2007ರ ಟ್ವೆಂಟಿ-20 ವಿಶ್ವಕಪ್ ಫೈನಲ್ ನಲ್ಲಿ ಮಿಂಚಿದ್ದ ಜೋಗಿಂದರ್ ಶರ್ಮಾ ನಿವೃತ್ತಿ ಘೋಷಣೆ

Update: 2023-02-03 10:50 GMT

ಹೊಸದಿಲ್ಲಿ: ದಕ್ಷಿಣ ಆಫ್ರಿಕಾದಲ್ಲಿ 2007 ರಲ್ಲಿ ನಡೆದ ಮೊದಲ ಆವೃತ್ತಿಯ ಟ್ವೆಂಟಿ-20 ವಿಶ್ವಕಪ್‌ ಫೈನಲ್ ನಲ್ಲಿ ಪಾಕ್ ಬ್ಯಾಟರ್ ಮಿಸ್ಬಾವುಲ್ ಹಕ್ ವಿಕೆಟನ್ನು ಪಡೆದು ಭಾರತವು  ಐದು ರನ್‌ಗಳಿಂದ ರೋಚಕವಾಗಿ ಗೆಲ್ಲಲು ನೆರವಾಗಿದ್ದ  ಭಾರತದ ವೇಗಿ ಜೋಗಿಂದರ್ ಶರ್ಮಾ ಶುಕ್ರವಾರ ನಿವೃತ್ತಿ ಘೋಷಿಸಿದರು.

ಜೋಹಾನ್ಸ್‌ಬರ್ಗ್‌ನಲ್ಲಿ  ನಡೆದ ಫೈನಲ್ ಪಂದ್ಯದಲ್ಲಿ ಪಾಕ್ ಗೆಲುವಿಗೆ ಅಂತಿಮ ಓವರ್‌ನಲ್ಲಿ 13 ರನ್‌ ಅಗತ್ಯವಿತ್ತು. ಆಗ ನಾಯಕ ಧೋನಿ ಅವರು ಶರ್ಮಾಗೆ ಬೌಲಿಂಗ್ ಮಾಡಲು ಅವಕಾಶ ನೀಡಿದರು.  ಪಾಕ್ ಗೆ 4 ಎಸೆತಗಳಲ್ಲಿ 6 ರನ್ ಅಗತ್ಯವಿದ್ದಾಗ ಮಿಸ್ಬಾ ವಿಕೆಟನ್ನು ಉರುಳಿಸಿದ್ದ ಶರ್ಮಾ ಭಾರತಕ್ಕೆ ರೋಚಕ ಜಯ ತಂದುಕೊಟ್ಟಿದ್ದರು. ಶರ್ಮಾ ಎಸೆತವನ್ನು ಸ್ಕೂಪ್ ಮಾಡಲು ಹೋದ ಮಿಸ್ಬಾ ಅವರು  ಶ್ರೀಶಾಂತ್ ಗೆ  ಶಾರ್ಟ್ ಫೈನ್-ಲೆಗ್‌ನಲ್ಲಿ ಸರಳ ಕ್ಯಾಚ್ ನೀಡಿದ್ದರು.

39 ವರ್ಷದ ಶರ್ಮಾ ಪ್ರಸ್ತುತ ಹರ್ಯಾಣ ಪೊಲೀಸ್‌ ಇಲಾಖೆಯಲ್ಲಿ ಡಿವೈ ಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

 “2002-2017 ರವರೆಗಿನ ನನ್ನ ಪ್ರಯಾಣವು ನನ್ನ ಜೀವನದ ಅತ್ಯಂತ ಅದ್ಭುತವಾದ ವರ್ಷವಾಗಿದೆ ಏಕೆಂದರೆ ಉನ್ನತ ಮಟ್ಟದ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸುವುದು  ಗೌರವವಾಗಿದೆ.  ಬಿಸಿಸಿಐ, ಹರ್ಯಾಣ ಕ್ರಿಕೆಟ್ ಸಂಸ್ಥೆ, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹರ್ಯಾಣ ಸರಕಾರ ನನಗೆ ನೀಡಿದ ಅವಕಾಶಗಳಿಗೆ ನಾನು ಕೃತಜ್ಞನಾಗಿದ್ದೇನೆ'' ಎಂದು ಶರ್ಮಾ ಹೇಳಿದರು.

ರೋಹ್ಟಕ್‌ ಮೂಲದ ಶರ್ಮಾ ಅವರು ಹರ್ಯಾಣ ಪರ ದೇಶೀಯ ಕ್ರಿಕೆಟ್‌ನಲ್ಲಿ ಆಡಿದ್ದಾರೆ. 2004 ರಲ್ಲಿ ಚಟ್ಟೋಗ್ರಾಮ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಏಕದಿನ  ಪಂದ್ಯದಲ್ಲಿ  ಅಂತರಾಷ್ಟ್ರೀಯ ಕ್ರಿಕೆಟಿಗೆ ಚೊಚ್ಚಲ ಪ್ರವೇಶ ಮಾಡಿದರು. ಅವರು ರಾಷ್ಟ್ರೀಯ ತಂಡಕ್ಕಾಗಿ 4 ಏಕದಿನ ಹಾಗೂ 4 ಟಿ-20 ಪಂದ್ಯ ಗಳನ್ನು ಆಡಿದರು, ಐದು ವಿಕೆಟ್‌ಗಳನ್ನು ಪಡೆದರು. 2007 ರ ಟಿ20 ವಿಶ್ವಕಪ್ ಫೈನಲ್ ರಾಷ್ಟ್ರೀಯ ತಂಡಕ್ಕೆ ಅವರ ಕೊನೆಯ ಪಂದ್ಯವಾಗಿತ್ತು.

Similar News