ಕೆನಡಾ: 10,000 ಉಯಿಗರ್ ಮುಸ್ಲಿಮರ ಪುನರ್ವಸತಿಗೆ ಸಂಸದರ ಬೆಂಬಲ

Update: 2023-02-02 17:03 GMT

ಒಟ್ಟಾವ, ಫೆ.2: ಚೀನಾದ ಕ್ಸಿನ್ಜಿಯಾಂಗ್ ಪ್ರಾಂತದಿಂದ ಪಲಾಯನ ಮಾಡಿರುವ 10,000 ಉಯಿಗರ್ ಮುಸ್ಲಿಮರಿಗೆ ಪುನರ್ವಸತಿ ಕಲ್ಪಿಸುವ ನಿರ್ಣಯವನ್ನು ಕೆನಡಾದ ಸಂಸತ್ತು ಅವಿರೋಧವಾಗಿ ಅಂಗೀಕರಿಸಿದೆ.

‌ಲಿಬರಲ್ ಪಕ್ಷದ ಸಂಸದ ಸಮೀರ್ ಝುಬೇರಿ ಮಂಡಿಸಿದ ನಿರ್ಣಯದ ಪರ ಪ್ರಧಾನಿ ಜಸ್ಟಿನ್ ಟ್ರೂಡೊ ಮತ್ತವರ ಸಚಿವ ಸಂಪುಟದ ಸದಸ್ಯರ ಸಹಿತ 322 ಮತಗಳು ಚಲಾವಣೆಯಾದವು. ‘ಪ್ರಸ್ತುತ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವು ಉಯಿಗರ್ಗಳು ಹಾಗೂ ಇತರ ತುರ್ಕಿಕ್ ಮುಸ್ಲಿಮರ ವಿರುದ್ಧ ನರಮೇಧವನ್ನು ನಡೆಸುತ್ತಿರುವುದನ್ನು ಗುರುತಿಸಲಾಗಿದೆ’ ಎಂದು ನಿರ್ಣಯದ ಪಠ್ಯದಲ್ಲಿ ಉಲ್ಲೇಖಿಸಲಾಗಿದೆ. 

ಈ ನಿರ್ಣಯಕ್ಕೆ ಸರ್ವಾನುಮತದ ಬೆಂಬಲ ದೊರಕಿರುವುದು ಮಹತ್ವದ ವಿಷಯವಾಗಿದೆ. ಇದಕ್ಕೂ ಮುನ್ನ, 2021ರ ಫೆಬ್ರವರಿಯಲ್ಲಿ ಮಂಡಿಸಲಾಗಿದ್ದ ನಿರ್ಣಯ(ಕ್ಸಿನ್ಜಿಯಾಂಗ್ನಲ್ಲಿ ಚೀನಾದ ಉಪಕ್ರಮಗಳನ್ನು ನರಮೇಧ ಎಂದು ವಿಶ್ಲೇಷಿಸುವ ನಿರ್ಣಯ)ದ ಕುರಿತ ಮತದಾನದಿಂದ ಟ್ರೂಡೋ ಹಾಗೂ ಅವರ ಸಂಪುಟದ ಎಲ್ಲಾ ಸದಸ್ಯರೂ ದೂರ ಉಳಿದಿದ್ದರು.

ಇದಕ್ಕೂ ಮುನ್ನ, ಕ್ಸಿನ್ಜಿಯಾಂಗ್ ಪ್ರಾಂತದಲ್ಲಿ ಅಲ್ಪಸಂಖ್ಯಾತ ಉಯಿಗರ್ ಸಮುದಾಯದ ವಿರುದ್ಧದ ದೌರ್ಜನ್ಯಗಳನ್ನು ನರಮೇಧ ಎಂದು ಹೆಸರಿಸಿ, ಈ ವಲಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಿರುವ ಚೀನಾ ಸರಕಾರದ ಅಧಿಕಾರಿಗಳ ಮೇಲೆ ನಿರ್ಬಂಧ ವಿಧಿಸುವಂತೆ ಸಂಸತ್ತಿನ ಸ್ಥಾಯಿ ಸಮಿತಿ ಕೆನಡಾ ಸರಕಾರವನ್ನು ಆಗ್ರಹಿಸಿತ್ತು.

ಮ್ಯೂನಿಚ್ನಲ್ಲಿರುವ ‘ಜಾಗತಿಕ ಉಯಿಗರ್ ಮುಸ್ಲಿಮರ ಸಂಘಟನೆ’ಯ ಅಧ್ಯಕ್ಷ ಡೋಲ್ಕುನ್ ಐಸಾ, ವಾಷಿಂಗ್ಟನ್ನ ಉಯಿಗರ್ ಮಾನವ ಹಕ್ಕುಗಳ ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕ ಒಮರ್ ಕನಾಟ್, ಕೆನಡಾ ಮೂಲದ ‘ಉಯಿಗರ್ ಹಕ್ಕುಗಳ ಸಮರ್ಥನೆ ಸಂಸ್ಥೆ’ಯ ಕಾರ್ಯನಿರ್ವಾಹಕ ನಿರ್ದೇಶಕ ಮೆಹ್ಮತ್ ತೋಹಿತ್ ಕೆನಡಾದ ಸಂಸತ್ತಿನಲ್ಲಿ ನಿರ್ಣಯ ಅಂಗೀಕಾರಗೊಳ್ಳುವ ಸಂದರ್ಭ ಹಾಜರಿದ್ದರು. ‘ಇದೊಂದು ಐತಿಹಾಸಿಕ ಘಳಿಗೆಯಾಗಿದ್ದು ಚೀನಾ ಹಾಗೂ ಇತರ ದೇಶಗಳಿಗೆ ಬಲಿಷ್ಟ ಸಂದೇಶವನ್ನು ರವಾನಿಸಿದೆ’ ಎಂದು ತೋಹಿತ್ ಟ್ವೀಟ್ ಮಾಡಿದ್ದಾರೆ.

‘ಚೀನಾದಿಂದ ಪಲಾಯನ ಮಾಡಿರುವವರು ಚೀನಾಕ್ಕೆ ಮರಳುವಂತೆ ಒತ್ತಡ ಮತ್ತು ಬೆದರಿಕೆ ಎದುರಿಸುತ್ತಿದ್ದಾರೆ. ಮತ್ತು ಪಲಾಯನ ಮಾಡಿದವರು ಈಗ ಇರುವ ದೇಶದಲ್ಲಿ ಅವರನ್ನು ಬಂಧಿಸಿ ಗಡೀಪಾರು ಮಾಡುವಂತೆ ಚೀನಾದ ರಾಜತಾಂತ್ರಿಕ ಮತ್ತು ಆರ್ಥಿಕ ಒತ್ತಡ ಹೆಚ್ಚಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದ್ದು ತುರ್ತು ರಕ್ಷಣೆಯ ಅಗತ್ಯವಿರುವ 10,000 ಉಯಿಗರ್ ಹಾಗೂ ಇತರರ ಪುನರ್ವಸತಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಕೆನಡಾದ ವಲಸೆ, ನಿರಾಶ್ರಿತರು ಮತ್ತು ಪೌರತ್ವ ಇಲಾಖೆಗೆ ಕರೆ ನೀಡಲಾಗಿದೆ.

Similar News