ವಂಚನೆಯನ್ನು ರಾಷ್ಟ್ರೀಯವಾದದ ಮೂಲಕ ಮರೆಮಾಚಲಾಗದು: ಅದಾನಿ ಸಮೂಹಕ್ಕೆ ಹಿಂಡೆನ್‌ಬರ್ಗ್‌ ತಿರುಗೇಟು

Update: 2023-01-30 12:03 GMT

ಹೊಸದಿಲ್ಲಿ: "ರಾಷ್ಟ್ರೀಯವಾದದ ಮೂಲಕ ಅಥವಾ ನಾವು ಎತ್ತಿದ ಪ್ರಮುಖ ಆರೋಪಗಳನ್ನು ಅವಗಣಿಸುವ ಉತ್ಪ್ರೇಕ್ಷಿತ ಪ್ರತಿಕ್ರಿಯೆಯಿಂದ ಅವ್ಯವಹಾರವನ್ನು ಮರೆಮಾಚಲು ಸಾಧ್ಯವಿಲ್ಲ," ಎಂದು ಹಿಂಡೆನ್‌ಬರ್ಗ್‌ ರಿಸರ್ಚ್‌ ಸಂಸ್ಥೆ (Hindenburg Research) ಸೋಮವಾರ ಹೇಳಿದೆ.

ಅದಾನಿ ಸಮೂಹವು (Adani group) ಹಿಂಡೆನ್‌ಬರ್ಗ್‌ ವರದಿಯನ್ನು ಭಾರತದ ಮೇಲಿನ "ಲೆಕ್ಕಾಚಾರಿತ ದಾಳಿ" ಎಂದು ಬಣ್ಣಿಸಿದ ಬೆನ್ನಲ್ಲೇ ಸಂಸ್ಥೆಯ ಹೇಳಿಕೆ ಬಂದಿದೆ.

"ಅದಾನಿ ಸಮೂಹವು  ಪ್ರಮುಖ ವಿಚಾರಗಳಿಂದ ಗಮನ ಬೇರೆಡೆ ಸೆಳೆಯಲು ಯತ್ನಿಸಿದೆ ಮತ್ತು ರಾಷ್ಟ್ರೀಯವಾದದ ವಿಚಾರವನ್ನು ಎತ್ತಿದೆ," ಎಂದು ಹಿಂಡೆನ್‌ಬರ್ಗ್‌ ಸಂಸ್ಥೆ ಹೇಳಿದೆ.

"ಅದಾನಿ ಸಮೂಹವು ತನ್ನ ದಿಢೀರ್‌ ಬೆಳವಣಿಗೆ ಮತ್ತು ತನ್ನ ಅಧ್ಯಕ್ಷ ಗೌತಮ್‌ ಅದಾನಿ ಅವರ ಸಂಪತ್ತು ಏರಿಕೆಯನ್ನು ಭಾರತದ ಯಶಸ್ಸಿನ ಜೊತೆಗೆ ಜೋಡಿಸಲು ಯತ್ನಿಸಿದೆ," ಎಂದು ಹಿಂಡೆನ್‌ಬರ್ಗ್‌ ಹೇಳಿದೆ.

"ನಾವು ಒಪ್ಪುವುದಿಲ್ಲ, ಸ್ಪಷ್ಟವಾಗಿ ಹೇಳಬೇಕೆಂದರೆ ಭಾರತವು ಉಜ್ವಲ ಭವಿಷ್ಯವಿರುವ ಹಾಗೂ ಸೂಪರ್‌ ಪವರ್‌ ಆಗುವ ಹಾದಿಯಲ್ಲಿರುವ ಪ್ರಜಾಪ್ರಭುತ್ವ ಎಂದು ನಾವು ಭಾವಿಸಿದ್ದೇವೆ. ಅದೇ ಸಮಯ ದೇಶವನ್ನು ವ್ಯವಸ್ಥಿತವಾಗಿ ಲೂಟಿ ಮಾಡುವಾಗ ಭಾರತೀಯ ಧ್ವಜವನ್ನು ಹೊದ್ದುಕೊಂಡು  ಭಾರತದ ಭವಿಷ್ಯಕ್ಕೆ ಅದಾನಿ ಸಮೂಹ ಅಡ್ಡಿ ಮಾಡಿದೆ," ಎಂದು ಹಿಂಡೆನ್‌ಬರ್ಗ್‌ ಹೇಳಿದೆ.

"ವಂಚನೆಯನ್ನು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರು ಮಾಡಿದರೂ ವಂಚನೆ ವಂಚನೆಯೇ ಆಗಿರುತ್ತದೆ ಎಂದು ನಾವು ನಂಬಿದ್ದೇವೆ," ಎಂದು ಸಂಸ್ಥೆ ಹೇಳಿದೆ.

ಹಿಂಡೆನ್‌ಬರ್ಗ್‌ ವರದಿಯು ದುರುದ್ದೇಶವನ್ನು ಹೊಂದಿದೆ ಹಾಗೂ ಅಮೆರಿಕಾದ ಈ ಸಂಸ್ಥೆಗೆ ಆರ್ಥಿಕ ಲಾಭಗಳನ್ನು ತರಲುವ ʻಫಾಲ್ಸ್‌ ಮಾರ್ಕೆಟ್‌ʼ ಸೃಷ್ಟಿಸುವ ಉದ್ದೇಶ ಹೊಂದಿದೆ ಎಂದು ಅದಾನಿ ಸಂಸ್ಥೆ ಹೇಳಿದೆ. ಹಿಂಡೆನ್‌ಬರ್ಗ್‌ ಎತ್ತಿದ 88 ಪ್ರಶ್ನೆಗಳ ಪೈಕಿ 65 ಪ್ರಶ್ನೆಗಳು ಈಗಾಗಲೇ ಅದಾನಿ ಸಂಸ್ಥೆಗಳು ಸಂಪೂರ್ಣವಾಗಿ ಬಹಿರಂಗಪಡಿಸಿರುವ ಮಾಹಿತಿಗೆ ಸಂಬಂಧಿಸಿದ್ದಾಗಿದೆ ಎಂದೂ ಅದಾನಿ ಸಮೂಹ ಹೇಳಿದೆ.

ಇದನ್ನೂ ಓದಿ: ಪಾಕಿಸ್ತಾನದ ಪೇಶಾವರ ಮಸೀದಿಯಲ್ಲಿ ಸ್ಫೋಟ, ಕನಿಷ್ಠ 90 ಮಂದಿಗೆ ಗಾಯ

Similar News