​ಅಮೆರಿಕದಲ್ಲಿ ಶೀತಗಾಳಿ: 1000ಕ್ಕೂ ಹೆಚ್ಚು ವಿಮಾನಗಳು ರದ್ದು

Update: 2023-01-31 10:23 GMT

ವಾಷಿಂಗ್ಟನ್: ಅಮೆರಿಕದಲ್ಲಿ ತೀವ್ರ ಶೀತಗಾಳಿ ಬೀಸುತ್ತಿದ್ದು, ಪ್ರತಿಕೂಲ ಹವಾಮಾನದಿಂದಾಗಿ ಸೋಮವಾರ ಸಾವಿರಕ್ಕೂ ಹೆಚ್ಚು ವಿಮಾನಗಳ ಯಾನ ರದ್ದುಪಡಿಲಾಗಿದೆ. ಈ ಪೈಕಿ ಅರ್ಧದಷ್ಟು ವಿಮಾನಗಳು ಸೌತ್‌ವೆಸ್ಟ್ ಏರ್‌ಲೈನ್ಸ್ ಕಂಪನಿಗೆ ಸೇರಿದವುಗಳು.

ಸಂಜೆ 6 ಗಂಟೆವರೆಗೆ ಸೋಮವಾರ ಒಟ್ಟು 1019 ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ ಎಂದು ವಿಮಾನ ಟ್ರ್ಯಾಕಿಂಗ್ ಸೇವಾ ಸಂಸ್ಥೆ ಫ್ಲೈಟ್‌ಅವೇರ್ ಪ್ರಕಟಿಸಿದೆ.
ಕಡಿಮೆ ವೆಚ್ಚದ ವಿಮಾನಯಾನ ಕಂಪನಿಯಾದ ಸೌತ್‌ವೆಸ್ಟ್ ಈ ತಿಂಗಳ ಆರಂಭದಲ್ಲಿ, ರಜಾಕಾಲದಲ್ಲಿ ಪ್ರತಿಕೂಲ ಹವಾಮಾನ ಹಾಗೂ ಹಳೆಯ ತಂತ್ರಜ್ಞಾನದ ಕಾರಣದಿಂದ 16700 ವಿಮಾನಗಳನ್ನು ರದ್ದುಪಡಿಸಿದ್ದಕ್ಕಾಗಿ ಅಮೆರಿಕ ಸರ್ಕಾರದಿಂದ ಟೀಕೆಗೆ ಗುರಿಯಾಗಿತ್ತು. 

ಕಂಪನಿ ಸೋಮವಾರದ ವೇಳಾಪಟ್ಟಿಯಲ್ಲಿ ಶೇಕಡ 12ರಷ್ಟು ವಿಮಾನಗಳ ಸಂಚಾರ ರದ್ದುಪಡಿಸಿದೆ. ಅಮೆರಿಕನ್ ಏರ್‌ಲೈನ್ಸ್ ಗ್ರೂಪ್ ಶೇಕಡ 6ರಷ್ಟು ಅಥವಾ 200 ವಿಮಾನಗಳ ಹಾರಾಟ ರದ್ದಪಡಿಸಿದೆ.

ಅಮೆರಿಕಕ್ಕೆ ಬರುವ ಹಾಗೂ ಅಮೆರಿಕದಿಂದ ಹೊರಡುವ ವಿಮಾನಗಳು ಸೇರಿ ಮಂಗಳವಾರದ ವೇಳಾಪಟ್ಟಿಯಲ್ಲಿರುವ 797 ವಿಮಾನಗಳನ್ನು ರದ್ದಪಡಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

Similar News