​ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ದೇಶಾದ್ಯಂತ ಅಮೃತ ಕಲೋತ್ಸವ: ಡಾ.ಸಂಧ್ಯಾ ಪುರೇಚಾ

Update: 2023-01-30 15:30 GMT

ಮಣಿಪಾಲ: ದೇಶದ 75ನೇ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ  ಕೇಂದ್ರ ಸಂಗೀತ ನಾಟಕ ಅಕಾಡೆಮಿ ದೇಶದ ಯುವ ಕಲಾವಿದರಿಂದ ದೇಶದ ವೈವಿಧ್ಯಮಯ ಕಲಾ ಪ್ರಕಾರಗಳ ಪ್ರದರ್ಶನ ‘ಅಮೃತ ಯುವ ಕಲೋತ್ಸವ- 2022-23’ನ್ನು ದೇಶಾದ್ಯಂತ ಹಮ್ಮಿಕೊಳ್ಳುತ್ತಿದೆ ಎಂದು ಅಕಾಡೆಮಿಯ ಅಧ್ಯಕ್ಷೆ ಡಾ.ಸಂಧ್ಯಾ ಪುರೇಚಾ ಹೇಳಿದ್ದಾರೆ.

ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸಾಯನ್ಸ್‌ನ ಸಹಯೋಗದೊಂದಿಗೆ ಇಂದಿನಿಂದ ನಾಲ್ಕು ದಿನಗಳ ಕಾಲ ಮಣಿಪಾಲದಲ್ಲಿ ಹಮ್ಮಿಕೊಂಡಿರುವ ‘ಅಮೃತ ಯುವ ಕಲೋತ್ಸವ’ದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಮಣಿಪಾಲದ ಮಧುಬನ್ ಸರಾಯ್ ಹೊಟೇಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಅಮೃತ ಕಲೋತ್ಸವದ ಉದ್ಘಾಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.  ಅಕಾಡೆಮಿ ವತಿಯಿಂದ ಕಲೋತ್ಸವವನ್ನು ಅಸ್ಸಾಂ, ಮದ್ಯಪ್ರದೇಶ, ಜಮ್ಮು, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ, ಲಕ್ನೋಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ದೇಶದ ಖ್ಯಾತ ಭರತನಾಟ್ಯ ಹಾಗೂ ಶಾಸ್ತ್ರೀಯ ನೃತ್ಯ ಕಲಾವಿದೆ, ಕೋರಿಯೊಗ್ರಾಫರ್, ಸಂಶೋಧಕಿ, ಸಂಸ್ಕೃತತಜ್ಞೆಯೂ ಆಗಿರುವ ಡಾ.ಸಂಧ್ಯಾ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ ಶಕ್ತಿ- ಯುವ  ಶಕ್ತಿ’ ಘೋಷಣೆಯಂತೆ ದೇಶದ ಯುವ ಶಕ್ತಿಯ ಪ್ರತಿಭೆಯನ್ನು ಜಗತ್ತಿಗೆ ತೋರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ದೇಶದ ಮೂಲೆ ಮೂಲೆಯಲ್ಲಿರುವ ಅಪರೂಪದ ಕಲೆಯನ್ನು ಯುವತಂಡ ಪ್ರದರ್ಶಿಸಲಿದೆ ಎಂದರು.

ಮಣಿಪಾಲದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡೊಳ್ಳುಕುಣಿತ, ಕಲರಿಪಯಟ್ಟು, ಭರತನಾಟ್ಯ, ಯಕ್ಷಗಾನ, ಕೂಚಿಪುಡಿ, ಕರಡಿ ಮಜಲು, ಸಿದ್ಧಿ ಧಮಾನಿ ನೃತ್ಯ, ಹಿಂದೂಸ್ತಾನಿ, ಕರ್ನಾಟಕಿ ಸಂಗೀತಗಳ ಪ್ರದರ್ಶನಗಳಿರುತ್ತದೆ. ಅಲ್ಲದೇ ಖ್ಯಾತ ಕಲಾ ವಿಮರ್ಶಕರಿಂದ, ಕಲಾವಿದರಿಂದ ಹಾಗೂ ತಜ್ಞರ ಪ್ಯಾನೆಲ್ ಮೂಲಕ ಕಲಾವಿಮರ್ಶೆ ಹಾಗೂ ಕಾರ್ಯಾಗಾರಗಳೂ ನಡೆಯಲಿವೆ ಎಂದರು.

