×
Ad

ಮೊಳಕಾಲ್ಮೂರಿನಲ್ಲಿ ಈ ಬಾರಿ ಮಂಡಿಯೂರುವವರು ಯಾರು?

ದಿ ಬಿಗ್ ಫೈಟ್

Update: 2023-02-03 11:30 IST

ಅಭಿವೃದ್ಧಿಯನ್ನೇ ಕಾಣದ ಮೊಳಕಾಲ್ಮೂರಿನಲ್ಲಿ ಕೈಹಿಡಿಯುವುದೇ ಜಾತಿಬಲ? ಮತ್ತೆ ಗೆಲ್ಲುವ ವಿಶ್ವಾಸದಲ್ಲಿರುವ ಶ್ರೀರಾಮುಲುಗೆ ಎದುರಾಳಿಗಳು ಯಾರು? ಗೆದ್ದ ಮೇಲೆ ಅಲಕ್ಷ ತೋರಿದ್ದಕ್ಕೆ ತಿರುಗಿಬೀಳಲಿದ್ದಾರೆಯೇ ಮತದಾರರು? ಸ್ಥಳೀಯ ಅಭ್ಯರ್ಥಿಗೆ ವರವಾಗಲಿದೆಯೇ ಶ್ರೀರಾಮುಲು ಮೇಲಿನ ಜನರ ಸಿಟ್ಟು?

ಬಿ. ಶ್ರೀರಾಮುಲು. 

ಬಿಜೆಪಿ ನಾಯಕ. ಮೊಳಕಾಲ್ಮೂರು ಕ್ಷೇತ್ರದ ಹಾಲಿ ಶಾಸಕ. ಬೊಮ್ಮಾಯಿ ಸಂಪುಟದಲ್ಲಿ ಸಚಿವರೂ ಹೌದು. 1999ರ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಮೊದಲು ಸ್ಪರ್ಧಿಸಿ ಸೋತ ಶ್ರೀರಾಮುಲು ಆನಂತರ ಬಳ್ಳಾರಿಯಲ್ಲಿ, ಪಕ್ಕದ ಮೊಳಕಾಲ್ಮೂರಿನಲ್ಲಿ ಸಾಧಿಸಿದ ಹಿಡಿತ ದೊಡ್ಡದು. ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಆಪ್ತ ಸ್ನೇಹಿತರಾಗಿದ್ದ ಅವರು ಸದ್ಯ ದೂರವಾಗಿದ್ದಾರೆ ಎಂಬ ಗುಸುಗುಸು ಇದೆ. ರೆಡ್ಡಿ ಹೊಸ ಪಕ್ಷ ಸ್ಥಾಪಿಸಿದ್ದರೂ ಶ್ರೀರಾಮುಲು ಬಿಜೆಪಿಯಲ್ಲಿಯೇ ಇದ್ದಾರೆ. ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂಬುದಕ್ಕೂ ಇದೊಂದು ಉದಾಹರಣೆಯಂತೆ ಕಾಣಿಸುತ್ತಿದೆ.

