ಸೋದೆ ಮಠದ ವಾದಿರಾಜ ಸ್ವಾಮಿಗಳ ಜೀವನಾಧಾರಿತ ಚಲನಚಿತ್ರ ಘೋಷಣೆ

Update: 2023-02-02 17:46 GMT

ಕುಂದಾಪುರ: ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶ್ರೀಸೋದೆ ವಾದಿರಾಜ ಮಠದ ಶ್ರೀವಾದಿರಾಜ ಸ್ವಾಮೀಜಿಗಳ ಜೀವನಾಧಾರಿತ ಚಲನಚಿತ್ರವೊಂದನ್ನು ಸೋದೆ ಮಠದ ಈಗಿನ ಮಠಾಧೀಶರಾದ ಶ್ರೀವಿಶ್ವ ವಲ್ಲಭ ತೀರ್ಥರ ಅನುಮತಿ ಹಾಗೂ ಆಶೀರ್ವಾದದೊಂದಿಗೆ ನಿರ್ಮಿಸುತ್ತಿರುವುದಾಗಿ ಚಿತ್ರದ ನಿರ್ದೇಶಕ ಹಯವದನ ಇಂದು ಶ್ರೀಗಳ ಸಮ್ಮುಖದಲ್ಲಿ ಘೋಷಿಸಿದರು.

ಶ್ರೀವಾದಿರಾಜ ಜಯಂತಿಯ ದಿನವಾದ ಇಂದು ಶ್ರೀವಾದಿರಾಜ ಸ್ವಾಮಿಗಳ ಜನ್ಮಸ್ಥಳವಾದ ಕುಂದಾಪುರ ತಾಲೂಕು ಹೂವಿನಕೆರೆಯ ಗೌರಿಗದ್ದೆಯಲ್ಲಿ ನಡೆದ ಸಮಾರಂಭದ ವೇಳೆ ಈ ಘೋಷಣೆ ಮಾಡಿದರು.

ಹೂವಿನಕೆರೆಯಲ್ಲಿರುವ ಶ್ರೀವಾದಿರಾಜ ಗುರುಸಾರ್ವಭೌಮರ ಮಠದ ಸಮೀಪ ಇರುವ ಗೌರಿಗದ್ದೆಯಲ್ಲಿ ನೂತನ ಶಿಲಾಮಯ ಮಂದಿರದ ಸಮರ್ಪಣೆ, ವಾದಿರಾಜಮೂರ್ತಿಯ ಬಿಂಬ ಪುನರ್‌ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಸಮಾರಂಭ ಇಂದು ನಡೆಯಿತು.

ಹೂವಿನಕೆರೆಯಲ್ಲಿ ವಾದಿರಾಜ ಗುರುಸಾರ್ವಭೌಮರ 542ನೇ ಜಯಂತಿ ಯನ್ನು ಇಂದು ಆಚರಿಸಲಾಗಿದ್ದು, ಈ ಸಂದರ್ಭದಲ್ಲಿ ವಾದಿರಾಜರ ಜೀವನಾಧಾರಿತ ಚಲನಚಿತ್ರವೊಂದನ್ನು ನಿರ್ಮಿಸುವ ಯೋಜನೆಗೆ ಸೋದೆಶ್ರೀಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು  ಚಲನಚಿತ್ರರಂಗದಲ್ಲಿ ಹಾಗೂ  ಕಿರುತೆರೆಯಲ್ಲಿ ಹಲವು ಯಶಸ್ವಿ ಧಾರಾವಾಹಿಗಳನ್ನು ನಿರ್ದೇಶಿಸಿರುವ ಹಯವದನ ಪ್ರಕಟಿಸಿದರು.

ಚಿತ್ರವು ವಾದಿರಾಜರ ಜನನ, ಬಾಲ್ಯ, ಸನ್ಯಾಸ ಸ್ವೀಕಾರ, ಸಮಾಜಕ್ಕೆ ಅವರ ಕೊಡುಗೆ ಹಾಗೂ ಸಂದೇಶಗಳನ್ನು ಜನಪ್ರಿಯ ಶೈಲಿಯಲ್ಲಿ ಹೇಳುವ ಸಂಕಲ್ಪ ಹೊಂದಿರುವುದಾಗಿ ತಿಳಿಸಿದರು.ಪವನ್ ಸಿಮಿಕೇರಿ ಚಿತ್ರದ ನಿರ್ಮಾಪಕರಾಗಿರುತ್ತಾರೆ.

