮತ್ತು ಅಸಾಂವಿಧಾನಿಕ” ಎಂದು ಅರ್ಜಿ ವಾದಿಸಿದೆ.

ಎರಡನೇ ಅರ್ಜಿಯನ್ನು ವಕೀಲ ಸಿ.ಯು. ಸಿಂಗ್ ನ್ಯಾಯಪೀಠದ ಮುಂದಿರಿಸಿದರು. ಸಾಕ್ಷ್ಯಚಿತ್ರದ ಬಗ್ಗೆ ನನ್ನ ಕಕ್ಷಿದಾರರಾದ ರಾಮ್ ಮತ್ತು ಪ್ರಶಾಂತ್ ಭೂಷಣ್ ಮಾಡಿರುವ ಟ್ವೀಟ್ ಗಳನ್ನು ತೆಗೆದುಹಾಕಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಅದೂ ಅಲ್ಲದೆ, ಕೇಂದ್ರ ಸರಕಾರವು ತನ್ನ ಆದೇಶವನ್ನು ಸಾರ್ವಜನಿಕವಾಗಿ ಪ್ರಕಟಿಸಿಲ್ಲ ಎಂದು ಅವರು ಹೇಳಿದರು. ಅರ್ಜಿಗಳ ವಿಚಾರಣೆಯನ್ನು ಮುಂದಿನ ಸೋಮವಾರ ನಡೆಸಲು ಮುಖ್ಯ ನ್ಯಾಯಾಧೀಶರು ಒಪ್ಪಿದರು.

► ಸುಪ್ರೀಂಕೋರ್ಟ್ ನ ಅಮೂಲ್ಯ ಸಮಯ ವ್ಯರ್ಥ: ಕಾನೂನು ಸಚಿವ ರಿಜೀಜು ಕಿಡಿ

ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶಾಮೀಲಾಗಿದ್ದರು ಎಂದು ಆರೋಪಿಸುವ ಬಿಬಿಸಿ ಸಾಕ್ಷ್ಯಚಿತ್ರವನ್ನು ಕೇಂದ್ರ ಸರಕಾರವು ನಿಷೇಧಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಕಾನೂನು ಸಚಿವ ಕಿರಣ್ ರಿಜೀಜು ಸೋಮವಾರ ಖಂಡಿಸಿದ್ದಾರೆ.

‘ಈ ಮೂಲಕ ಅವರು ಗೌರವಾನ್ವಿತ ಸುಪ್ರೀಂ ಕೋರ್ಟ್ ನ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸುತ್ತಿದ್ದಾರೆ. ಈ ನ್ಯಾಯಾಲಯದಲ್ಲಿ ಸಾವಿರಾರು ಸಾಮಾನ್ಯ ನಾಗರಿಕರು ನ್ಯಾಯ ಪಡೆಯಲು ದಿನಾಂಕ ನಿಗದಿಗಾಗಿ ಕಾಯುತ್ತಿದ್ದಾರೆʼ ಎಂದು ಕಾನೂನು ಸಚಿವರು ಟ್ವೀಟ್ ಮಾಡಿದ್ದಾರೆ. ನಿಷೇಧ ಪ್ರಶ್ನಿಸುವ ಅರ್ಜಿಗಳ ವಿಚಾರಣೆಯನ್ನು ಫೆಬ್ರವರಿ 6ರಂದು ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

Similar News