ಪುರಾಣದ ಕನ್ನಡಿ ತೋರುವ ವರ್ತಮಾನದ ರಾಜಕೀಯ ಬಿಂಬ ‘ಕಾಮ್ರೇಡ್ ಕುಂಭಕರಣ’

ರಂಗ ವಿಮರ್ಶೆ

Update: 2023-01-31 07:00 GMT

ನಾಟಕದಲ್ಲಿ ನಟಿಸುವ ನಟ-ನಟಿಯರಿಗೆ ಏನೆಲ್ಲಾ ತಿಳಿದಿರಬೇಕು? ನಟನೆ, ರಂಗ ಸಾಹಿತ್ಯ, ರಂಗ ಸಂಗೀತ, ನೇಪಥ್ಯ, ರಂಗಸಜ್ಜಿಕೆ ಹೀಗೆ ನಾಟಕವೊಂದರ ಪ್ರದರ್ಶನಕ್ಕೆ ಬೇಕಾದ ಅಂಶಗಳು ಗೊತ್ತಿದ್ದರೆ ಸಾಕೆ ಅಥವಾ ಆ ನಟನಟಿಯರ ಕಾಲ ದೇಶಕ್ಕೆ ಸಂಬಂಧಿಸಿದ ಆಗು-ಹೋಗುಗಳು ಮತ್ತು ಮುಖ್ಯವಾಗಿ ಅವರು ಬದುಕುತ್ತಿರುವ ನೆಲದ ರಾಜಕೀಯ ಸ್ಥಿತಿಗತಿಗಳ ಅರಿವು ಇರಬೇಕೆ? ಅವರ ಓದಿನ ಕ್ರಮ ಕೇವಲ ಆಯಾ ನಾಟಕ ಪಠ್ಯದ ಚೌಕಟ್ಟಿನೊಳಗಿದ್ದರೆ ಸಾಕೇ ಅಥವಾ ಪಠ್ಯದ ಹೊರಗೂ ಚಾಚಿಕೊಂಡಿರುವ ಜೀವನ, ಸಂಸ್ಕೃತಿ ಮತ್ತು ಅನುಭವಕ್ಕೂ ನಿಲುಕುವಂತಿರಬೇಕೆ? ರಂಗ ಅಭ್ಯಾಸಿಗಳಿಗೆ ರಂಗದ ಮೇಲಿನ ಅಭ್ಯಾಸವಷ್ಟೇ ಸಾಕೆ ಅಥವಾ ರಂಗದಾಚೆಗೂ ಹಬ್ಬಿರುವ ಪ್ರಜ್ಞೆ ಮತ್ತು ಪರಿಸರದ ಅರಿವೂ ಇರಬೇಕೆ? ಈ ಎಲ್ಲಾ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸಿ, ನವೀನ ರಂಗ ಸಾಧ್ಯತೆಗಳ ಬಗ್ಗೆ ಭರವಸೆಯ ಚಿಂತನೆ ನಡೆಸುತ್ತಿರುವವರು ಕನ್ನಡದ ಹೊಸ ತಲೆಮಾರಿನ ರಂಗ ನಿರ್ದೇಶಕ ಮತ್ತು ನಟ ಯತೀಶ್ ಎನ್. ಕೊಳ್ಳೆಗಾಲ. ಅವರ ‘ವರ್ಕಶಾಪ್ ಇನ್ ಮೈಸೂರು ಫಾರ್ ಥಿಯೇಟರ್’ ರಂಗತಂಡದ ಕೆಲಸಗಳು ಇದಕ್ಕೆ ಸಾಕ್ಷಿ. ‘ನಟನೆಗಾಗಿ ಅನ್ನುವುದಕ್ಕಿಂತಲೂ ನಟನಿಗಾಗಿ’ ಅನ್ನುವುದು ಈ ತಂಡದ ಉದ್ದೇಶ ಮತ್ತು ಕಾರ್ಯಕ್ಷೇತ್ರ. ಸಂವೇದನಾಶೀಲ ರಂಗ ಅಭ್ಯಾಸಿಗಳಿಗೆ ಅತಿಮುಖ್ಯವಾಗಿ ಬೇಕಿರುವ ರಂಗ ತಿಳಿವು ಮತ್ತು ರಾಜಕೀಯ ಅರಿವನ್ನು ಬೆಳೆಸುವಲ್ಲಿ ಈ ತಂಡ ಕಾರ್ಯಪ್ರವೃತ್ತವಾಗಿದೆ.