ಒಟ್ಟು 120 ವರ್ಷ ಬದುಕಿದ್ದ ಇದರಲ್ಲಿ 113 ವರ್ಷಗಳನ್ನು ಸನ್ಯಾಸಿ ಹಾಗೂ ಶ್ರೀಕೃಷ್ಣನ ಅಷ್ಟಮಠಗಳಲ್ಲಿ ಶ್ರೀಸೋದೆ ಮಠದ ಮಠಾಧೀಶರಾಗಿ ಕಳೆದಿದ್ದ ವಾದಿರಾಜರು, 15-16ನೇ ಶತಮಾನದಲ್ಲಿ ಜೀವಿಸಿದ್ದವರು. ಚಿತ್ರದಲ್ಲಿ 15-16ನೇ ಶತಮಾನದ ಪರಿಸರ ಹಾಗೂ ಬದುಕನ್ನು ಮರುಸೃಷ್ಟಿಸ ಬೇಕಾಗಿರುವುದರಿಂದ ಇದೊಂದು ದೊಡ್ಡ ಬಜೆಟ್‌ನ ಚಿತ್ರವಾಗಿರುವುದು ಎಂದರು.

ವಾದಿರಾಜ ಚಿತ್ರ ಜಿ.ವಿ.ಅಯ್ಯರ್‌ರ ‘ಶಂಕರಾಚಾರ್ಯ’ ಹಾಗೂ ‘ಮಧ್ವಾಚಾರ್ಯ’ ಚಿತ್ರದಂತೆ ಕಲಾತ್ಮಕ ಚಿತ್ರವಾಗಿರುವುದಿಲ್ಲ. ಇದು ಬಹುಜನರು ನೋಡುವಂತ ಕಮರ್ಷಿಯಲ್ ದಾಟಿಯ ಚಿತ್ರವಾಗಿರುವುದು. ವಾದಿರಾಜರ ಲಕ್ಷ್ಮೀ ಶೋಭಾನೆ ಹಾಗೂ ಅವರ ಹಾಡುಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗುವುದು ಎಂದು ಹಯವದನ ವಿವರಿಸಿದರು.

ನಾಳೆಯಿಂದ ಚಿತ್ರದ ಸಿದ್ಧತೆ ಪ್ರಾರಂಭಗೊಳ್ಳುತ್ತದೆ. ಕತೆ-ಚಿತ್ರಕತೆ, ತಾರಾಗಣ ಸೇರಿದಂತೆ ಎಲ್ಲವನ್ನೂ ಇನ್ನು ಮುಂದೆ ಸ್ವಾಮೀಜಿಯೊಂದಿಗೆ ಚರ್ಚಿಸಿ ಅಂತಿಮಗೊಳಿಸುತ್ತೇವೆ. ಮಠದ ಪ್ರತಿನಿಧಿಯಾಗಿ ಸಾಹಿತಿ ವಿಕ್ರಮ ಹತ್ವಾರ್ ಇರುತ್ತಾರೆ. ಎಲ್ಲವನ್ನೂ ಅಂತಿಮಗೊಳಿಸಿದ ಬಳಿಕ ಸೆಪ್ಚಂಬರ್- ಅಕ್ಟೋಬರ್ ವೇಳೆಗೆ ಶೂಟಿಂಗ್ ಆರಂಭಗೊಳ್ಳಬಹುದು. ಶೂಟಿಂಗ್‌ಗೆ 4-5 ತಿಂಗಳು ಬೇಕಾಗಬಹುದು ಎಂದವರು ಹೇಳಿದರು. ವಾದಿರಾಜರು ಓಡಾಡಿದ, ಬದುಕಿದ್ದ ಸ್ಥಳಗಳಲ್ಲೇ ಚಿತ್ರೀಕರಣ ನಡೆಯಲಿದೆ ಎಂದರು.

ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಮಾತನಾಡಿ, ವಾದಿರಾಜರು 15-16ನೇ ಶತಮಾನದಲ್ಲಿ ಒಟ್ಟು 120 ವರ್ಷ ಬದುಕಿದ್ದ ಸಂತರು. ಅವರ ಬಹುಮುಖ ವ್ಯಕ್ತಿತ್ವ, ಬಹುಮುಖ ಪಾಂಡಿತ್ಯವನ್ನು ಮೂರುಗಂಟೆಗಳ ಚಿತ್ರದಲ್ಲಿ ಹಿಡಿದಿಡುವುದು ಸುಲಭವಲ್ಲ. ಆದರೂ ಅವರ ವ್ಯಕ್ತಿತ್ವಕ್ಕೆ ಯಾವುದೇ ಚ್ಯುತಿ ಬರದಂತೆ, ಯಾವುದೇ ವಿಕೃತಿ ಸಂಭವಿಸದಂತೆ ಚಿತ್ರ ಅವರ ಬದುಕು, ಅವರು ನೀಡಿದ ಸಂದೇಶ ಮೂಡಿಬರಬೇಕಿದೆ  ಎಂದರು.

Similar News