ಸೀರೆಗೂ, ಬಿಸಿಲಿಗೂ ಹೆಸರಾದ ಮೊಳಕಾಲ್ಮ್ಮೂರು ಬ್ರಿಟಿಷರು ಮಂಡಿಯೂರುವಂತೆ ಮಾಡಿದ ನೆಲ. ಕಲ್ಲಿನ ಈ ನೆಲದಲ್ಲಿ ಮೂಲನಿವಾಸಿಗಳ ಜೊತೆಗೆ ಯುದ್ಧಕ್ಕಿಳಿದ ಬ್ರಿಟಿಷರು ಸೋಲು ಅನುಭವಿಸಿ ಮೊಣಕಾಲು ಊರಿದ್ದರು ಎಂಬುದು ಐತಿಹ್ಯ. ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗಡಿಯಲ್ಲಿರುವ ಈ ಕ್ಷೇತ್ರ ಚಿತ್ರದುರ್ಗ ಜಿಲ್ಲೆಗೆ ಸೇರಿದ್ದು. ಉಪೇಕ್ಷೆಗೆ ಒಳಗಾಗುತ್ತಲೇ ಬಂದಿದ್ದರೂ ತನ್ನ ಐತಿಹಾಸಿಕ ಹಿರಿಮೆಯ ಮೂಲಕವೇ ಗಮನ ಸೆಳೆಯುತ್ತಲೂ ಬಂದಿದೆ. ಇಲ್ಲಿ ಸಿದ್ಧವಾಗುವ ರೇಷ್ಮೆ ಸೀರೆಗಳಿಗೆ ವಿವಿಧೆಡೆಯಿಂದ ಬೇಡಿಕೆ ಇದೆ. ಹಾಗೆಯೇ ಸಾಮ್ರಾಟ್ ಅಶೋಕನ ಆಳ್ವಿಕೆಯ ವಿಸ್ತಾರವನ್ನು ದಾಖಲಿಸುವ ಕ್ರಿಸ್ತಶಕ 3ನೇ ಶತಮಾನದ ಎರಡು ಶಾಸನಗಳು (ರಾಮಗಿರಿ, ಬ್ರಹ್ಮಗಿರಿ) ಇಲ್ಲಿವೆ. ಇದು ಅವಧೂತರು ಓಡಾಡಿದ ನಾಡು, ರಾಮನಾಮ ಜಪಿಸುವವರ ನೆಲೆವೀಡು ಹೌದು! ಆದರೂ ಅಭಿವೃದ್ಧಿಯ ವಿಷಯದಲ್ಲಿ ಹಿಂದುಳಿದ ಕ್ಷೇತ್ರವಾಗಿಯೇ ಉಳಿದಿದೆ!

ಕಾಂಗ್ರೆಸ್ ಮುತ್ಸದ್ದಿ ರಾಜಕಾರಣಿ ಎಸ್. ನಿಜಲಿಂಗಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೇರಿದ್ದು ಇದೇ ಕ್ಷೇತ್ರದಿಂದ. ಪಿಎಸ್‌ಪಿಯ ಅಭ್ಯರ್ಥಿ ಜಿ.ವಿ. ಆಂಜನೇಯ ಅವರನ್ನು 5,409 ಮತಗಳ ಅಂತರದಲ್ಲಿ ಸೋಲಿಸಿದ್ದರು. ಮತ್ತೋರ್ವ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಪ್ರಜಾ ಸೋಷಿಯಲ್ ಪಕ್ಷದ ಅಭ್ಯರ್ಥಿಯಾಗಿ 1967ರಲ್ಲಿ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಮಂಚೇಗೌಡರು ಜಯ ಗಳಿಸಿದ್ದರು. ಜನತಾದಳ ಹಾಗೂ ಕಾಂಗ್ರೆಸ್ ಪಕ್ಷದಲ್ಲಿದ್ದ ಆರ್.ಎಲ್. ಜಾಲಪ್ಪಈ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಜಯ ಗಳಿಸಿದ್ದರು.

ಜಾತಿಯೇ ಶ್ರೀರಾಮುಲುಗೆ ಶ್ರೀರಕ್ಷೆ

ನಾಯಕ ಜನಾಂಗದ ಪ್ರಭಾವಿ ಮುಖಂಡರಾಗಿ ಬೆಳೆದಿರುವ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಲ್ಲಿ ಜಯ ಕಾಣುತ್ತಿದ್ದಾರೆ. ಉಳಿದ ಪಕ್ಷದ ನಾಯಕರೂ ಇದೇ ಸಮುದಾಯದ ಹಿನ್ನೆಲೆಯವರೇ ಆದರೂ, ಶ್ರೀರಾಮುಲು ತಮ್ಮ ವರ್ಚಸ್ಸು, ಪ್ರಚಾರಗಳ ಮೂಲಕ ಜನರ ಮನಸ್ಸು ಸೆಳೆದಿದ್ದಾರೆ. ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವೂ ಶ್ರೀರಾಮುಲು ಅವರಿಗೆ ಕೈ ಹಿಡಿಯುವ ವಿಶ್ವಾಸ ಹುಟ್ಟಿಸಿದೆ. ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಿರುವ ಕ್ಷೇತ್ರಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ರಣತಂತ್ರ ಹೂಡುತ್ತಿರುವ ಬಿಜೆಪಿ ಶ್ರೀರಾಮುಲು ಅವರಿಗೆ ಈ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ಮಾಡಿಕೊಡುವ ಸಾಧ್ಯತೆಯೂ ಇದೆ. ಇತ್ತ ಶ್ರೀರಾಮುಲು ಕೂಡ ವಾಲ್ಮೀಕಿ ಮಹರ್ಷಿ ಪ್ರತಿಮೆ ಅನಾವರಣ, ಎಸ್‌ಟಿ ಸಮಾವೇಶಗಳ ಮೂಲಕ ತಮ್ಮ ಸಮುದಾಯವನ್ನು ಓಲೈಸುತ್ತಾ ಬಂದಿದ್ದಾರೆ.

