ಜನಸೇವಾ ಟ್ರಸ್ಟ್‌ಗೆ 15 ಎಕರೆ ಹೆಚ್ಚುವರಿ ಜಮೀನು ಮಂಜೂರಾತಿಗೆ ನಿರ್ದೇಶನ

Update: 2023-02-03 04:34 GMT

ಬೆಂಗಳೂರು: ಸಂಘಪರಿವಾರದ ಅಂಗ ಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್ ಈಗಾಗಲೇ ರಾಜ್ಯ ಸರಕಾರದಿಂದ 25 ಎಕರೆ ವಿಸ್ತೀರ್ಣ ಗೋಮಾಳವನ್ನು ಮಂಜೂರು ಮಾಡಿಸಿಕೊಂಡಿದ್ದರೂ ಪುನಃ 15 ಎಕರೆ ಹೆಚ್ಚುವರಿ ಜಮೀನಿಗೆ ಬೇಡಿಕೆ ಇಟ್ಟಿರುವುದು ಇದೀಗ ಬಹಿರಂಗವಾಗಿದೆ.

ಜನಸೇವಾ ಟ್ರಸ್ಟ್ ಈಗಾಗಲೇ ಚನ್ನೇನಹಳ್ಳಿಯಲ್ಲಿ ಅಂದಾಜು 80 ಕೋಟಿ ರೂ. ಬೆಲೆ ಬಾಳುವ 40.07 ಎಕರೆ ಜಮೀನು ಹೊಂದಿದ್ದರೂ ಚನ್ನೇನಹಳ್ಳಿಗೆ ಹೊಂದಿಕೊಂಡಿರುವ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯಲ್ಲಿಯೂ 25 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಮಂಜೂರು ಮಾಡಿರುವ ಬೆನ್ನಲ್ಲೇ ಹೆಚ್ಚುವರಿಯಾಗಿ 15 ಎಕರೆ ಜಮೀನು ಮಂಜೂರಾತಿಗಾಗಿ ನಿರ್ದೇಶನ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯ ಸರ್ವೇ ನಂಬರ್ 89ರಲ್ಲಿದ್ದ ಒಟ್ಟು 40.20 ಎಕರೆ ಪೈಕಿ 25 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಜನಸೇವಾ ಟ್ರಸ್ಟ್‌ಗೆ 2022ರ ಸೆ. 13ರಂದು ಮಂಜೂರು ಮಾಡಿ ಆದೇಶ ಹೊರಡಿಸಿತ್ತು.

ಇದಾಗಿ 9 ದಿನಗಳ ಅಂತರದಲ್ಲೇ ಟ್ರಸ್ಟ್‌ನ ಅ ಸಾ ನಿರ್ಮಲ್ ಕುಮಾರ್ ಎಂಬವರು 2022ರ ಸೆ.28ರಂದು ಪುನಃ 15 ಎಕರೆ ಜಮೀನು ಮಂಜೂರಾತಿಗಾಗಿ ಸರಕಾರಕ್ಕೆ ಸಲ್ಲಿಸಿದ್ದ ಕೋರಿಕೆ ಆಧರಿಸಿ ಕಂದಾಯ ಇಲಾಖೆಯ ಸರಕಾರದ ಕಾರ್ಯದರ್ಶಿಯು 2023ರ ಜನವರಿ 25ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು "the-file.in"ಗೆ ಲಭ್ಯವಾಗಿದೆ.

‘ಜನಸೇವಾ ಟ್ರಸ್ಟ್‌ಗೆ 15 ಎಕರೆ ಜಮೀನನ್ನು ಮಾರ್ಗಸೂಚಿ ಮೌಲ್ಯದ ಶೇ. 5ರಷ್ಟು ನಿಗದಿಪಡಿಸಿ ಮಂಜೂರು ಮಾಡಬೇಕು ಎಂದು ಕೋರಿರುತ್ತಾರೆ. ಈ ಪತ್ರದಲ್ಲಿ ತಿಳಿಸಿರುವ ಅಂಶಗಳನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರಕಾರದ ಕಾರ್ಯದರ್ಶಿ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ನಿರ್ದೇಶಿಸಿದ್ದಾರೆ.

ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯ ಸರ್ವೇ ನಂಬರ್ 89ರಲ್ಲಿದ್ದ ಒಟ್ಟು 40.20 ಎಕರೆ ಪೈಕಿ 25 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿನಲ್ಲಿ ಸುಮಾರು 40ಕ್ಕೂ ಹೆಚ್ಚಿನ ಭೂ ಭಾಗದಲ್ಲಿ ಕಲ್ಲು ಬಂಡೆಗಳಿವೆ. ಎತ್ತರ ಮತ್ತು ತಗ್ಗು ಪ್ರದೇಶದಿಂದ ಕೂಡಿದೆ. ಉದ್ದೇಶಿತ ಕಟ್ಟಡಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಅಪಾರ ಪ್ರಮಾಣದ ಹಣ ಭರಿಸಬೇಕಾಗುತ್ತದೆ. ಉದ್ದೇಶಿತ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತರಲು ಈಗ ಮಂಜೂರಾದ 25 ಎಕರೆ ಭೂಮಿಯ ಜತೆಗೆ ಇದೇ ಸರ್ವೇ ನಂಬರ್‌ನಲ್ಲಿರುವ ಇನ್ನೂ 15 ಎಕರೆ ಭೂಮಿಯ ಅವಶ್ಯಕತೆ ಇದೆ ಎಂದು ಜನಸೇವಾ ಟ್ರಸ್ಟ್‌ನ ಅ ಸ ನಿರ್ಮಲ್ ಕುಮಾರ್ ಅವರು ಸರಕಾರಕ್ಕೆ ಸಲ್ಲಿಸಿರುವ ಕೋರಿಕೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 ಕುರುಬರಹಳ್ಳಿಯಲ್ಲಿ ಪ್ರತೀ ಎಕರೆಗೆ ಮಾರುಕಟ್ಟೆ ಬೆಲೆಯು 2 ಕೋಟಿ ರೂ. ಇದೆ. ಇದರ ಪ್ರಕಾರ 25 ಎಕರೆಗೆ 50 ಕೋಟಿ ರೂ. ಬೆಲೆ ಇದೆ. ಸರಕಾರವು ಆದೇಶದಲ್ಲಿ ನಮೂದಿಸಿರುವ ಮಾರ್ಗಸೂಚಿ ದರದ ಪ್ರಕಾರ ಪ್ರತಿ ಎಕರೆಗೆ 1.20 ಕೋಟಿ ರೂ. ಇದೆ. ಆದರೆ ಜನಸೇವಾ ಟ್ರಸ್ಟ್‌ಗೆ ಮಾರ್ಗಸೂಚಿ ಮೌಲ್ಯದ ಶೇ.25ರಷ್ಟು ದರದಲ್ಲಿ 25 ಎಕರೆಯನ್ನು ಈಗಾಗಲೇ  ಮಂಜೂರು ಮಾಡಿರುವ ಸರಕಾರವು  ಬೊಕ್ಕಸಕ್ಕೆ 20 ಕೋಟಿ ರೂ. ನಷ್ಟವನ್ನು ಹೊತ್ತುಕೊಂಡಿದೆ.

ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿರಿಸಿದ್ದ ಜಮೀನು

ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕರೆ ಹೋಬಳಿಯ ಕುರುಬರಹಳ್ಳಿ ಗ್ರಾಮದ ಸರ್ವೇ ನಂ.89ರಲ್ಲಿ ಲಭ್ಯವಿರುವ ಜಮೀನನ್ನು ಜನಸೇವಾ ಟ್ರಸ್ಟ್‌ಗೆ ಮಂಜೂರು ಮಾಡುವ ಪ್ರಸ್ತಾವವನ್ನು ಪರಿಶೀಲಿಸಿದ್ದ ಕಂದಾಯ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಸಿ ಬಲರಾಮ್ ಅವರು ‘ಈ ಭೂಮಿಯು ಅತಿ ಅಮೂಲ್ಯವಾದ ಭೂಮಿಯಾಗಿರುವುದರಿಂದ ಈ ಸಂಸ್ಥೆಗೆ ನೀಡುವುದು ಸರಿಯಲ್ಲ. ಆದ್ದರಿಂದ ಈ ಪ್ರಸ್ತಾವವನ್ನು ತಿರಸ್ಕರಿಸಿದೆ ಎಂದು ತಿಳಿಸಲು ನಿರ್ದೇಶಿತನಾಗಿದ್ದೇನೆ’ ಎಂದು 2022ರ ಮೇ 4ರಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗೆ ಪತ್ರವನ್ನೂ ಬರೆದಿದ್ದರು,

ಈ ಸರ್ವೇ ನಂಬರ್‌ನಲ್ಲಿರುವ ಜಮೀನನ್ನು ಆಶ್ರಯ ಯೋಜನೆ ಮತ್ತು ಶಾಶ್ವತ ಪುನರ್ ವಸತಿ ಉದ್ದೇಶವೂ ಸೇರಿದಂತೆ ಇನ್ನಿತರ ಸಾರ್ವಜನಿಕ ಉದ್ದೇಶಗಳಿಗೆಂದು ಮೀಸಲಿರಿಸಿದೆ. ಆದರೂ ಸರಕಾರ 40 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿನ ಪೈಕಿ 25 ಎಕರೆ ವಿಸ್ತೀರ್ಣದ ಗೋಮಾಳ  ಜಮೀನನ್ನು ಮಂಜೂರು ಮಾಡಿರುವುದನ್ನು ಸ್ಮರಿಸಬಹುದು.

Similar News