ತನ್ನಂತೆಯೇ ಇರುವಾಕೆಯನ್ನು ಹತ್ಯೆಗೈದು ತಾನು ಸತ್ತಂತೆ ನಾಟಕವಾಡಿದ ಮಹಿಳೆ

Update: 2023-01-31 16:45 GMT

ಬರ್ಲಿನ್, ಜ.31: ಸಾಮಾಜಿಕ ಮಾಧ್ಯಮದಲ್ಲಿ ಪರಿಚಯವಾದ ತದ್ರೂಪಿ ಮಹಿಳೆಯನ್ನು ಹತ್ಯೆ ಮಾಡಿ, ತಾನು ಸತ್ತಿರುವುದಾಗಿ ಜನರನ್ನು ನಂಬಿಸಲು ಪ್ರಯತ್ನಿಸಿದ್ದ ಜರ್ಮನ್-ಇರಾಕಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ವರ್ಷದ ಆಗಸ್ಟ್ ನಲ್ಲಿ ಬೊವರಿಯನ್ ನಗರದಲ್ಲಿ 23 ವರ್ಷದ ಮಹಿಳೆಯೊಬ್ಬಳ ಮೃತದೇಹ ಕಾರಿನಲ್ಲಿ ಪತ್ತೆಯಾಗಿದ್ದು ಮೃತದೇಹದ ಮೇಲೆ ಚೂರಿ ಇರಿತದ ಗಾಯಗಳಿದ್ದವು. ಆರಂಭದಲ್ಲಿ ಇದು ಜರ್ಮನ್-ಇರಾಕಿ ಮಹಿಳೆಯ ಮೃತದೇಹ ಎಂದು ಭಾವಿಸಲಾಗಿತ್ತು. ಆದರೆ ಪೊಲೀಸರ ತನಿಖೆಯ ಸಂದರ್ಭ ಜರ್ಮನ್-ಇರಾಕಿ ಮಹಿಳೆ ಜೀವಂತ ಇರುವ ಮಾಹಿತಿ ಲಭಿಸಿದೆ.

ಕೌಟುಂಬಿಕ ಸಮಸ್ಯೆಯಿಂದ ಪಾರಾಗಲು ಸತ್ತಂತೆ ನಾಟಕವಾಡಿದ್ದು, ತನ್ನ ತದ್ರೂಪಿ ಮಹಿಳೆಯನ್ನು ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡು, ತನ್ನ ಬಾಯ್ಫ್ರೆಂಡ್ ಜತೆ ಆಕೆಯ ಮನೆಗೆ ಹೋಗಿದ್ದೇನೆ. ಅಲ್ಲಿ ಆಕೆಯನ್ನು ಉಪಾಯದಿಂದ ಹೊರಗೆ ಕರೆದುಕೊಂಡು ಹೋಗಿ ಕಾರಿನಲ್ಲಿ ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದೆ ಎಂದು ಜರ್ಮನ್-ಇರಾಕಿ ಮಹಿಳೆ ಬಾಯ್ಬಿಟ್ಟಿದ್ದಾಳೆ. 

ಇದೀಗ ಪೊಲೀಸರು ಮಹಿಳೆ ಮತ್ತು ಅವಳ ಬಾಯ್‌ಫ್ರೆಂಡ್ ಅನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

Similar News