ಕಾಂಗ್ರೆಸ್, ಜನತಾದಳದ ತೀವ್ರ ಪ್ರಭಾವವಿದ್ದ ಮೊಳಕಾಲ್ಮೂರಿನಲ್ಲಿ 2018ರಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ್ದು ಶ್ರೀರಾಮುಲು. ವಾಲ್ಮೀಕಿ ಸಮುದಾಯದ ಅತಿ ಹೆಚ್ಚು ಮತದಾರರಿರುವ ಮೊಳಕಾಲ್ಮೂರಿನಲ್ಲಿ ತಮ್ಮ ರಾಜಕೀಯ ಅನುಭವವನ್ನು ಬಳಸಿ ಗೆಲುವು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮೂಲತಃ ಬಳ್ಳಾರಿ ಜಿಲ್ಲೆಯವರಾದ ಶ್ರೀರಾಮುಲು, ಬಳ್ಳಾರಿಗೆ ಅಂಟಿಕೊಂಡೇ ಇರುವ ಮೊಳಕಾಲ್ಮೂರಿನಲ್ಲೂ ತಮ್ಮ ಪ್ರಭಾವ ಹೊಂದಿದ್ದರು ಎಂಬುದಕ್ಕೆ ಇದು ಸಾಕ್ಷಿ.

2018ರಲ್ಲಿ ಶ್ರೀರಾಮುಲು ಮೊಳಕಾಲ್ಮೂರು ಮಾತ್ರವಲ್ಲದೆ ಬಾದಾಮಿಯಿಂದಲೂ ಸ್ಪರ್ಧಿಸಿದ್ದರು. ಬಾದಾಮಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಾಳಿಯಾಗಿದ್ದರು. ಕಡೆಗೆ ಸಿದ್ದರಾಮಯ್ಯ ಎದುರು ಸೋಲನುಭವಿಸಿದಾಗ ಶ್ರೀರಾಮುಲು ಕೈಹಿಡಿದದ್ದು ಮೊಳಕಾಲ್ಮೂರು. ಈ ಬಾರಿಯೂ ಇದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಆದರೆ ಪಕ್ಷ ಇನ್ನೂ ಖಚಿತಪಡಿಸ ಬೇಕಿದೆ. ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ 2013ರಲ್ಲಿ ಬಿಜೆಪಿಯಿಂದ ದೂರವಾಗಿ ಬಡವ, ಶ್ರಮಿಕ, ರೈತ ಕಾಂಗ್ರೆಸ್ ಪಕ್ಷ ಕಟ್ಟಿದ್ದ ಶ್ರೀರಾಮುಲು ಈ ಕ್ಷೇತ್ರದಿಂದ ಮಾಜಿ ಶಾಸಕ, ಸ್ಥಳೀಯ ಮುಖಂಡರೂ ಹಾಗೂ ಪ್ರಭಾವಿಯೂ ಆದ ಎಸ್. ತಿಪ್ಪೇಸ್ವಾಮಿಯವರಿಗೆ ಟಿಕೆಟ್ ನೀಡಿದ್ದರು. ತಿಪ್ಪೇಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಗೋಪಾಲಕೃಷ್ಣ ಅವರನ್ನು 7,169 ಮತಗಳ ಅಂತರದಿಂದ ಸೋಲಿಸಿದ್ದರು. ಆದರೆ 2018ರಲ್ಲಿ ಬಿಎಸ್‌ಆರ್ ಕಾಂಗ್ರೆಸ್‌ಅನ್ನು ಬಿಜೆಪಿಯೊಂದಿಗೆ ವಿಲೀನ ಮಾಡಿದ ಶ್ರೀರಾಮುಲು ಸ್ವತಃ ಮೊಳಕಾಲ್ಮೂರು ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು.