ರಾಮು ರಾಮನಾಥನ್ ಇಂಗ್ಲಿಷಿನಲ್ಲಿ ಬರೆದ ‘ಕಾಮ್ರೇಡ್ ಕುಂಭಕರಣ’ ನಾಟಕವನ್ನು ಇದೇ ತಂಡಕ್ಕೆ ಯತೀಶ್ ಎನ್. ಕೊಳ್ಳೆಗಾಲ ಸ್ವತಃ ಅನುವಾದಿಸಿ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಈ ನಾಟಕದ ಪ್ರದರ್ಶನ ಕರ್ನಾಟಕದಾದ್ಯಂತ ನಡೆಯುತ್ತಿದೆ.

‘ಕಾಮ್ರೇಡ್ ಕುಂಭಕರಣ’ ನಾಟಕವು ಪುರಾಣದ ಕುಂಭಕರ್ಣನ ಪಾತ್ರ ಮತ್ತು ಆ ಪಾತ್ರ ಮಾಡುವ ಒಬ್ಬ ಸಮಕಾಲೀನ ಬಡ ನಟನ ಮುಖಾಂತರ ಇಂಡಿಯಾದ ವರ್ತಮಾನದ ರಾಜಕೀಯವನ್ನು ವಿಶ್ಲೇಷಿಸುತ್ತದೆ. ಇವತ್ತಿನ ಅರ್ಥಹೀನ ರಾಜಕೀಯದ ಅಸಂಗತ ಚಿತ್ರಣದಂತೆ ನಾಟಕವು ಏಕಕಾಲದಲ್ಲಿ ಅಸಂಬದ್ಧವೂ ಮತ್ತು ಸಂಕೀರ್ಣವೂ ಆಗಿದೆ. ನಟರ ದೈಹಿಕ ಸಾಮರ್ಥ್ಯಕ್ಕಿಂತ ಹೆಚ್ಚು ಬೌದ್ಧಿಕ ಸಾಮರ್ಥ್ಯವನ್ನು ಬೇಡುವ ಈ ನಾಟಕ ಇವತ್ತಿನ ಪ್ರಭುತ್ವದ ಕರಾಳ ಚಿತ್ರಣಗಳನ್ನು ರೂಪಕದ ಮಾದರಿಯಲ್ಲಿ ತೋರಿಸುತ್ತದೆ. ಯುಎಪಿಎ ಕಾಯ್ದೆಯನ್ನು ಮುಖ್ಯಭೂಮಿಕೆಯಲ್ಲಿ ಪ್ರಶ್ನಿಸುವ ನಾಟಕ, ಹೇಗೆ ಒಂದು ಕಾಯ್ದೆ, ಒಂದು ರಾಜಕೀಯ ಸಿದ್ಧಾಂತ ಮತ್ತು ಸರ್ವಾಧಿಕಾರದ ಮನೋಭಾವವು ಎಲ್ಲಾ ಬಗೆಯ ಭಿನ್ನಮತಗಳನ್ನು ನಿರ್ನಾಮಗೊಳಿಸಿಬಿಡುತ್ತವೆ ಎಂದು ನಿರೂಪಿಸುತ್ತದೆ. ರಾಜಕೀಯ ಕಾಯ್ದೆಯೊಂದು ತನ್ನದೇ ಪ್ರಜೆಗಳ ಮೇಲೆ ವಿವೇಚನೆಯಿಲ್ಲದೆ ದಾಳಿನಡೆಸುತ್ತಿರುವಾಗ, ಹೇಗೆ ಒಬ್ಬ ಬಡ ನಟ ಅದಕ್ಕೆ ತನ್ನದೇ ರೀತಿಯಲ್ಲಿ ಪ್ರತಿರೋಧ ತೋರಿಸಬಹುದು ಎನ್ನುವುದನ್ನು ನಾಟಕದಲ್ಲಿ ಕಾಣಬಹುದು. ವರ್ತಮಾನದ ವ್ಯವಸ್ಥೆಯು ತೀರಾ ನಿರ್ಲಜ್ಜ ಮತ್ತು ಕ್ರೌರ್ಯದ ಮಹಾಕೂಪವೇ ಆದಾಗ ಅಂತಹ ಸಮಾಜದಿಂದ ತುಸು ಹಿಂದೆ ಸರಿದು ಪುರಾಣ ಮತ್ತು ಭೂತದ ಹಿನ್ನೆಲೆಯಲ್ಲಿ ಭವಿಷ್ಯವನ್ನು ಚರ್ಚಿಸುವ ಒಂದು ವಿಶೇಷ ಕಥನ ತಂತ್ರವನ್ನು ನಾಟಕ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತದೆ. ಇದೇ ಕಾರಣಕ್ಕೆ ನಾಟಕದಲ್ಲಿ ಸಮಯ ಮತ್ತು ಸ್ಥಳಗಳು ಕಾಲಾನುಕ್ರಮಣಿಕೆಯಲ್ಲಿ ಚಲಿಸದೆ ಕಾಲದ ಪ್ರವಾಹದಲ್ಲಿ ಹಿಂದಕ್ಕೂ ಮುಂದಕ್ಕೂ ಹರಿದು ರೇಖೀಯವಲ್ಲದ ಜಟಿಲ ನಿರೂಪಣಾ ಶೈಲಿಯನ್ನು ಅನುಸರಿಸುತ್ತದೆ. ಲಾಗಾಯ್ತಿನ ನಾಟಕ ರಚನಾ ಕ್ರಮವನ್ನು ಮುರಿದು ಹೊಸ ಬಗೆಯ ಪಠ್ಯಶೈಲಿಯನ್ನು ನಾಟಕ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ನಾಟಕದ ಕಥೆಯನ್ನು ಗೊಂದಲವಿಲ್ಲದೆ ಪ್ರೇಕ್ಷಕರಿಗೆ ತಲುಪಿಸಲು ನಟನಟಿಯರು ಹರಸಾಹಸ ಪಡಬೇಕಾಗುತ್ತದೆ. ನಿರ್ದೇಶಕ ಯತೀಶ್‌ರ ಚಿಂತನಾ ಕ್ರಮ ನಾಟಕದ ಇಂತಹ ಕೆಲವು ನಿರ್ಣಾಯಕ ಹಂತಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅವರು ನಟರಿಗಾಗಲೀ ಅಥವಾ ರಂಗತಂತ್ರಜ್ಞರಿಗಾಗಲೀ ಯಾವುದನ್ನೂ ಕಠಿಣಗೊಳಿಸುವುದಿಲ್ಲ. ಸರಳ ಮತ್ತು ಸಹಜ ರಂಗ ಚಲನೆಗಳು, ನಿರಾಡಂಬರ ರಂಗ ವಿನ್ಯಾಸ ಹಾಗೂ ಮೂಲಭೂತವಾಗಿ ಅವಶ್ಯವಿರುವ ಸಾಮಾನ್ಯ ರಂಗಸಜ್ಜಿಕೆಯಿಂದ ನಾಟಕವನ್ನು ತೊಡಕಿಲ್ಲದೆ ಪ್ರೇಕ್ಷಕರಿಗೆ ತಲುಪಿಸುತ್ತಾರೆ. ತಂಡದ ನಟ-ನಟಯರ ಅಭಿನಯವೂ ನಾಟಕದ ಅಗತ್ಯಕ್ಕೆ ತಕ್ಕಷ್ಟೇ ಇದ್ದು ನಾಟಕ ಮುಗಿದ ಮೇಲೂ ನೆನಪಲ್ಲುಳಿಯುತ್ತಾರೆ. ಅಂತೆಯೇ ಸಂಗೀತ, ಬೆಳಕು, ರಂಗ ಸಜ್ಜಿಕೆಯನ್ನು ನಿರ್ವಹಿಸಿದ ತಂತ್ರಜ್ಞರ ಕೆಲಸವೂ ಶ್ಲಾಘನೀಯ.

