×
Ad

ಫೆ.10ರೊಳಗೆ ಹೆಚ್ಚುವರಿ ಕಮಿಷನ್ ನೀಡದಿದ್ದರೆ ಮುಷ್ಕರ: ಬೀಡಿ ಗುತ್ತಿಗೆದಾರರ ಸಂಘಟನೆ ಎಚ್ಚರಿಕೆ

Update: 2023-01-31 18:41 IST

ಮಂಗಳೂರು: ಬೀಡಿ ಗುತ್ತಿಗೆದಾರರಿಗೆ ಫೆ.10ರೊಳಗೆ ಹೆಚ್ಚುವರಿ ಕಮಿಷನ್ ನೀಡದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಹೂಡಲಾಗುವುದು ಎಂದು ಎಚ್‌ಎಂಎಸ್ ಮುಖಂಡ ಹಾಗೂ ಬೀಡಿ ಗುತ್ತಿಗೆದಾರರ ಒಕ್ಕೂಟದ ಕಾರ್ಯಾಧ್ಯಕ್ಷ ಮುಹಮ್ಮದ್ ರಫಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಸುಮಾರು 5 ಸಾವಿರ ಬೀಡಿ ಗುತ್ತಿಗೆದಾರರಿದ್ದಾರೆ. ಜಿಲ್ಲೆಯ ವಿವಿಧ ಮಾರ್ಕಿನ ಬೀಡಿ ಸಂಸ್ಥೆಯಿಂದ ಗುತ್ತಿಗೆದಾರರು ಎಲೆ ತಂಬಾಕು ಮತ್ತಿತರ ವಸ್ತುಗಳನ್ನು ಪಡೆದು ಬೀಡಿ ಕಾರ್ಮಿಕರಿಗೆ ವಿತರಿಸಿ ಬಳಿಕ ಅವರಿಂದ ತಯಾರಾದ ಬೀಡಿಯನ್ನು ಪಡೆದು ಆಯಾಯ ಕಂಪೆನಿಗಳಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆದಾರರ ಈ ದುಡಿಮೆಗೆ ಕಮಿಷನ್ ಮಾತ್ರ ನೀಡಲಾಗುತ್ತಿದ್ದು, ಬೇರೆ ಯಾವುದೇ ಸೌಲಭ್ಯವಿರುವುದಿಲ್ಲ. ಹಾಗಾಗಿ ಬೀಡಿ ಗುತ್ತಿಗೆದಾರರ ವಿವಿಧ ಸಂಘಟನೆಗಳು ಪ್ರತಿ ವರ್ಷ ಹೆಚ್ಚುವರಿ ಕಮಿಷನ್‌ಗಾಗಿ ಬೀಡಿ ತಯಾರಿ ಸಂಸ್ಥೆಗಳ ಆಡಳಿತ ವರ್ಗಕ್ಕೆ ಮನವಿ ಮಾಡುತ್ತಿದ್ದರೂ ಸ್ಪಂದನೆ ಸಿಗುತ್ತಿಲ್ಲ. ಹಾಗಾಗಿ ಫೆ.10ರೊಳಗೆ ಹೆಚ್ಚುವರಿ ಕಮಿಷನ್ ನೀಡದಿದ್ದರೆ ಮೂರು ಜಿಲ್ಲೆಯ ಬೀಡಿ ಗುತ್ತಿಗೆದಾರರು ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಹೂಡಲಾಗುವುದು ಎಂದರು.

60 ಬೀಡಿ ಡಿಪೋಗಳ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು, ಬೀಡಿ, ಎಲೆ, ತಂಬಾಕು, ಲೇಬಲ್ ಬೀಡಿ, ಸಾಗಾಟದ ವಾಹನಗಳನ್ನು ತಡೆಹಿಡಿಯಲಾಗುವುದು, ಮಂಗಳೂರು ಗಣೇಶ್ ಬೀಡಿ ಕಚೇರಿ ಮತ್ತು ಭಾರತ್ ಬೀಡಿ ಸಮೂಹ ಸಂಸ್ಥೆಯ ಎದುರು ಬೀಡಿ ಗುತ್ತಿಗೆದಾರರು ಕಾರ್ಮಿಕರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಮುಹಮ್ಮದ್ ರಫಿ ಎಚ್ಚರಿಸಿದರು.

ಜ.17ರಂದು ಮಾಲಕರ ಒಕ್ಕೂಟದ ಅಧ್ಯಕ್ಷರ ಅನುಮತಿಯಂತೆ ಜ.30ರಂದು ಜಂಟಿ ಸಭೆ ಕರೆದು ಹೋರಾಟ ನಡೆಸುವ ಕುರಿತು ಚರ್ಚಿಸಲಾಗಿತ್ತು. ಆದರೆ ಜ.30ರಂದು ಸಭೆ ನಡೆದಿಲ್ಲ. ಹಾಗಾಗಿ ಫೆ.10ರೊಳಗೆ ಮಾತುಕತೆಗೆ ನಡೆಸಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ಎಂ.ಸುರೇಶ್ಚಂದ್ರ ಶೆಟ್ಟಿ, ವಿವಿಧ ಬೀಡಿ ಗುತ್ತಿಗೆದಾರರ ಸಂಘಟನೆಗಳ ಅಧ್ಯಕ್ಷರಾದ ರವಿ ಉಡುಪಿ, ಹರೀಶ್ ಕೆ.ಎಸ್., ಕೃಷ್ಣಪ್ಪ ತೊಕ್ಕೊಟ್ಟು, ಗಂಗಾಧರ್ ಶೆಟ್ಟಿ, ಇಸ್ಮಾಯೀಲ್, ಅಬ್ದುಲ್ ಖಾದರ್ ಕೃಷ್ಣಾಪುರ, ಮುಸ್ತಫಾ ಕುತ್ತಾರ್ ಮತ್ತಿತರರು ಉಪಸ್ಥಿತರಿದ್ದರು.

Similar News