ಜೋರಾಗಿಯೇ ಇರಲಿದೆ ಕದನ

ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಈ ವಿಧಾನಸಭಾ ಕ್ಷೇತ್ರ ಈ ಬಾರಿ ಅತಿ ಕುತೂಹಲಕ್ಕೆ ಕಾರಣವಾಗಿರುವ ಕ್ಷೇತ್ರಗಳಲ್ಲಿ ಒಂದು. ಕಳೆದ ಚುನಾವಣೆಯಲ್ಲಿಯೇ ಶ್ರೀರಾಮುಲು ವಿರುದ್ಧ ಬಂಡಾಯ ಸಾರಿದ ತಿಪ್ಪೇಸ್ವಾಮಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತರು. ಮೂರು ದಶಕಕ್ಕೂ ಹೆಚ್ಚು ಕಾಲದ ಸ್ಥಳೀಯ ರಾಜಕಾರಣದಲ್ಲಿ ಹೆಸರು ಮಾಡಿರುವ ತಿಪ್ಪೇಸ್ವಾಮಿ ಈ ಬಾರಿ ಶ್ರೀರಾಮುಲು ಅವರಿಗೆ ಸ್ಪರ್ಧೆ ಒಡ್ಡಲು ತೊಡೆ ತಟ್ಟಿದ್ದಾರೆ. ಶ್ರೀರಾಮುಲು ವಾಲ್ಮೀಕಿ ಸಮುದಾಯದವರಲ್ಲವೆಂದೂ, ಮರಳು ದಂಧೆ, ಕ್ರಷರ್ ನಡೆಸುತ್ತಿದ್ದಾರೆಂದೂ ಗಂಭೀರ ಆರೋಪ ಮಾಡುತ್ತಾ ಬಂದಿರುವ ತಿಪ್ಪೇಸ್ವಾಮಿ, ಚುನಾವಣಾ ಕಣದಲ್ಲಿ ಮುಖಾಮುಖಿಯಾಗುವುದಕ್ಕೆ ನಿಶ್ಚಯಿಸಿದ್ದಾರೆ. ಈ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.

ಕಾಂಗ್ರೆಸ್‌ನ ಹಿರಿಯ ಮುಖಂಡ ವಿ.ಎಸ್. ಉಗ್ರಪ್ಪಕೂಡ ಇದೇ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಉತ್ಸುಕರಾಗಿದ್ದಾರೆ. ಡಾ. ಯೋಗೇಶ್ ಬಾಬು ಕೂಡ ಕಾಂಗ್ರೆಸ್ ನಾಯಕರ ಗಮನ ಸೆಳೆಯುವ ಕಸರತ್ತು ನಡೆಸಿದ್ದಾರೆ.

ಜೆಡಿಯುನಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ನಟ ಶಶಿಕುಮಾರ್, ಸಂಸದರಾಗಿದ್ದವರು. ಈ ಬಾರಿ ಮೊಳಕಾಲ್ಮೂರು ಅಥವಾ ಚಳ್ಳಕೆರೆಯಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದಾರೆ. ಇಷ್ಟೇ ಅಲ್ಲ, ಮಾಜಿ ಸಂಸದ ಎನ್.ವೈ. ಹನುಮಂತಪ್ಪನವರ ಪುತ್ರ ಸುಜಯ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಓಬಳೇಶ್, ಜಿ.ಪಿ. ಜಯಪಾಲಯ್ಯ, ಪ್ರಕಾಶ್ ಮ್ಯಾಸನಾಯಕ, ಭಕ್ತರಾಮೇಗೌಡ, ಕೂಡ ಆಕಾಂಕ್ಷಿಗಳು.

