ವಿಶ್ವಸಂಸ್ಥೆಯಲ್ಲಿ 5 ಶಕ್ತದೇಶಗಳ ವೀಟೊ ಅಧಿಕಾರದ ಮರುವಿಮರ್ಶೆ ಸಾಧ್ಯತೆ‌

Update: 2023-01-31 17:00 GMT

ವಿಶ್ವಸಂಸ್ಥೆ, ಜ.31: ವಿಶ್ವಸಂಸ್ಥೆಯಲ್ಲಿ ಪ್ರಮುಖ ಸುಧಾರಣೆಯಾಗಬೇಕು ಎಂದು ಆಗ್ರಹಿಸುವ ನಿರ್ಣಯ ಅನುಮೋದನೆಗೊಂಡರೆ , ಪ್ರಮುಖ 5 ದೇಶಗಳ ವೀಟೊ ಅಧಿಕಾರದ ಮೇಲೆ ಪರಿಣಾಮವಾಗಬಹುದು ಎಂದು ವಿಶ್ವಸಂಸ್ಥೆ ಸಾಮಾನ್ಯಸಭೆಯ 77ನೇ ಅಧಿವೇಶನದ ಅಧ್ಯಕ್ಷ ಸಿಸಾಬ ಕೊರೋಸಿ ಹೇಳಿದ್ದಾರೆ.

ಅಮೆರಿಕ, ರಶ್ಯ, ಚೀನಾ, ಫ್ರಾನ್ಸ್ ಮತ್ತು ಬ್ರಿಟನ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವೀಟೊ ಅಧಿಕಾರ ಹೊಂದಿದ್ದು, ಭದ್ರತಾ ಮಂಡಳಿಯಲ್ಲಿ ಬಹುಮತದಿಂದ ಅನುಮೋದನೆಗೊಂಡ ನಿರ್ಣಯವನ್ನು ಈ ಅಧಿಕಾರ ಬಳಸಿ ತಡೆಹಿಡಿಯಬಹುದಾಗಿದೆ. ಈ ಅಧಿಕಾರವು ಭದ್ರತಾ ಮಂಡಳಿಯ ಅಧಿಕಾರವನ್ನು ಸೀಮಿತಗೊಳಿಸಿದೆ ಎಂಬ ವಾದವಿದೆ.

ಇದೀಗ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯ ದೇಶಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಮತ್ತು ವೀಟೊ ಅಧಿಕಾರವನ್ನು ನಿಯಂತ್ರಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ರಶ್ಯದ ಉದಾಹರಣೆ ನೀಡಿರುವ ಕೊರೋಸಿ, ಭದ್ರತಾ ಮಂಡಳಿಯ ಕಾಯಂ ಸದಸ್ಯ ದೇಶ ತನ್ನ ನೆರೆದೇಶದ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಇದನ್ನು ಖಂಡಿಸುವ ನಿರ್ಣಯ ಭದ್ರತಾ ಮಂಡಳಿಯಲ್ಲಿ ಮಂಡನೆಯಾದರೆ ಅದನ್ನು ತಡೆಹಿಡಿಯುವ ಅಧಿಕಾರ ಆ ದೇಶಕ್ಕೆ ಇದೆ. ಹೀಗಾದರೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಿಂದ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ. ಈ ವಿಷಯದ ಬಗ್ಗೆ ಚರ್ಚೆ ನಡೆಯಬೇಕು ಮತ್ತು ಸುಧಾರಣೆಯಾಗಬೇಕು ಎಂದವರು ಆಗ್ರಹಿಸಿದ್ದಾರೆ.

Similar News