ಸಂಸತ್ತಿನಲ್ಲಿ ಅದಾನಿ ಗ್ರೂಪ್ ನ ಷೇರು ಕುಸಿತದ ಕುರಿತು ಚರ್ಚೆಗೆ ಪ್ರತಿಪಕ್ಷಗಳಿಂದ ಆಗ್ರಹ, ಕಲಾಪಕ್ಕೆ ಅಡ್ಡಿ

Update: 2023-02-02 06:45 GMT

ಹೊಸದಿಲ್ಲಿ: ಸಾಮಾನ್ಯ ಕಲಾಪಗಳನ್ನು ಸ್ಥಗಿತಗೊಳಿಸಿ  ಅಮೆರಿಕದ ಶಾರ್ಟ್‌ ಸೆಲ್ಲರ್‌ ಹಿಂಡೆನ್‌ಬರ್ಗ್‌ ರಿಸರ್ಚ್‌ನಿಂದ ವಂಚನೆ ಆರೋಪ ಎದುರಿಸಿದ ನಂತರ  ಅದಾನಿ ಗ್ರೂಪ್‌ನ ಷೇರುಗಳ ನಿರಂತರ ಕುಸಿತದಿಂದ ಭಾರತೀಯ ಹೂಡಿಕೆದಾರರಿಗೆ ಆಗಿರುವ ಅಪಾಯದ ಕುರಿತು ಚರ್ಚಿಸಲು ವಿರೋಧ ಪಕ್ಷಗಳು ಗುರುವಾರ ಸಂಸತ್ತಿನಲ್ಲಿ ಆಗ್ರಹಿಸಿವೆ.

ಹಿಂಡೆನ್‌ಬರ್ಗ್ ವರದಿಯ ಮೇಲೆ ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಗದ್ದಲ ನಡೆಸಿದ ಕಾರಣ  ಲೋಕಸಭೆ ಹಾಗೂ ರಾಜ್ಯಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಬಜೆಟ್ ಅಧಿವೇಶನದಲ್ಲಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಜಂಟಿ ಕಾರ್ಯತಂತ್ರವನ್ನು ರೂಪಿಸಲು ಹಲವಾರು ವಿರೋಧ ಪಕ್ಷಗಳ ನಾಯಕರು ಬೆಳಿಗ್ಗೆ ಸಂಸತ್ತಿನ ಸಂಕೀರ್ಣದಲ್ಲಿ ಸಭೆ ನಡೆಸಿದರು ಹಾಗೂ  ಅದಾನಿ ಗ್ರೂಪ್ ವಿಷಯದ ಬಗ್ಗೆ ಚರ್ಚೆ ನಡೆಸಲು ನಿರ್ಧರಿಸಿದರು.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಹಾಗೂ  ಸಮಾಜವಾದಿ ಪಕ್ಷ, ಡಿಎಂಕೆ, ಜನತಾದಳ-ಯುನೈಟೆಡ್ ಹಾಗೂ  ಎಡಪಕ್ಷಗಳು ಸೇರಿದಂತೆ 13 ಪಕ್ಷಗಳ ನಾಯಕರು ಇದ್ದರು.

ರಾಜ್ಯಸಭೆಯಲ್ಲಿ ಅದಾನಿ ಷೇರು ಕುಸಿತದ ಕುರಿತು ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷ  ಖರ್ಗೆ, ಎಎಪಿ ನಾಯಕ ಸಂಜಯ್ ಸಿಂಗ್ ಹಾಗೂ  ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರ ಪಕ್ಷ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸಂಸದ ಕೆ.  ಕೇಶವ ರಾವ್ ಅವರು ಪ್ರಸ್ತಾವವನ್ನು ಸಲ್ಲಿಸಿದರು. 

ಅದಾನಿ ವಿವಾದ ಕುರಿತು ಸಂಸದೀಯ ಸಮಿತಿ ತನಿಖೆಗೆ ವಿರೋಧ ಪಕ್ಷಗಳು ಒತ್ತಾಯಿಸಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಲೋಕಸಭೆಯ ಕಾಂಗ್ರೆಸ್ ಸಚೇತಕ  ಮಾಣಿಕ್ಕಂ ಠಾಗೋರ್ ಕೆಳಮನೆಯಲ್ಲಿ ಇದೇ ರೀತಿಯ ಪ್ರಸ್ತಾವವನ್ನು ಸಲ್ಲಿಸಿದರು.

Similar News