ಹಸಿವು ಮತ್ತು ಕ್ರಾಂತಿ ಈ ನಾಟಕದ ತುಂಬೆಲ್ಲಾ ಹರಡಿಕೊಂಡಿರುವ ಎರಡು ಮುಖ್ಯ ವಿಷಯಗಳು. ತಳಸಮುದಾಯದ ಅತ್ಯಂತ ಬಡವ ಕುಂಭಕರಣನ ಪಾತ್ರಧಾರಿಗೆ ಹಸಿವು ನೀಗಿಕೊಳ್ಳಲು ಇರುವ ಒಂದೇ ಉಪಾಯವೆಂದರೆ ನಿದ್ರೆ. ಆತನ ತಂದೆ ಒಬ್ಬ ಕ್ರಾಂತಿಕಾರಿಯಾಗಿದ್ದವನು. ಪೆರಿಯಾರ್, ಬ್ಲಾಕ್ ಶರ್ಟ್ ಮೂವ್‌ಮೆಂಟ್ ಎಂದು ಕಡೆಗೆ ತನ್ನ ಜೀವವನ್ನೇ ಕಳೆದುಕೊಂಡವನು. ಕುಂಭಕರಣನ ಅವಳಿ ಸಹೋದರಿಯೂ ಸಮಾಜದ ಕ್ರೌರ್ಯಕ್ಕೆ ಬೇಸತ್ತು ಜೀವತೆಗೆದುಕೊಳ್ಳುವಾಕೆ. ಸಾಯುವ ಮೊದಲು ಆಕೆಯು ನಾಟಕದಲ್ಲಿ ಪಾತ್ರಮಾಡಿದವಳು. ಕುಂಭಕರಣನ ಅಮ್ಮ ಹಳ್ಳಿಯ ಬಡ ನಾಟಕ ಕಲಾವಿದೆ. ಹೀಗೆ ಬಡತನ ಹಸಿವಿನ ತೀವ್ರತೆಯಲ್ಲಿಯೂ ಕಲೆಯ ಹಪಾಹಪಿ ಈ ನಾಟಕ ಕುಟುಂಬದ ಪ್ರತೀ ಪಾತ್ರದಲ್ಲಿಯೂ ಕಾಣಸಿಗುವ ಸಾಮಾನ್ಯ ಅಂಶಗಳು. ಪುರಾಣದಲ್ಲಿಯೂ ವರ್ತಮಾನದಲ್ಲಿಯೂ ಒಟ್ಟಿಗೇ ಸಿಲುಕಿ ಪ್ರಭುತ್ವ ಬಯಸಿದಾಗ ಯಾವಾಗ, ಎಲ್ಲಿ ಹೇಗೆ ಬೇಕಾದರೂ ಅಪರಾಧಿಗಳಾಗುವ ಇಲ್ಲಿನ ಪಾತ್ರಗಳಿಗೆ ರಾಮಾಯಣವು, ವರ್ತಮಾನದ ಅಪಾಯಕ್ಕೆ ಬೇರನ್ನು ಹುಡುಕುವ ಪುರಾಣದ ಪಠ್ಯವಾಗಿ ಒದಗಿಬರುತ್ತದೆ. ಇಲ್ಲಿನ ಪಾತ್ರಗಳು ತಾವು ವರ್ತಮಾನದಲ್ಲಿದ್ದಾವೆಯೋ ಅಥವಾ ಪುರಾಣದಲ್ಲಿದ್ದಾವೆಯೋ ಎನ್ನುವ ಗೊಂದಲವನ್ನು ಸೃಷ್ಟಿಸಿ, ವರ್ತಮಾನ ಮತ್ತು ಭೂತ ಈ ಎರಡರಲ್ಲಿಯೂ ಪ್ರಭುತ್ವದ ಜೊತೆ ಮುಖಾಮುಖಿಗೊಂಡು, ಆ ಮೂಲಕ ಪ್ರಭುತ್ವದ ಪಾತ್ರಗಳಿಗೆ ತಾವು ಎದುರಾದದ್ದು ಭೂತದ ಪಾತ್ರವನ್ನೋ ಅಥವಾ ವರ್ತಮಾನದ ಪಾತ್ರವನ್ನೋ ಎಂದು ಗಲಿಬಿಲಿಗೊಳಿಸುವ ಸೋಜಿಗವನ್ನು ನಾಟಕ ತೋರಿಸುತ್ತದೆ. ಆದರೆ ಮರುಕ್ಷಣದಲ್ಲಿ ವರ್ತಮಾನ ಮತ್ತು ಭೂತವೆರಡರಲ್ಲಿಯೂ ಅಪರಾಧಿಗಳಾಗಿ ನಿಲ್ಲುವುದು ಮಾತ್ರ ಹಸಿದ ಬಡಜನರು ಎನ್ನುವ ಕಟುಸತ್ಯವನ್ನು ನಾಟಕ ಚಿತ್ರಿಸುತ್ತದೆ.

