ಕೊಲೆಯ ಸೂತ್ರಧಾರನ ವಿರುದ್ಧ ಪೊಲೀಸರು ಕ್ರಮ ಜರಗಿಸಲಿ: ಫಾಝಿಲ್ ತಂದೆ ಒತ್ತಾಯ

Update: 2023-01-30 13:12 GMT

ಮಂಗಳೂರು: ನನ್ನ ಮಗ ಫಾಝಿಲ್‌ನ ಕೊಲೆಕೃತ್ಯದ ಸೂತ್ರಧಾರ ಯಾರೂಂತ ಈಗ ಬಹಿರಂಗವಾಗಿದೆ. ಹಾಗಾಗಿ ಪೊಲೀಸರು ಇನ್ನಾದರು ಸೂಕ್ತ ಕ್ರಮ ಜರಗಿಸಲಿ ಎಂದು ಮಂಗಳಪೇಟೆಯ ಉಮರ್ ಫಾರೂಕ್ ಒತ್ತಾಯಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ಸೋಮವಾರ ಮನವಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ತುಮಕೂರಿನಲ್ಲಿ ನಡೆದ ‘ಶೌರ್ಯಯಾತ್ರೆ’ ಕಾರ್ಯಕ್ರಮದಲ್ಲಿ ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್ ಮಾತನಾಡುತ್ತಾ ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತೀಕಾರವಾಗಿ ಫಾಝಿಲ್‌ನನ್ನು ಕೊಲೆ ಮಾಡಲಾಗಿದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಫಾಝಿಲ್‌ನನ್ನು ಕೊಲೆಗೈದು 6 ತಿಂಗಳಾಗಿದೆ. ಅಂದಿನಿಂದಲೂ ಈ ಕೊಲೆಯ ಹಿಂದೆ ಬೇರೆಯೇ ಜನರಿದ್ದಾರೆ ಎಂದು ನಾನು ಹೇಳುತ್ತಾ ಬಂದಿದ್ದೆ. ಅದೀಗ ಬಹಿರಂಗಗೊಂಡಿವೆ. ಹಾಗಾಗಿ ಪೊಲೀಸರು ಶರಣ್ ಪಂಪ್‌ವೆಲ್ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಪೊಲೀಸ್ ಆಯುಕ್ತರು ಲೀಗಲ್ ಸಲಹೆ ಪಡೆದು ಮುಂದಿನ ಕ್ರಮ ಜರಗಿಸುವುದಾಗಿ ಹೇಳಿದ್ದಾರೆ. ಅವರು ಏನು ಮಾಡುತ್ತಾರೋ ಗೊತ್ತಿಲ್ಲ. ಫಾಝಿಲ್‌ನ ತಂದೆಯಾಗಿ ನಾನು ನನ್ನ ಕರ್ತವ್ಯವನ್ನು ಮಾಡುತ್ತೇನೆ. ಸುರತ್ಕಲ್ ಠಾಣೆಗೆ ದೂರು ನೀಡುತ್ತೇನೆ. ಮಂಗಳೂರು ಉತ್ತರ ಎಸಿಪಿ ಅವರನ್ನೂ ಭೇಟಿಯಾಗುತ್ತೇನೆ. ನನ್ನ ಹಿಂದೆ ಎಲ್ಲರೂ ಇದ್ದಾರೆ. ಯಾರೂ ಕೈಬಿಟ್ಟಿಲ್ಲ. ಎಲ್ಲರ ಸಹಕಾರ ಪಡೆದು ಕಾನೂನು ಹೋರಾಟ ಮಾಡುವೆ ಎಂದು ಉಮರ್ ಫಾರೂಕ್ ಹೇಳಿದ್ದಾರೆ.

ಪೊಲೀಸರು ಆತನನ್ನು ಗಡಿಪಾರು ಮಾಡಬೇಕು. ರಾಜ್ಯ ಬಿಜೆಪಿ ಸರಕಾರವೂ ಪೊಲೀಸರ ತನಿಖೆಗೆ ಅಡ್ಡಿಪಡಿಸಬಾರದು ಎಂದು ಉಮರ್ ಫಾರೂಕ್ ಮನವಿ ಮಾಡಿದ್ದಾರೆ.

ಸೂಕ್ತ ಕ್ರಮಕೈಗೊಳ್ಳುವಂತೆ ಫಾಝಿಲ್‌ನ ತಂದೆ ಮನವಿ ಸಲ್ಲಿಸಿದ್ದಾರೆ. ಮುಂದಿನ ಕ್ರಮದ ಬಗ್ಗೆ ಕಾನೂನು ಸಲಹೆ ಪಡೆಯಲಾಗುವುದು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಪ್ರತಿಕ್ರಿಯಿಸಿದ್ದಾರೆ.

Similar News