ಅಮೃತ ಯುವ ಕಲೋತ್ಸವದಲ್ಲಿ ದೇಶದ ಮೂಲೆಮೂಲೆಯ ಕಲಾ ತಂಡಗಳು ಭಾಗವಹಿಸಲು ಅವಕಾಶಗಳಿವೆ. ಸಂಗೀತ ನಾಟಕ ಅಕಾಡೆಮಿಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅರ್ಜಿಯನ್ನು ಭರ್ತಿ ಮಾಡಿ ಆನ್‌ಲೈನ್‌ನಲ್ಲಿ ಕಳುಹಿಸಿದರೆ ಅವುಗಳನ್ನು ಪರಿಗಣಿಸಲಾಗುವುದು ಎಂದರು.

ಮಹಿಳಾ ಸಬಲೀಕರಣಕ್ಕೆ ಕ್ರಮ: ಡಾ.ಸಂಧ್ಯಾ ಪುರೇಚಾ ಅವರು ನರೇಂದ್ರ ಮೋದಿ ಅಧ್ಯಕ್ಷರಾಗಿರುವ ಜಿ20ರ ಸಹಸಂಘಟನೆ ಮಹಿಳೆ20 (W20)ರ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸುತಿದ್ದಾರೆ. ಇದರ ಅಡಿಯಲ್ಲಿ ಮಹಿಳೆಯರ ಸಬಲೀಕರಣ, ಸಮಾನತೆ ಸೇರಿದಂತೆ ಮಹಿಳೆಯರಿಗೆ ಸಂಬಂಧಿಸಿದ ಐದು ಕ್ಷೇತ್ರಗಳಲ್ಲಿ 10ಕ್ಕೂ ಅಧಿಕ ಕಾರ್ಯಪಡೆಯ ಮೂಲಕ ನಾವು ಕಾರ್ಯಕ್ರಮ ಗಳನ್ನು ರೂಪಿಸುತಿದ್ದೇವೆ ಎಂದು ಡಾ.ಸಂಧ್ಯಾ ನುಡಿದರು.

ಇನ್ನು ಒಂದು ವರ್ಷದಲ್ಲಿ ನಾವು ಐದು ಪ್ರಮುಖ ಅಂಶಗಳ ಮೇಲೆ - ಮಹಿಳೆಯರ ಉದ್ಯಮೀಕರಣ, ತಳಮಟ್ಟದಲ್ಲಿ ಮಹಿಳೆಯರ ಅಭಿವೃದ್ಧಿ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಲಿಂಗ ಸಮಾನತೆ ಹಾಗೂ ಕ್ಲೈಮೆಟ್ ಚೇಂಜ್- ಕಾರ್ಯಪಡೆಯ ಮೂಲಕ ಕಾರ್ಯಪ್ರವೃತ್ತರಾಗಲಿದ್ದೇವೆ ಎಂದವರು ವಿವರಿಸಿದರು.
ಮಹಿಳಾ ಕುಲಪತಿಗಳ ಸಮಾವೇಶ: ಇದಕ್ಕೆ  ಸಂಬಂಧಿಸಿದಂತೆ ಇಂದು ಡಬ್ಲ್ಯು20 ಹಾಗೂ ಮಾಹೆ ವಿವಿ ನಡುವೆ ನಾಲ್ಡೇಜ್ ಪಾರ್ಟನರ್ ಆಗಿ ಎಂಓಯುಗೆ ಸಹಿ ಹಾಕಲಾಗಿದೆ. ಇದರ ಪ್ರಮುಖ ಅಂಶವೆಂದರೆ ಮಾಹೆಯ  ಆತಿಥೇಯತ್ವದಲ್ಲಿ ಬೆಂಗಳೂರು ಅಥವಾ ಮಣಿಪಾಲ ಕ್ಯಾಂಪಸ್‌ನಲ್ಲಿ  ಮಹಿಳಾ ಕುಲಪತಿಗಳ ರಾಷ್ಟ್ರಮಟ್ಟದ ಸಮಾವೇಶವೊಂದು ಆಯೋಜನೆ ಗೊಳ್ಳಲಿದೆ ಎಂದು ಡಾ.ಸಂಧ್ಯಾ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಉಪ ಕಾರ್ಯದರ್ಶಿ ಹೆಲೆನ್ ಆಚಾರ್ಯ, ಜಿಸಿಪಿಎಎಸ್ ಮುಖ್ಯಸ್ಥ ಡಾ.ವರದೇಶ ಹಿರೇಗಂಗೆ ಹಾಗೂ ಕಲಾವಿದೆ ಮಧು ನಟರಾಜ್ ಉಪಸ್ಥಿತರಿದ್ದರು.

Similar News

ನಾಪತ್ತೆ