ಬೆಳ್ತಂಗಡಿ: ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿ ಸಾವು

Update: 2023-01-30 07:11 GMT

ಬೆಳ್ತಂಗಡಿ: ಹಣ ನೀಡದಿದ್ದರೆ ಇನ್ ಸ್ಟಾಗ್ರಾಂ ಮೂಲಕ ವೈಯುಕ್ತಿಕ ವೀಡಿಯೋವನ್ನು ವೈರಲ್ ಮಾಡುವುದಾಗಿ ಬಂದ ಬೆದರಿಕೆಯ ಕರೆಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಲೇಜು ವಿದ್ಯಾರ್ಥಿಯೋರ್ವ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಬೆಳ್ತಂಗಡಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ ವಿದ್ಯಾರ್ಥಿಯಾಗಿರುವ ಧರ್ಮಸ್ಥಳ ಗ್ರಾಮದ ಅಶೋಕನಗರ ನಿವಾಸಿ ಹರ್ಷಿತ್ ಎಂಬಾತನೇ ಆತ್ಮಹತ್ಯೆಗೈದ ಯುವಕ.

ಈತನಿಗೆ ಇನ್ ಸ್ಟಾಗ್ರಾಂ ಮೂಲಕ ಅಪರಿಚಿತ ವ್ಯಕ್ತಿಯೋರ್ವ ಪರಿಚಯವಾಗಿದೆ. ಬಳಿಕ ಚಾಟ್ ಮಾಡುತ್ತಿದ್ದು, ಇದಾದ ಬಳಿಕ ವೀಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಬಳಿಕ ತನ್ನ ಬಳಿ ವಿದ್ಯಾರ್ಥಿಯ ವೈಯಕ್ತಿಕ ವೀಡಿಯೊ ಇದೆ. ಹಣ ನೀಡದಿದ್ದಲ್ಲಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ ಎನ್ನಲಾಗಿದೆ. ಹಣ ನೀಡಲು ಸಾಧ್ಯವಾಗದ ವಿದ್ಯಾರ್ಥಿ ಹೆದರಿ ಜ.24ರಂದು ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ.

ಮನೆಯವರು ಇದನ್ನು ಗಮನಿಸಿದ್ದು, ಕೂಡಲೇ ಈತನನ್ನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Similar News