ರಾಮುಲು ಬಗ್ಗೆ ಸಿಟ್ಟು; ಸ್ಥಳೀಯ ಅಭ್ಯರ್ಥಿಯತ್ತ ಒಲವು

2018ರಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ತಮ್ಮ ಪ್ರಚಾರದ ಮೂಲಕ ಕ್ಷೇತ್ರದ ಜನತೆ ವಿಶ್ವಾಸ ಗಳಿಸಿ ಶ್ರೀರಾಮುಲು ಶಾಸಕರಾಗಿ, ಮಂತ್ರಿಯೂ ಆದರು. ಅಧಿಕಾರ ಹಿಡಿಯುವಾಗ ನೀಡಿದ್ದ ಭರವಸೆಯಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂಬುದು ಕ್ಷೇತ್ರದ ಮತದಾರರ ದೂರು. ಜಾತಿ ಸಮಾವೇಶಗಳು, ಕಾರ್ಯಕ್ರಮಗಳ ಮೂಲಕ ತಮ್ಮ ವರ್ಚಸ್ಸು ಕಾಪಾಡಿಕೊಳ್ಳುತ್ತಾ ಬಂದಿರುವ ಶ್ರೀರಾಮುಲು ಅಭಿವೃದ್ಧಿ ಕೆಲಸಗಳ ವಿಷಯದಲ್ಲಿ ಅಷ್ಟೇ ಉತ್ಸಾಹ ತೋರಿಲ್ಲ ಎಂಬುದು ಅಸಮಾಧಾನಕ್ಕೆ ಕಾರಣವಾಗಿದೆ. ತುಂಗಾ ಮೇಲ್ದಂಡೆ, ತುಂಗಭದ್ರಾ ಹಿನ್ನೀರಿನಿಂದ ನೀರು ತರಿಸುವ ಭರವಸೆ ಮರೀಚಿಕೆಯಾಗಿಯೇ ಉಳಿದಿದೆ. ಶ್ರೀರಾಮುಲು ಮತ್ತೆ ಸ್ಪರ್ಧಿಸಿ, ಗೆದ್ದರೆ, ಅವರನ್ನು ಹುಡುಕಿಕೊಂಡು ಬೆಂಗಳೂರಿಗೆ ಹೋಗಬೇಕೆ ಎಂಬ ಮಾತು ಕ್ಷೇತ್ರದಲ್ಲೀಗ ಸಾಮಾನ್ಯವಾಗಿ ಹೋಗಿದೆ. ಹಾಗಾಗಿ ಸ್ಥಳೀಯ ಅಭ್ಯರ್ಥಿಯನ್ನು ಆಯ್ಕೆ ಮಾಡುವುದೇ ತಮಗಿರುವ ಸೂಕ್ತ ಆಯ್ಕೆ ಎಂಬ ಚರ್ಚೆಯಾಗುತ್ತಿದೆ.

ಹೀಗೆ, ಗೆದ್ದ ಅಭ್ಯರ್ಥಿ ಕಷ್ಟಕ್ಕೆ ಒದಗಿಲ್ಲ ಎಂಬ ಸಿಟ್ಟಿನಲ್ಲಿರುವ ಈ ಕ್ಷೇತ್ರದ ಮತದಾರರು ಶ್ರೀರಾಮುಲು ಅವರನ್ನು ಈ ಸಲ ನಿಜವಾಗಿಯೂ ದೂರ ತಳ್ಳುವರೇ ಎಂಬ ಪ್ರಶ್ನೆಯೆದ್ದಿದೆ. ಅದೇ ನಿಜವಾದರೆ ಮೊಳಕಾಲ್ಮೂರಿನಲ್ಲಿ ಬಿಜೆಪಿ ಮಂಡಿಯೂರಲಿದೆ. ಸ್ಥಳೀಯ ಅಭ್ಯರ್ಥಿ ಪಾಲಿಗೆ ಇದೆಲ್ಲ ಸನ್ನಿವೇಶ ವರವಾದರೆ ಹೊಸ ಗಾಳಿ ಬೀಸಲಿದೆ ಎಂಬ ನಿರೀಕ್ಷೆಯೂ ಜನರಲ್ಲಿದೆ.

ಜಾತಿ ಸಮೀಕರಣ

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಶೇ.39.04ರಷ್ಟು ಪರಿಶಿಷ್ಟ ಪಂಗಡದ ಮತಗಳಿವೆ. ಪರಿಶಿಷ್ಟ ಜಾತಿಯ ಮತಗಳು ಶೇ. 20.75.

ಕ್ಷೇತ್ರದ ಒಟ್ಟು ಮತದಾರರು -2,41,323

ಪುರುಷರು -1,21,816

ಮಹಿಳೆಯರು -1,19,495

ಇತರ -12

ಜಾತಿ ಲೆಕ್ಕಾಚಾರ

 ಪರಿಶಿಷ್ಟ ಪಂಗಡ -90,803

 ಪರಿಶಿಷ್ಟ ಜಾತಿ -48,262

ಮುಸ್ಲಿಮ್ -12,327

Similar News