ನಟನೊಬ್ಬನ ಪಾತ್ರನಿರ್ವಹಣೆ ಮತ್ತು ಜೀವನ ನಿರ್ವಹಣೆಯ ರೂಪಾಂತರದ ಸಂದರ್ಭದಲ್ಲಿ ಆ ನಟನಲ್ಲಾಗುವ ಮಾನಸಿಕ ಪಲ್ಲಟಗಳು ಮತ್ತು ಸಾಮಾಜಿಕ ಬದಲಾವಣೆಗಳ ಅನ್ವೇಷಣೆಗಳನ್ನು ನಾಟಕ ನಡೆಸುತ್ತದೆ. ಹಾಗೆಯೇ ಒಬ್ಬ ಸಾಮಾನ್ಯ ಬಡ ಹೆಣ್ಣು ಹಾಗೂ ನಟಿಯನ್ನು ಸಮಾಜ ಗ್ರಹಿಸುವ ರೀತಿ ಮತ್ತು ಆಕೆಗೆ ಸಮಾಜ ಕೊಡುವ ಸಂಕಟಗಳನ್ನು ನಾಟಕ ದಾಖಲಿಸುತ್ತದೆ.

ಪಠ್ಯದ ಶೈಲಿ, ರಂಗ ಸಾಧ್ಯತೆಗಳು ಮತ್ತು ಅಭಿನಯದ ದೃಷ್ಟಿಯಿಂದ ಅತ್ಯಂತ ಕಷ್ಟದ ಈ ನಾಟಕವನ್ನು ಸೊಗಸಾಗಿ ರಂಗದ ಮೇಲೆ ತಂದು ಸುಗಮವಾಗಿ ಪ್ರೇಕ್ಷಕರಿಗೆ ತಲುಪಿಸುತ್ತಿರುವ ಈ ತಂಡದ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯು ಅಭಿನಂದನಾರ್ಹ.

 ಫೋಟೊ: ಅಪೂರ್ವಾನಂದ, ಮೈಸೂರು

Similar News

ಜಗದಗಲ
ಜಗ ದಗಲ